Get Updates
Get notified of breaking news, exclusive insights, and must-see stories!

ಕರಾವಳಿ ಕೋಗಿಲೆ ದಿ.ಗುಂಡ್ಮಿ ಕಾಳಿಂಗ ನಾವಡ ನೆನಪು

ಇಂದು, ಜೂನ್ 6, ರಸರಾಗ ಚಕ್ರವರ್ತಿ ಶ್ರೀ ಕಾಳಿಂಗ ನಾವಡರ ಜನುಮ ದಿನ. 'ಯಕ್ಷಗಾನ' ಎಂಬ ಪದವನ್ನು ಕೇಳಿದಾಗ ಭಾಗವತ ದಿ.ಗುಂಡ್ಮಿ ಕಾಳಿಂಗ ನಾವಡರು (1958-1990 - 32 ವರ್ಷ) ನೆನಪಾಗದೆ ಇರರು. ಯಕ್ಷಗಾನ ಹಾಗೂ ಭಾಗವತಿಕೆಯನ್ನು ತೀರಾ ಕಡಿಮೆ ಸಮಯದಲ್ಲಿ ಆಕಾಶದೆತ್ತರಕ್ಕೆ ಏರಿಸಿದ ಯುಗಪ್ರವರ್ತಕ ಕಲಾವಿದ ಕಾಳಿಂಗ ನಾವಡರು. ಅವರು ಇಹಲೋಕ ತ್ಯಜಿಸಿ ಸುಮಾರು ಕಾಲು ಶತಮಾನಗಳೇ ಕಳೆದರೂ, ಇಂದಿಗೂ ಅವರ ಭಾಗವತಿಕೆಯನ್ನು ಕೇಳಿದರೆ ಮೈಯೆಲ್ಲಾ ರೋಮಾಂಚಿತವಾಗುತ್ತದೆ.

ದಿ.ಜಿ ಆರ್ ಕಾಳಿಂಗ ನಾವಡರು ಜೂನ್ 6, 1958ರಲ್ಲಿ ಶ್ರೀಮತಿ ಪದ್ಮಾವತಿ ಹಾಗೂ ಶ್ರೀ ರಾಮಚಂದ್ರ ನಾವಡರ ಐದನೇ ಪುತ್ರನಾಗಿ ಉಡುಪಿ ಜಿಲ್ಲೆಯ, ಉಡುಪಿ ತಾಲೂಕಿನ ಸಾಲಿಗ್ರಾಮ ಸಮೀಪದ ಗುಂಡ್ಮಿಯಲ್ಲಿ ಜನಿಸಿದರು. ಇವರ ತಂದೆ 1960 - 80ರ ದಶಕದಲ್ಲಿ ಪ್ರಸಿದ್ದ ಭಾಗವತರಾಗಿದ್ದರು. ತಮ್ಮ ತಂದೆಯವರಿಂದ ಶಿಕ್ಷಣ ಪಡೆದ ಇವರು 'ಹೂವಿನ ಕೋಲು', 'ಜಾಪು', 'ಚಾಪು' ಗಳ ಮೂಲಕ ತಮ್ಮದೇ ಆದ ಪ್ರಯೋಗಗಳನ್ನು ಮಾಡಿ ಯಶಸ್ವಿಯಾದರು. 1983ರಲ್ಲಿ ವಿಜಯಶ್ರೀಯವರನ್ನು ಮದುವೆಯಾದ ಕಾಳಿಂಗ ನಾವಡರಿಗೆ ಆಗ್ನೇಯ ನಾವಡ ಎಂಬ ಮಗನಿದ್ದಾರೆ.

ನಂತರ ರಾಮಚಂದ್ರ ನಾವಡರು, ಕಾಳಿಂಗ ನಾವಡರನ್ನು ಆಗಿನ ಪ್ರಸಿದ್ದ ಭಾಗವತರಾಗಿದ್ದ ಶ್ರೀ ನಾರಣಪ್ಪ ಉಪ್ಪೂರು (1918-1984) ರವರ ಬಳಿ ಸೇರಿಸಿದರು. ಆ ಚಿಕ್ಕ ವಯಸ್ಸಿನಲ್ಲಿಯೇ ಕಾಳಿಂಗ ನಾವಡರಲ್ಲಿ ಉಜ್ವಲವಾದ ಭವಿಷ್ಯವಿರುವುದನ್ನು ಕಂಡ ನಾರಣಪ್ಪ ಉಪ್ಪೂರು ರವರು ತಮ್ಮ ಅನುಭವವನ್ನೆಲ್ಲ ಧಾರೆಯೆರೆದರು.[ನಾವಡ ಯಶೋಗಾಥೆ ಸಾಕ್ಷ್ಯಚಿತ್ರ]

ಶ್ರೀ ನಾರಣಪ್ಪ ಉಪ್ಪೂರುರವರು ತಮ್ಮ ಸಾಲಿಗ್ರಾಮದ ಹಂಗಾರಕಟ್ಟೆಯ 'ಯಕ್ಷ ಕಲಾ ಕೇಂದ್ರ-ಭಾಗವತ ತರಬೇತಿ ಕೇಂದ್ರ'ದಲ್ಲಿ ಕಾಳಿಂಗ ನಾವಡರಿಗೆ ಶಿಕ್ಷಣ ನೀಡಿದರು. ತಮ್ಮ ಗುರು ಶ್ರೀ ನಾರಣಪ್ಪ ಉಪ್ಪೂರುರವರ ಜೊತೆಗೂಡಿ, 1972 ರಲ್ಲಿ, ಅಂದರೆ ಕೇವಲ 14 ನೇ ವಯಸ್ಸಿನಲ್ಲಿ ಮುಖ್ಯ ಭಾಗವತರಾಗಿ ಕೋಟ ಶ್ರೀ ಅಮೃತೇಶ್ವರಿ ಮೇಳದಿಂದ ತಮ್ಮ ಯಕ್ಷಕಲಾ ಸೇವೆ ಆರಂಭಿಸಿದ ನಾವಡರು, ನಂತರ 1977 ರಲ್ಲಿ ಶ್ರೀ ವಿಜಯಶ್ರೀ ಮೇಳ (ಶ್ರೀ ಅನಂತಪದ್ಮನಾಭ ಯಕ್ಷಗಾನ ಮಂಡಳಿ) ಪೆರ್ಡೂರು, ನಂತರ 1978 ರಿಂದ 1990 ರವರೆಗೆ ಶ್ರೀ ಗುರುಪ್ರಸಾದಿತ ಯಕ್ಷಗಾನ ಮಂಡಳಿ-ಸಾಲಿಗ್ರಾಮ ಮೇಳದಲ್ಲಿ ತಮ್ಮ ಕಲಾಸೇವೆಯನ್ನು ಮುಂದುವರೆಸಿದರು.

ನವೆಂಬರ್ 1988 ರಲ್ಲಿ ಬಹರೈನ್ನಲ್ಲಿ ನಡೆದ ಕನ್ನಡ ಕೂಟದ ಸಮಾರಂಭದ ಯಕ್ಷಗಾನದಲ್ಲಿ ಕಾಳಿಂಗ ನಾವಡರ ಭಾಗವತಿಕೆ ಎಲ್ಲರ ಮನ ಸೂರೆಗೊಂಡಿತ್ತು. ಕಾಳಿಂಗ ನಾವಡರು ಹಾಗೂ ಚಿಟ್ಟಾಣಿ ರಾಮಚಂದ್ರ ಹೆಗ್ಗಡೆಯವರು, ಆ ಕಾಲದಲ್ಲೇ ಮುಂಬಯಿಗೆ ಹೋಗಿ, ವರ್ಷವೊಂದರಲ್ಲಿ 'ಭಸ್ಮಾಸುರ ಮೋಹಿನಿ' ಪ್ರಸಂಗವೊಂದನ್ನೇ ನಲವತ್ತಕ್ಕೂ ಹೆಚ್ಚು ಬಾರಿ ಆಡಿ, ಯಕ್ಷಗಾನಕ್ಕೆ ಅಷ್ಟೇನೂ ಆಸಕ್ತಿಯಿಲ್ಲದಿದ್ದ ಮುಂಬಯಿಯಲ್ಲಿ, ಯಕ್ಷಗಾನಕ್ಕೊಂದು ಸ್ಪಷ್ಟ ನೆಲೆ ಕಲ್ಪಿಸಿದರು. ನಾವಡರ 'ಎಲ್ಲೆಲ್ಲೂ ಸೊಬಗಿದೆ, ಎಲ್ಲೆಲ್ಲೂ ಸೊಗಸಿದೆ', 'ನೀಲ ಗಗನದೊಳು ಮೇಘಗಳ ಕಂಡಾಗಲೇ ನವಿಲು ಕುಣಿಯುತಿದೆ' ಮುಂತಾದ ಪದ್ಯಗಳನ್ನು ಕೇಳಿದಾಗ ಮೈ ನವಿರೇಳುತ್ತದೆ.

Yakshagana maestro 'Karavali Kogile' Kalinga Navada Birthday

ಯಕ್ಷಗಾನಕ್ಕೆಹೊಸ ಭಾಷ್ಯ : ಯಾವುದೇ ಉನ್ನತ ಶಿಕ್ಷಣ ಇಲ್ಲದಿದ್ದ ನಾವಡರು ಶಿವರಂಜಿನಿ, ಚಕ್ರವಾಕ, ರೇವತಿ, ಕಲಾವತಿ, ಚಾಂದ್, ಬಿಹಾಗ್ ಮುಂತಾದ ರಾಗಗಳನ್ನು ಯಕ್ಷಗಾನಕ್ಕೆ ಅಳವಡಿಸಿ, ತಮ್ಮ ಕಂಠಸಿರಿಯಿಂದ ಯಕ್ಷಗಾನಕ್ಕೆ ಹೊಸ ಭಾಷ್ಯ ಬರೆದದ್ದಲ್ಲದೆ, ಅಮೃತಮತಿ, ಕಾಂಚನಶ್ರೀ, ವಿಜಯಶ್ರೀ, ರೂಪಶ್ರೀ, ಭಾಗ್ಯಶ್ರೀ, ನಾಗಶ್ರೀ ಮುಂತಾದ ಪ್ರಸಿದ್ದ ಯಕ್ಷಗಾನ ಪ್ರಸಂಗಗಳನ್ನು ಛಂದೋಬದ್ದವಾಗಿ, ಮನಮೋಹಕವಾಗಿ ರಚಿಸಿದ್ದಾರೆ.

ಅದರಲ್ಲೂ 'ನಾಗಶ್ರೀ' ಪ್ರಸಂಗವಂತೂ 2,000 ಕ್ಕಿಂತಲೂ ಹೆಚ್ಚು ಪ್ರದರ್ಶನಗಳನ್ನು ಕಂಡು ದಾಖಲೆಯನ್ನೇ ನಿರ್ಮಿಸಿತು. ಇವರು ರಚಿಸಿದ ಪ್ರಸಂಗಗಳನ್ನು ಈಗಲೂ ವಿವಿಧ ಮೇಳಗಳು ಪ್ರದರ್ಶಿಸುತ್ತಿವೆ. ಅತೀ ಚಿಕ್ಕ ವಯಸ್ಸಿನಲ್ಲಿಯೇ, ಅಂದರೆ ಕೇವಲ 14-15 ನೇ ವಯಸ್ಸಿನಲ್ಲಿಯೇ ಯಕ್ಷಗಾನ ಭಾಗವತಿಕೆಯ ಸಾರಥ್ಯ ವಹಿಸಿ ಅಸಾಧ್ಯವೆನಿಸುವುದನ್ನು ಸಾಧ್ಯ ಮಾಡಿ ತೋರಿಸಿದ್ದು ಒಂದು ಸರ್ವಕಾಲಿಕ ದಾಖಲೆ. ಜೀವಮಾನವಿಡೀ ಪ್ರಯತ್ನಿಸಿದರೂ ಸಾಧಿಸಲು ಅಸಾಧ್ಯವಾದುದನ್ನು ತಮ್ಮ ವೃತ್ತಿ ಜೀವನದ ಕೇವಲ 15 -16 ವರ್ಷಗಳಲ್ಲಿ ಸಾಧಿಸಿದ ಅಸಾಮಾನ್ಯ ವ್ಯಕ್ತಿ ನಾವಡರು.

ಕಾಳಿಂಗ ನಾವಡರ ಕೆಲವು ಪ್ರಸಿದ್ದ ಯಕ್ಷಗಾನ ಪ್ರಸಂಗಗಳು: ಅಮೃತಮತಿ, ಕಾಂಚನಶ್ರೀ, ವಿಜಯಶ್ರೀ, ರೂಪಶ್ರೀ, ಭಾಗ್ಯಶ್ರೀ, ನಾಗಶ್ರೀ, ಶ್ರೀ ಕೃಷ್ಣ ಸಾರಥ್ಯ, ಬಬ್ರುವಾಹನ, ಭಸ್ಮಾಸುರ ಮೋಹಿನಿ, ಬಾಲ ಸುಧೀರ, ಮಾಗಧ ವಧೆ, ಗದಾಯುದ್ಧ, ಚಕ್ರವ್ಯೂಹ, ಭೀಷ್ಮ ವಿಜಯ, ರಾಣಿ ಶಶಿಪ್ರಭೆ, ಕನಸ ಕಂಡ ಕಂಸ, ದ್ರೌಪದಿ ಪ್ರತಾಪ, ಚೆಲುವೆ ಚಿತ್ರಾವತಿ, ಕೀಚಕ ವಧೆ, ಶನಿ ಮಹಾತ್ಮೆ ಮುಂತಾದವು....ಕಾಳಿಂಗ ನಾವಡರ ಹಾಡುಗಾರಿಕೆಯ ಧ್ವನಿಸುರುಳಿಗಳನ್ನು ಭಾರತದ ಹೆಸರಾಂತ ಧ್ವನಿಮುದ್ರಣ ಸಂಸ್ಥೆಯಾದ ಟಿ-ಸೀರೀಸ್, ಆನಂದ್ ಆಡಿಯೋ ಸೇರಿದಂತೆ ಹಲವಾರು ಸಂಸ್ಥೆಗಳು ಹೊರತಂದಿವೆ.

ಸಾಮಾನ್ಯವಾಗಿ ಭಾಗವತರು ಎಷ್ಟೇ ಚೆನ್ನಾಗಿ ಹಾಡಿದರೂ, ವೇಷಧಾರಿಗಳಿಗಿಂತ ಹೆಚ್ಚಿನ ಜನಪ್ರಿಯತೆ-ಮನ್ನಣೆ ಪಡೆಯುವುದು ತೀರಾ ಕಷ್ಟ. ಆದರೆ ಕಾಳಿಂಗ ನಾವಡರು ತೀರಾ ಕಡಿಮೆ ಸಮಯದಲ್ಲಿ, ತೀರಾ ಚಿಕ್ಕ ಪ್ರಾಯದಲ್ಲಿ, ಬ್ರಹ್ಮಾಂಡ ಜನಪ್ರಿಯತೆಯನ್ನು ಗಳಿಸಿದರು. ಅವರನ್ನು ನೋಡಲು, ಅವರ ಭಾಗವತಿಕೆಯನ್ನು ಕೇಳಲೆಂದೇ ಕಲಾಭಿಮಾನಿಗಳು ಬರುತ್ತಿದ್ದರು. ಯಕ್ಷಗಾನ ಕಲೆಯ ಮೇಲಿನ ಶ್ರದ್ಧೆ, ಭಕ್ತಿ, ಶಿಸ್ತು, ನಿರಹಂಕಾರಗಳು ನಾವಡರನ್ನು ಕೀರ್ತಿಯ ಶಿಖರಕ್ಕೆ ಏರುವಂತೆ ಮಾಡಿತು.

ನಾವಡರ ಭಾಗವತಿಕೆ ಕೇಳಲೆಂದೇ ಅವರ ಮೇಳ ಹೋದ ಕಡೆಗೆಲ್ಲಾ ಹೋಗುವ ಯಕ್ಷಪ್ರಿಯರಿದ್ದರು ಎಂದರೆ, ಅವರ ಆ ಮಧುರ ಗಾಯನದ ಮೋಡಿ ಎಷ್ಟರ ಮಟ್ಟಿಗೆ ಎಲ್ಲರ ಮನಸೂರೆಗೊಂಡಿತ್ತು ಎಂಬುದನ್ನು ಊಹಿಸಬಹುದು. ಸಿನೆಮಾ ಹಾಗೂ ಟಿ. ವಿ ಮತ್ತಿತರ ಮನೋರಂಜನಾ ಮಾಧ್ಯಮಗಳು ತಮ್ಮ ಜಾಲವನ್ನು ವೇಗವಾಗಿ ಪಸರಿಸುತ್ತಿರುವ ಸಂದರ್ಭದಲ್ಲಿಯೇ, ತಮ್ಮ ಕಂಚಿನ ಕಂಠದಿಂದ ಯಕ್ಷಪ್ರೇಮಿಗಳನ್ನು ಸೂಜಿಗಲ್ಲಿನಂತೆ ಆಕರ್ಷಿಸಿದ್ದಲ್ಲದೆ, ಅವರನ್ನು ಶಾಶ್ವತವಾಗಿ ಹಿಡಿದಿಟ್ಟುಕೊಂಡ ಕೀರ್ತಿ ನಾವಡರದು.

ಕಾಳಿಂಗ ನಾವಡರು ಅತೀ ಚಿಕ್ಕ ವಯಸ್ಸಿನಲ್ಲಿ, ಅಂದರೆ ತಮ್ಮ ಒಟ್ಟು ಬದುಕಿನ 32ನೆ ವಯಸ್ಸಿನಲ್ಲಿ ಮೇ 27, 1990ರಂದು ರಸ್ತೆ ಅಪಘಾತವೊಂದಲ್ಲಿ ವಿಧಿವಶರಾದರು. ಯಕ್ಷಲೋಕ ಕಂಡು ಕೇಳರಿಯದಿದ್ದ ಕೋಗಿಲೆಯ ಕಂಠ ಸ್ತಬ್ಧವಾಯಿತು. ಇಂದಿಗೂ ಪ್ರತಿಯೊಬ್ಬ ಯಕ್ಷಪ್ರೆಮಿಯ ಹೃದಯದ ಬಡಿತದೊಂದಿಗಿರುವ ಕಾಳಿಂಗ ನಾವಡರು ಎಂದೆಂದಿಗೂ ಅಮರ.

ಇಂದು ಅವರಿರುತ್ತಿದ್ದರೆ, ಊಹಿಸಲೂ ಅಸಾಧ್ಯವಾದ 'ಯಕ್ಷ ದಾಖಲೆಗಳನ್ನು' ಅವರು ಮಾಡಿರುತ್ತಿದ್ದರು ಎಂಬುದರಲ್ಲಿ ಸಂಶಯವೇ ಇಲ್ಲ ಹಾಗೂ ನಾವಡರ ಹೆಸರು ಅಂತರ ರಾಷ್ಟ್ರೀಯ ಮಟ್ಟದಲ್ಲೂ ಮಿಂಚುತ್ತಿರುತ್ತಿತ್ತು. ಆದರೆ ಯಕ್ಷಪ್ರೇಮಿಗಳ ದೌರ್ಭಾಗ್ಯ, ಅವರನ್ನು ನಾವು ಬೇಗ ಕಳೆದುಕೊಳ್ಳುವಂತಾಯಿತು. ತಮ್ಮ ಗಾನದಿಂದ ನಮಗೆಲ್ಲರಿಗೂ ಸಂತೋಷ, ನೆಮ್ಮದಿ, ಮನರಂಜನೆಯನ್ನು ನೀಡಿದ/ನೀಡುತ್ತಿರುವ ಶ್ರೀ ಕಾಳಿಂಗ ನಾವಡರಿಗೆ ನಾವು ಚಿರಋಣಿ.

ಯಕ್ಷಕರ್ಮಿ-ಕಿರುತೆರೆ ನಿರ್ದೇಶಕ ಶ್ರೀ ರಮೇಶ್ ಬೇಗಾರ್ ರವರ ಸಾರಥ್ಯದ 'ಕಾಳಿಂಗ ನಾವಡ ಸಾಂಸ್ಕೃತಿಕ ಪ್ರತಿಷ್ಠಾನ, ಶೃಂಗೇರಿ' ಶ್ರೀ ಕಾಳಿಂಗ ನಾವಡರ ಹಾಗೂ ಯಕ್ಷಗಾನ ಕಲೆಯ ಸೇವೆಯಲ್ಲಿ ತೊಡಗಿದೆ. ಯಕ್ಷಗಾನ ಹಾಗೂ ನಾಟಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಬೆಂಗಳೂರಿನ "ಕಲಾ ಕದಂಬ ಆರ್ಟ್ ಸೆಂಟರ್" ಸಂಸ್ಥೆ ಯಕ್ಷ ಸಾಧಕರಿಗೆ ಪ್ರತಿ ವರ್ಷ ‘ಕಾಳಿಂಗ ನಾವಡ' ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+