'ಬೆಂಗಳೂರಲ್ಲಿ ಮಹಿಳಾ ಆಟೋ ಚಾಲಕಿಯರ ಸಂಖ್ಯೆ ಹೆಚ್ಚಾಗಬೇಕು'
ಬೆಂಗಳೂರು, ಏಪ್ರಿಲ್ 07: ಮಹಿಳೆಯರು ತಾವು ಯಾವುದರಲ್ಲೂ ಕಡಿಮೆ ಇಲ್ಲ ಎಂದು ಎಲ್ಲ ಕ್ಷೇತ್ರಗಳಲ್ಲಿ ತೋರಿಸಿಕೊಟ್ಟಿದ್ದಾರೆ. ಪುರುಷರಿಗೆ ಸರಿ ಸಮಾನವಾಗಿ ಕೆಲಸ ಮಾಡುತ್ತಾರೆ. ಮನೆಯ ಜವಾಬ್ದಾರಿ ಜೊತೆಗೆ ಹೊಟ್ಟೆ ತುಂಬಿಸಲು ಅನೇಕ ರಂಗದಲ್ಲಿ ತೊಡಗಿಕೊಂಡಿದ್ದಾರೆ. ಆಟೋ ಚಾಲನೆಯನ್ನೂ ಮಾಡುತ್ತಿರುವ ಮಹಿಳೆಯರ ಸಂಖ್ಯೆ ಹೆಚ್ಚಾಗಬೇಕು. ಬೆಂಗಳೂರಿನಲ್ಲಿ ಮಹಿಳಾ ಆಟೋ ಡ್ರೈವರ್ಸ್‌ಗಳ ಸಂಖ್ಯೆ ಹೆಚ್ಚಾಗಬೇಕು ಇದರಿಂದ ಸುರಕ್ಷತೆ ಹೆಚ್ಚಾಗುತ್ತದೆ ಎಂದು ಶಾಸಕ ಎಸ್.ಸುರೇಶ್ ಕುಮಾರ್ ಅವರು ಹೇಳಿದ್ದಾರೆ.
ನಗರದಲ್ಲಿ ಸೋಮವಾರ ಬಿ.ಪ್ಯಾಕ್ ಹಾಗೂ ಆದರ್ಶ ಆಟೋ ಸಹಯೋಗದಲ್ಲಿ ನಡೆದ 'ಮಹಿಳೆಯರಿಗೆ ಉಚಿತ ಆಟೋ ಚಾಲನಾ ತರಬೇತಿ' ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮಹಿಳಾ ಆಟೋ ಚಾಲಕಿಯರ ಸಂಖ್ಯೆ ಹೆಚ್ಚಾದರೆ, ಬೆಂಗಳೂರಿನಲ್ಲಿ ಮಹಿಳೆಯರು ಇನ್ನಷ್ಟು ಸುರಕ್ಷಿತವಾಗಿ ಆಟೋ ಸಂಚಾರ ಮಾಡಲು ಮುಂದಾಗುತ್ತಾರೆ ಎಂದು ಅವರು ಅಭಿಪ್ರಾಯಪಟ್ಟರು.

ಬೆಂಗೂರಿನಲ್ಲಿ ಆಟೋ ರೀಕ್ಷಾ ಬಳಸುವವರ ಪೈಕಿ ಮಹಿಳೆಯರೇ ಹೆಚ್ಚು. ಆದರೆ, ಕೆಲವೊಂದು ಸಂದರ್ಭದಲ್ಲಿ ಮಹಿಳೆಯರ ಮೇಲೆ ಕಿರುಕುಳದಂತ ಸುದ್ದಿ ಕೇಳಿ ಬರುತ್ತವೆ, ಮಹಿಳೆಯರೇ ಆಟೋ ಚಾಲನೆಗೆ ಇಳಿದರೆ, ಇತರೆ ಮಹಿಳೆಯರು ಮತ್ತು ಮಕ್ಕಳು ಹೆಚ್ಚು ಸುರಕ್ಷಿತವಾಗಿ ಹಾಗೂ ಧೈರ್ಯವಾಗಿ ಯಾವ ಸಂದರ್ಭದಲ್ಲಾದರೂ ಆಟೋದಲ್ಲಿ ಸಂಚಾರ ಮಾಡಲು ಮುಂದಾಗುತ್ತಾರೆ. ಹೀಗಾಗಿ ಮಹಿಳೆಯರು ಹೆಚ್ಚು ಹೆಚ್ಚು ಆಟೋ ಚಾಲನಾ ವೃತ್ತಿಗೆ ಆಗಮಿಸಲಿ. ಇದರಿಂದ ಸ್ತ್ರೀ ಆರ್ಥಿಕವಾಗಿಯೂ ಸಬಲೀಕರಣರಾಗಲಿದ್ದಾರೆ ಎಂದು ತಿಳಿಸಿದರು.
ಇಂದು ಮಹಿಳೆ ಎಲ್ಲಾ ಕ್ಷೇತ್ರದಲ್ಲೂ ತನ್ನ ಛಾಪು ಮೂಡಿಸಿದ್ದಾರೆ. ಆಟೋ ಚಾಲನೆಯಲ್ಲೂ ಯಾರಿಗೇನು ಕಡಿಮೆ ಇಲ್ಲದಂತೆ ಮುಂದಾಗುತ್ತಿರುವುದು ಅಭಿನಂದನಾರ್ಹ. ಆಸಕ್ತ ಮಹಿಳೆಯರಿಗೆ ಉಚಿತವಾಗಿ ತರಬೇತಿ ನೀಡುವಂತಹ ಕೆಲಸ ಮಾಡುತ್ತಿರುವ ಬಿ.ಪ್ಯಾಕ್ ಮತ್ತು ಆದರ್ಶ ಆಟೋ ಸಂಸ್ಥೆಯ ಕೆಲಸ ಶ್ಲಾಘಿಸುವೆ, ಈ ಉಚಿತ ತರಬೇತಿ ಕಾರ್ಯಕ್ರಮ ಇತರೆ ಭಾಗಗಲ್ಲೂ ಪ್ರಾರಂಭಿಸಲಿ ಎಂದು ಹೇಳಿದರು.
ಆಟೋ ರೀಕ್ಷಾ ತರಬೇತಿ ಕಾರ್ಯಕ್ರಮವನ್ನು ಬಿ.ಪ್ಯಾಕ್ ಸದಸ್ಯರಾದ ಮಿಮಿ ಪಾರ್ಥಸಾರಥಿ, ಅನಿಶಾ ಭಂಡಾರಿ, ಡಾ. ಸಂಪತ್ ಸಿ, ರಾಘವೇಂದ್ರ ಪೂಜಾರಿ, ದೇವಿಕಾ ರಾಜ್ ಮತ್ತಿತರರು ವೀಕ್ಷಿಸಿದರೆ. ಮಹಿಳೆಯರಿಗೆ ಶುಭಕೋರಿದರು.
ಆಟೋ ರೀಕ್ಷಾ ದರ ಏರಿಕೆ ಆಗುತ್ತಾ?
ಶಕ್ತಿ ಯೋಜನೆಯಿಂದ ಪ್ರಯಾಣಿಕರನ್ನು ಕಳೆದುಕೊಂಡಿದ್ದ ಆಟೋ ರಿಕ್ಷಾ ಚಾಲಕರು, ಇಂಧನ ಸೇರಿದಂತೆ ಅಗತ್ಯ ವಸ್ತುಗಳ ದರ ಏರಿಕೆಯಿಂದ ಕಂಗಾಲಾಗಿದ್ದರು. ಈ ಸಂಬಂಧ ಆಟೋ ಚಾಲಕರ ಕೆಲವು ಸಂಘಟನೆಗಳು ದರ ಏರಿಕೆ ಮಾಡುವಂತೆ ಒತ್ತಾಯಿಸಿದ್ದವರು. ಇದಕ್ಕೆ ಅವರ ಸಂಘಟನೆಗಳಲ್ಲಿಯೇ ಪರ ವಿರೋಧ ಚರ್ಚೆ ಆಗಿತ್ತು. ಶೀಘ್ರವೇ ಮತ್ತೊಂದು ಸುತ್ತಿನ ಸಭೆ ನಡೆಸಿ ಚರ್ಚಿಸಿ ಆಟೋ ದರ ಹೆಚ್ಚಳದ ಬಗ್ಗೆ ತಿರ್ಮಾನ ಪ್ರಕಟಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.












Click it and Unblock the Notifications