ಬಾಯ್‌ಫ್ರೆಂಡ್ ಬೆಂಗಳೂರು ಬಿಟ್ಟು ಹೋಗದಂತೆ ತಡೆಯಲು ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಕರೆ ಮಾಡಿದ ಯುವತಿ; ಮುಂದೇನಾಯ್ತು?
ಬೆಂಗಳೂರು, ಜುಲೈ. 07: ಬಾಯ್‌ಫ್ರೆಂಡ್ ತನ್ನನ್ನು, ತಾನಿರುವ ಊರನ್ನು ಬಿಟ್ಟು ಹೋಗದಂತೆ ತಡೆಯಲು ಪ್ರಿಯತಮೆ ಹಲವು ಪ್ಲ್ಯಾನ್‌ಗಳನ್ನು ಮಾಡುತ್ತಾರೆ ಎಂಬುದನ್ನು ಕೇಳಿದ್ದೇವೆ. ನೋಡಿದ್ದೇವೆ. ಆದರೆ, ಸಿಲಿಕಾನ್ ಸಿಟಿಯ ಪ್ರೇಮಿಯೊಬ್ಬರು ತನ್ನ ಬಾಯ್‌ಫ್ರೆಂಡ್ ಊರು ಬಿಟ್ಟು ಹೋಗುವುದನ್ನು ತಡೆಯಲು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಕರೆ ಮಾಡಿದ್ದಾರೆ!.
ಹೌದು... ಪುಣೆಯ 29 ವರ್ಷದ ಯುವತಿಯೊಬ್ಬರು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಸಹಾಯವಾಣಿಗೆ ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದ್ದಾರೆ. ಆ ವ್ಯಕ್ತಿಯ ಬ್ಯಾಗ್‌ನಲ್ಲಿ ಬಾಂಬ್ ಇದೆ ಎಂದು ಆರೋಪಿಸಿದ್ದಾರೆ. ಈ ಮೂಲಕ ತನ್ನ ಗೆಳೆಯ ಮುಂಬೈಗೆ ವಿಮಾನ ಹತ್ತುವುದನ್ನು ತಡೆಯುವುದು ಆಕೆಯ ಉದ್ದೇಶವಾಗಿತ್ತು. ಆದರೆ, ಅದು ಉಲ್ಟಾ ಹೊಡೆದಿದೆ.

ಹುಸಿ ಬಾಂಬ್ ಕರೆ ಮಾಡಿದ ಕಾರಣ ಕಾನೂನು ತೊಂದರೆಗೆ ಸಿಲುಕಿದ್ದು, ಪ್ರಕರಣ ದಾಖಲಾಗಿದೆ. ಜೂನ್ 26 ರಂದು ನಡೆದ ಈ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸಾರ್ವಜನಿಕ ಕಿರುಕುಳಕ್ಕೆ ಕಾರಣವಾಗುವ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಐಪಿಸಿ ಸೆಕ್ಷನ್ 505 (1) (ಬಿ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ವರದಿಯ ಪ್ರಕಾರ, ಆರೋಪಿ ಯುವತಿಯನ್ನು ಇಂದ್ರ ರಾಜ್ವರ್ ಎಂದು ಗುರುತಿಸಲಾಗಿದೆ. ಬೆಂಗಳೂರಿನಿಂದ ಮುಂಬೈಗೆ ಹೋಗಲು ಉದ್ದೇಶಿಸಿರುವ ತನ್ನ ಗೆಳೆಯ ಮಿರ್ ರಜಾ ಮೆಹದಿ ಅವರನ್ನು ತಡೆಯಲು ಪ್ರಯತ್ನಿಸಿದ್ದಾರೆ. ಆತ ತನ್ನ ಲಗೇಜ್‌ನಲ್ಲಿ ಬಾಂಬ್ ಅನ್ನು ಹೊತ್ತೊಯ್ಯುತ್ತಿದ್ದ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ತನಿಖೆಯ ನಂತರ, ಮಿರ್ ರಜಾ ಮೆಹದಿಯನ್ನು ಸಂಪೂರ್ಣವಾಗಿ ಪರಿಶೀಲಿಸಲಾಗಿದೆ ಆದರೆ ಯಾವುದೇ ಸ್ಫೋಟಕಗಳು ಕಂಡುಬಂದಿಲ್ಲ, ಕರೆ ನಿರ್ದಿಷ್ಟವಾಗಿಲ್ಲ ಎಂದು ಪರಿಗಣಿಸಲಾಗಿದೆ. ಹೆಚ್ಚಿನ ವಿಚಾರಣೆ ಬಳಿಕ ಇಂದ್ರ ರಾಜ್ವರ್ ಮತ್ತು ಮಿರ್ ರಜಾ ಮೆಹದಿ ಇಬ್ಬರೂ ಆ ಸಂಜೆ ವಿಮಾನ ನಿಲ್ದಾಣದಲ್ಲಿ ಹಾಜರಿದ್ದರು. ಮುಂಬೈಗೆ ಪ್ರತ್ಯೇಕ ವಿಮಾನಗಳನ್ನು ಕಾಯ್ದಿರಿಸಿದ್ದರೂ ಸಹ, ಹುಸಿ ಬಾಂಬ್ ಕರೆ ಮಾಡುವ ಮೊದಲು ಅವರು ನಿರ್ಗಮನ ಲಾಂಜ್‌ನಲ್ಲಿ ಮಾತುಕತೆ ನಡೆಸಿದ್ದಾರೆ.

ಹುಸಿ ಬಾಂಬ್ ಕರೆ ಬಳಿಕ ಇಂದ್ರ ರಾಜ್ವರ್ ಅವರನ್ನು ಬಂಧಿಸಲಾಯಿತು ಮತ್ತು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ತನ್ನ ಗೆಳೆಯ ಮಿರ್ ರಜಾ ಮೆಹದಿ ಅವರೊಂದಿಗಿನ ವೈಯಕ್ತಿಕ ಭಿನ್ನಾಭಿಪ್ರಾಯಗಳು ಮತ್ತು ಅವರು ಮುಂಬೈಗೆ ಹೋಗುವುದನ್ನು ತಡೆಯಲು ಇಂತಹ ಕೃತ್ಯ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಈ ವಿಷಯದ ಕುರಿತು ಪೊಲೀಸ್ ತನಿಖೆ ನಡೆಯುತ್ತಿದೆ.












Click it and Unblock the Notifications