ಧರಣಿ ವೇದಿಕೆಯಲ್ಲಿ ಕುಗ್ಗುತ್ತಿರುವ ಯಡಿಯೂರಪ್ಪ ಬಲ
ಬೆಂಗಳೂರು, ನ.15: ಶಾದಿ ಭಾಗ್ಯ ವಿಸ್ತರಣೆ, ಎಪಿಎಲ್ ಗೂ ಪಡಿತರ ವಿಸ್ತರಣೆ ಜತೆಗೆ ತಾಜಾ ಆಗಿ ಅಹಿಂದ ವರ್ಗದ ವಿದ್ಯಾರ್ಥಿಗಳಿಗೆ ಮಾತ್ರ ಸರ್ಕಾರ ಪ್ರವಾಸ ಭಾಗ್ಯ ನೀಡುವುದನ್ನು ವಿರೋಧಿಸಿ ವೀರಾವೇಶದಿಂದ ಹೋರಾಡುತ್ತಿರುವ ಕೆಜೆಪಿಯ ಅದ್ವಿತೀಯ ನಾಯಕ/ ಮಾಜಿ ಸಿಎಂ ಯಡಿಯೂರಪ್ಪ ಅವರ ಬಲ ಕುಗ್ಗುತ್ತಿದೆಯೇ?
ಸಿದ್ದರಾಮಯ್ಯನವರ ರಾಜಕೀಯ-ಪ್ರೇರಿತ ಅಗ್ಗದ ಯೋಜನೆಗಳಿಗೆ ಅವರದೇ ಪಕ್ಷದಿಂದ ವಿರೋಧ ವ್ಯಕ್ತವಾಗುತ್ತಿರುವುದರ ಜತೆಗೆ ಯಡಿಯೂರಪ್ಪ ಅವರೂ ಮಗ್ಗಲು ಮುಳ್ಳಾಗಿ ಪರಿಣಮಿಸಿದ್ದರಿಂದ ಪೊಲೀಸ್ ಬಲ ಪ್ರಯೋಗಿಸಿ ಯಡಿಯೂರಪ್ಪ ಅವರನ್ನು ಮಣಿಸುವ ಯತ್ನ ಜಾರಿಯಟ್ಟಿಲ್ಲಿರುವ ಸಂದರ್ಭದಲ್ಲೇ ಯಡಿಯೂರಪ್ಪ ಅವರೊಗೆ ಅವರದ್ದೇ ಪಕ್ಷದ ನಾಯಕರು ಒಬ್ಬೊಬ್ಬರಾಗಿ ಕೈಕೊಡುತ್ತಿದ್ದಾರೆ.

ಶೇಷಾದ್ರಿ ರಸ್ತೆಯ ಗಾಂಧಿ ಪ್ರತಿಮೆ ಎದುರು ಯಡಿಯೂರಪ್ಪ ಅವರ ಧರಣಿ ವೇದಿಕೆಯಲ್ಲಿ ಬೆರಳೆಣಿಕೆಯೆ ಅತ್ಯಾಪ್ತರನ್ನು ಬಿಟ್ಟರೆ ಬೇರೆ ಯಾರೂ ಸುಳಿಯುತ್ತಿಲ್ಲ. ಇದನ್ನು ಮರೆಮಾಚಲು ಎಂಬಂತೆ ಯಡಿಯೂರಪ್ಪನವರೂ ತಮ್ಮ ಲೊಕೇಶನ್ ಅನ್ನು ಬೆಳಗಾವಿಗೆ ಶಿಫ್ಟ್ ಮಾಡಲು ನಿರ್ಧರಿಸಿದ್ದಾರೆ. ನ. 24ರವರೆಗೆ ಬೆಂಗಳೂರಿನಲ್ಲಿ ಧರಣಿ ನಡೆಸಲಿದ್ದು, ನ. 25ರಿಂದ ವಿಧಾನಸಭೆ ಅಧಿವೇಶನದಲ್ಲಿ ಧರಣಿ ನಡೆಸುತ್ತೇನೆ. ಬೇಡಿಕೆ ಈಡೇರುವವರೆಗೂ ಧರಣಿ ಕೈಬಿಡುವುದಿಲ್ಲ ಎಂದಿದ್ದಾರೆ.
ಇರುವ ನಾಲ್ಕು ಕೆಜೆಪಿ ಶಾಸಕರ ಪೈಕಿ ಮೂವರು ತೋರಿಕೆಗಷ್ಟೇ ಧರಣಿ ಜಾಗಕ್ಕೆ ಬಂದು ಅಟೆಂಡೆನ್ಸ್ ಹಾಕಿಹೋಗಿದ್ದಾರೆ. ಹಿರೇಕೆರೂರು ಶಾಸಕ ಯುಬಿ ಬಣಕಾರ್ ಅವರನ್ನು ಹೊರತುಪಡಿಸಿ ಉಳಿದವರು ತಮ್ಮ ಕ್ಷೇತ್ರಗಳತ್ತ ಅದಾಗಲೇ ಮರಳಿದ್ದಾರೆ. ಅಳಂದ ಶಾಸಕ ಬಿಆರ್ ಪಾಟೀಲ್ ಅವರಂತೂ ಧರಣಿಯತ್ತ ಸುಳಿದೇ ಇಲ್ಲ.
ಇನ್ನು, ಬೀದರ್ ಶಾಸಕ ಗುರುಪಾದಪ್ಪ ನಾಗಮಾರಪಲ್ಲಿ, ಶಹಾಪುರ ಶಾಸಕ ಗುರುಪಾಟೀಲ್ ಹಾಗೂ ಬೈಲಹೊಂಗಲ ಶಾಸಕ ಡಾ ವಿಶ್ವನಾಥ ಪಾಟೀಲ್ ಅವರು ಅಪರೂಪಕ್ಕೊಮ್ಮೆ ಯಡಿಯೂರಪ್ಪ ಜತೆ ಧರಣಿ ಕುಳಿತು ಸಹಮತ ವ್ಯಕ್ತಪಡಿಸಿದ್ದಾರೆ.
ಹಾಗಾಗಿ ಕೆಜೆಪಿ ವತಿಯಿಂದ ಹೋರಾಟ ನಡೆಸುತ್ತಿರುವ ಯಡಿಯೂರಪ್ಪನವರಿಗೆ ಅವರದೇ ಪಕ್ಷದಿಂದ ಹೆಚ್ಚು ಬೆಂಬಲ ವ್ಯಕ್ತವಾಗುತ್ತಿಲ್ಲ ಎಂಬುದು ಎದ್ದುಕಾಣುತ್ತಿದೆ.












Click it and Unblock the Notifications