ಶೀಘ್ರದಲ್ಲೇ ನಾಲ್ಕೈದು ಜನ ಭ್ರಷ್ಟ ಸಚಿವರು ಮತ್ತು 10-15 ಶಾಸಕರ ಹೆಸರು ಬಹಿರಂಗ: ಕೆಂಪಣ್ಣ
ಬೆಂಗಳೂರು ಏಪ್ರಿಲ್ 13: ನಿನ್ನೆ ನಡೆದ ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಪಕ್ಷಗಳು ಸಚಿವ ಕೆ.ಎಸ್. ಈಶ್ವರಪ್ಪ ಅವರ ರಾಜೀನಾಮೆಗೆ ಒತ್ತಾಯಿಸಿದ್ದು ಕೂಡಲೇ ತನಿಖೆ ನಡೆಸಿ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿವೆ. ಈ ನಡುವೆ ಕರ್ನಾಟಕ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಟ್ವೀಟ್ ಮೂಲಕ ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಮಾತ್ರವಲ್ಲದೆ, ಅವರು ಮುಂದಿನ ಮೂರ್ನಾಲ್ಕು ದಿನಗಳಲ್ಲಿ 4-5 ಭ್ರಷ್ಟ ಸಚಿವರು ಮತ್ತು 10-15 ಶಾಸಕರ ಹೆಸರನ್ನು ಬಹಿರಂಗಪಡಿಸುತ್ತೇವೆ. ಇದು ಸಾರ್ವಜನಿಕ ದಾಖಲೆಯಾಗಲಿದೆ. ಸಂತೋಷ್ ಪಾಟೀಲ್ ಸಾವಿಗೆ ಈಶ್ವರಪ್ಪ ಕಾರಣ. ಅವರ ವಿರುದ್ಧ ಕಠಿಣ ಕ್ರಮಕ್ಕೆ ನಾವು ಒತ್ತಾಯಿಸುತ್ತೇವೆ ಎಂದು ಕೆಂಪಣ್ಣ ಹೇಳಿದ್ದಾರೆ.
ಜೊತೆಗೆ ಮೇ 25 ರಿಂದ ಒಂದು ತಿಂಗಳ ಕಾಲ ಎಲ್ಲಾ ಸರ್ಕಾರಿ ಕೆಲಸಗಳನ್ನು ಸ್ಥಗಿತಗೊಳಿಸಲು ಕರ್ನಾಟಕ ಗುತ್ತಿಗೆದಾರರ ಸಂಘ ನಿರ್ಧರಿಸಿದೆ. ಅಧ್ಯಕ್ಷ ಕೆಂಪಣ್ಣ ಮಾತನಾಡಿ, ಜಲಸಂಪನ್ಮೂಲ, ಪಿಡಬ್ಲ್ಯುಡಿ, ಆರೋಗ್ಯ ಇಲಾಖೆಗಳು ಅತ್ಯಂತ ಭ್ರಷ್ಟ ಇಲಾಖೆಗಳಾಗಿವೆ. ಈ ಬಗ್ಗೆ 3-4 ದಿನಗಳಲ್ಲಿ 4-5 ಭ್ರಷ್ಟ ಸಚಿವರು ಮತ್ತು 10-15 ಶಾಸಕರ ಹೆಸರನ್ನು ಬಹಿರಂಗಪಡಿಸುತ್ತೇವೆ. ಈ ಬಗ್ಗೆ ನಮಗೆ ಬೆದರಿಕೆಗಳು ಬರುತ್ತಿವೆ ಎಂದು ಅವರು ಹೇಳಿದ್ದಾರೆ.
ಏಪ್ರಿಲ್ 12ರಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ದ ಶೇಕಡಾ 40ರಷ್ಟು ಕಮಿಷನ್ ಆರೋಪ ಮಾಡಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೊತೆಗೆ ಇವರು ಈ ಬಗ್ಗೆ ಪ್ರಸ್ತಾಪಿಸಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದರು ಎನ್ನುವ ವಿಚಾರ ಅವರ ಸಾವಿನ ಬಳಿಕೆ ತಿಳಿದು ಬಂದಿದೆ.
Karnataka Contractors Association president Kempanna “we will reveal the name of 4-5 highly corrupt ministers and 10-15 MLAs in the next 3-4 days. It will be a public document. Eshwarappa is responsible for Santhosh Patil’s death. We demand strict action against him”.
— DP SATISH (@dp_satish) April 13, 2022
ಉಡುಪಿಯ ಶಾಂಭವಿ ಲಾಡ್ಜ್ ನಲ್ಲಿ ಏಪ್ರಿಲ್ 12ರಂದು ಮಂಗಳವಾರ ಆತ್ಮಹತ್ಯೆಗೆ ಶರಣಾಗಿರುವ ಸ್ಥಿತಿಯಲ್ಲಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಮೃತದೇಹ ಸಿಕ್ಕಿದೆ. ಅಲ್ಲದೆ ಇವರು ನನ್ನ ಸಾವಿಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪನವರೇ ಕಾರಣ ಎಂದು ವಾಟ್ಸಾಪ್ ಸಂದೇಶ ರವಾನಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನು ಮಾಧ್ಯಮಗಳಿಗೂ ಕಳುಹಿಸಿದ್ದು, ನನ್ನ ಪತ್ನಿ ಮಕ್ಕಳಿಗೆ ಸಹಾಯ ಮಾಡಿ ಎಂದು ಪ್ರಧಾನಿ ಮೋದಿ ಹಾಗೂ ಬಿ ಎಸ್ ಯಡಿಯೂರಪ್ಪನವರಿಗೆ ಮನವಿ ಮಾಡಿಕೊಂಡಿದ್ದಾರೆ.

ಸಂತೋಷ ಸಾವಿನ ಬಳಿಕ ಕೆ.ಎಸ್ ಈಶ್ವರಪ್ಪ ಬಂಧನಕ್ಕೆ ಒತ್ತಡ ಹೆಚ್ಚಾಗಿದೆ. ವಿವಿಧ ಸಂಘ-ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು ಬೀದಿಗಳಿದು ಪ್ರತಿಭಟನೆ ಮೂಲಕ ಈಶ್ವರಪ್ಪ ಬಂಧನಕ್ಕೆ ಒತ್ತಾಯಿಸಿದ್ದಾರೆ.
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777












Click it and Unblock the Notifications