ಚಿತ್ರಗಳು : ಸಿದ್ದರಾಮಯ್ಯ ಬೆಂಗಳೂರು ನಗರ ಪ್ರದಕ್ಷಿಣೆ
ಬೆಂಗಳೂರು, ಮೇ 15 : 'ಬೆಂಗಳೂರಿನಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಲು ವಾರಕ್ಕೊಮ್ಮೆ ನಗರ ಪ್ರದಕ್ಷಿಣೆ ಕೈಗೊಳ್ಳುತ್ತೇನೆ, ಎಲ್ಲಾ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಗರ ಪ್ರದಕ್ಷಿಣೆ ನಡೆಸಿದರು. ನಂತರ ಗೃಹ ಕಚೇರಿ ಕೃಷ್ಣಾದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, 'ಬೆಂಗಳೂರಿನ ಅಭಿವೃದ್ಧಿಗೆ ಈಗಾಗಲೇ 2014-15ರ ಸಾಲಿನಲ್ಲಿ 1 ಸಾವಿರ ಕೋಟಿ, 2015-16ನೇ ಸಾಲಿನ ಬಜೆಟ್‌ನಲ್ಲಿ ಒಂದೂವರೆ ಸಾವಿರ ಕೋಟಿ ರೂ. ಹಾಗೂ ಈಗ ಹೆಚ್ಚುವರಿಯಾಗಿ 1 ಕೋಟಿ ರೂ.ಗಳನ್ನು ನೀಡಲಾಗಿದೆ' ಎಂದರು.
'ನಗರದಲ್ಲಿ ರಸ್ತೆ, ಫ್ಲೈ ಓವರ್, ಚರಂಡಿ ಮತ್ತು ಫುಟ್‌ಪಾತ್ ಕಾಮಗಾರಿಗಳನ್ನು ಕೈಗೊಳ್ಳಲು ಅನುದಾನ ನೀಡಲಾಗಿದೆ. ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕು. ಪ್ರತಿ ವಾರವೂ ನಗರ ಪ್ರದಕ್ಷಿಣೆ ನಡೆಸಿ ಕಾಮಗಾರಿಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ' ಎಂದು ತಿಳಿಸಿದರು. [ಬೆಂಗಳೂರಿಗೆ 3 ಎಲಿವೇಟೆಡ್ ರಸ್ತೆ ಕೊಡುಗೆ ನೀಡಿದ ಸಿಎಂ]
ಮೀಸಲಾತಿ ಪಟ್ಟಿ ಸಲ್ಲಿಕೆ : ಸುಪ್ರೀಂಕೋರ್ಟ್ ಆದೇಶದ ಅನ್ವಯ ಮೂರು ತಿಂಗಳಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ನಡೆಸಲು ಸರ್ಕಾರ ಸಿದ್ಧವಿದೆ. ಶೀಘ್ರದಲ್ಲಿಯೇ ಮೀಸಲಾತಿ ಪಟ್ಟಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಕೆ ಮಾಡಲಾಗುತ್ತದೆ ಎಂದು ಹೇಳಿದರು.

ಬೌರಿಂಗ್ ಆಸ್ಪತ್ರೆಯಲ್ಲಿ ಸಿಬ್ಬಂದಿ ಗೈರು
ಸಿದ್ದರಾಮಯ್ಯ ಅವರು ಬೌರಿಂಗ್ ಆಸ್ಪತ್ರೆಯ ಅವ್ಯವಸ್ಥೆಗಳನ್ನು ನೋಡಿ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ಕೊಟ್ಟರು. 91 ಸಿಬ್ಬಂದಿಗಳ ಪೈಕಿ 51 ಜನರು ಮಾತ್ರ ಆಸ್ಪತ್ರೆಯಲ್ಲಿದ್ದರು. ಎಲ್ಲರನ್ನೂ ತಕ್ಷಣ ಬರುವಂತೆ ತಿಳಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿ ಅವರು, ಆಸ್ಪತ್ರೆಯ ವ್ಯವಸ್ಥೆಗಳನ್ನು ಸರಿಪಡಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದರು.

ಟೆಂಡರ್ ಶ್ಯೂರ್ ಕಾಮಗಾರಿಗಳ ವೀಕ್ಷಣೆ
ಇನ್‍ಫೆಂಟ್ರಿ, ಲ್ಯಾವೆಲ್ಲೆ ರಸ್ತೆಯಲ್ಲಿ ಸಂಚಾರ ನಡೆಸಿದ ಸಿದ್ದರಾಮಯ್ಯ ಅವರು ಟೆಂಡರ್ ಶ್ಯೂರ್ ಯೋಜನೆಯಡಿ ಕೈಗೊಂಡಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿದರು. ಅಲ್ಲಿಂದ ಸೆಂಟ್ ಮಾರ್ಕ್ಸ್ ರಸ್ತೆಯಲ್ಲಿನ ಕಾಮಗಾರಿಗಳನ್ನು ವೀಕ್ಷಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಓಕಳೀಪುರಂ ಕಾರಿಡಾರ್ ಕಾಮಗಾರಿ ಆರಂಭಿಸಲು ಸೂಚನೆ
ಓಕಳೀಪುರಂ ಎಂಟು ಪಥದ ರಸ್ತೆ ಕಾಮಗಾರಿಯನ್ನು 15 ದಿನದಲ್ಲಿ ಆರಂಭಿಸಬೇಕು ಎಂದು ಸೂಚನೆ ನೀಡಿದರು. ಕಾರಿಡಾರ್‌ಗೆ 300 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಕೆಂಪೇಗೌಡ ರಸ್ತೆಯಲ್ಲಿಯೂ ಟೆಂಡರ್ ಶ್ಯೂರ್ ಅಡಿಯಲ್ಲಿ ರಸ್ತೆ ಅಭಿವೃದ್ಧಿಪಡಿಸಲು ಸೂಚನೆ ನೀಡಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು.

ಶ್ಯಾಂ ಭಟ್ರ ಚಳಿ ಬಿಡಿಸಿದ ಸಿಎಂ
ನಾಯಂಡನಹಳ್ಳಿಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮೂಲಕ ಕೈಗೊಂಡಿರುವ ಕಾಮಗಾರಿಗಳನ್ನು ವೀಕ್ಷಣೆ ಮಾಡಿದರು. ಆದರೆ, ಈ ವೇಳೆ ಬಿಡಿಎ ಆಯುಕ್ತ ಶ್ಯಾಂ ಭಟ್ ಸ್ಥಳದಲ್ಲಿರಲಿಲ್ಲ, ತಕ್ಷಣ ಅವರಿಗೆ ಫೋನ್ ಮಾಡಿದ ಸಿದ್ದರಾಮಯ್ಯ ಅವರು 'ರೀ ಶ್ಯಾಂಭಟ್ರೇ... ನಾನು ಇನ್ಸ್ ಪೆಕ್ಷನ್‌ಗೆ ಬಂದಿದ್ದೇನೆ. ನೀವು ಮನೆಯಲ್ಲಿ ಕುಳಿತುಕೊಂಡು ಏನು ಮಾಡುತ್ತಿದ್ದೀರಿ?' ಎಂದು ತರಾಟೆಗೆ ತೆಗೆದುಕೊಂಡರು.

ರಾಜಾಜಿನಗರದಲ್ಲಿ ಅಂಡರ್ ಪಾಸ್ ನಿರ್ಮಾಣ
ರಾಜಾಜಿನಗರ 1ನೇ ಬ್ಲಾಕ್‌ನಲ್ಲಿ ಮೆಟ್ರೋ ರೈಲು ಕಾಮಗಾರಿ ಮುಗಿದ ಬಳಿಕ ಅಂಡರ್ ಪಾಸ್ ನಿರ್ಮಾಣ ಮಾಡಲಾಗುತ್ತದೆ ಎಂದು ಹೇಳಿದ ಸಿದ್ದರಾಮಯ್ಯ ಅವರು, ಮೆಟ್ರೋ ಫ್ಲೈಓವರ್ ಕೆಳಗೆ ಇರುವ ತ್ಯಾಜ್ಯಗಳನ್ನು ತೆರವುಗೊಳಿಸಿ ರಸ್ತೆಗೆ ಡಂಬರೀಕರಣ ಮಾಡಲಾಗುತ್ತದೆ ಎಂದರು. ರಾಜಾಜಿನಗರದಲ್ಲಿ ಸಂಚಾರ ಸ್ಥಗಿತಗೊಳಿಸಿ ಸಿಎಂ ರಸ್ತೆ ವೀಕ್ಷಣೆ ಮಾಡಿದ್ದರಿಂದ ವಾಹನ ಸವಾರರ ಆಕ್ರೋಶಕ್ಕೆ ಗುರಿಯಾದರು.

ಪ್ರತಿಪಕ್ಷಗಳ ವಿರುದ್ಧ ಕಿಡಿ
ಕೆರೆ ಒತ್ತುವರಿ ವಿಚಾರದಲ್ಲಿ ಪ್ರತಿಪಕ್ಷಗಳು ದ್ವಂದ್ವ ನೀತಿ ಅನುಸರಿಸುತ್ತಿವೆ ಎಂದು ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು. ವಿಧಾನಸಭೆಯಲ್ಲಿ ಭೂಗಳ್ಳರನ್ನು ಪತ್ತೆಹಚ್ಚಿ ಜೈಲಿಗೆ ಅಟ್ಟಬೇಕು ಎಂದು ಹೇಳುವ ಪ್ರತಿಪಕ್ಷದ ನಾಯಕರು ಈಗ ಭೂಗಳ್ಳರ ಪರವಾಗಿ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ ಎಂದು ಟೀಕಿಸಿದರು.

ಕುಮಾರಸ್ವಾಮಿ ಮಾತಿಗೆ ತಿರಗೇಟು
'ಜೆಡಿಎಸ್ ಪಕ್ಷಕ್ಕೆ ಸರ್ಕಾರ ಬೀಳಿಸುವ ಶಕ್ತಿ ಇದೆ' ಎಂಬ ಎಚ್.ಡಿ. ಕುಮಾರಸ್ವಾಮಿ ಮಾತಿಗೆ ತಿರುಗೇಟು ಕೊಟ್ಟ ಸಿದ್ದರಾಮಯ್ಯ ಅವರು, 'ಜೆಡಿಎಸ್ ಪಕ್ಷ ವಾಮಮಾರ್ಗದ ಮೂಲಕ ಅಧಿಕಾರ ಹಿಡಿಯಬೇಕೇ ಹೊರತು, ಜನರ ಆಶೀರ್ವಾದದಿಂದ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ' ಎಂದು ವ್ಯಂಗ್ಯವಾಡಿದರು. ಗುರುವಾರ ಪತ್ರಿಕಾ ಸಂವಾದದಲ್ಲಿ 'ಹತ್ತಿದ ಏಣಿಯನ್ನು ಒದೆಯಬೇಡಿ, ಜೆಡಿಎಸ್ ಮತ್ತೆ ಅಧಿಕಾರಕ್ಕೆ ಬರಲಿದೆ' ಎಂದು ಎಚ್ಡಿಕೆ ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದರು.












Click it and Unblock the Notifications