ಕಾಂಗ್ರೆಸ್ ಗ್ಯಾರೆಂಟಿಗಳು: ಕಾಂಗ್ರೆಸ್ ಅಧಿಕಾರಕ್ಕೆ ಬರಲು ಅದರ ಭರವಸೆಗಳು ಸಹಾಯ ಮಾಡಬಹುದೇ?
ಬೆಂಗಳೂರು, ಏಪ್ರಿಲ್. 29 : ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡುವ ಮುನ್ನವೇ ಐದು ಪ್ರಮುಖ ಭರವಸೆಗಳನ್ನು ನಾಡಿನ ಜನರ ಮುಂದಿಟ್ಟಿದೆ. ರಾಜ್ಯದ ಮಹಿಳೆಯರು, ಯುವಕರನ್ನು ಪ್ರಧಾನವಾಗಿಟ್ಟುಕೊಂಡು ಭರವಸೆಗಳನ್ನು ಘೋಷಿಸಿದ್ದು, ಇದು ಕಾಂಗ್ರೆಸ್ ಗ್ಯಾರೆಂಟಿ ಯೋಜನೆಗಳು ಎಂದಿದೆ. ಇವುಗಳು ಮತದಾರರ ಬಳಿಗೆ ತಲುಪಲಿವೆಯೇ, ಕಾಂಗ್ರೆಸ್‌ಗೆ ಮತಗಳಾಗಿ ಬರಲಿವೆಯೇ ಎಂಬುದು ಕೂಡ ಪ್ರಶ್ನೆಯಾಗಿದೆ.
ಈಗಾಗಲೇ ಜಾತ್ಯಾತೀತ ಜನತಾದಳ ತನ್ನ ಜನತಾ ಪ್ರಣಾಳಿಕೆಯ್ನು ಬಿಡುಗಡೆ ಮಾಡಿದೆ. ಮಹಿಳೆಯರು, ಯುವಕರು, ರೈತರು ಸೇರಿದಂತೆ ಎಲ್ಲರನ್ನೂ ಒಳಗೊಂಡ ದೊಡ್ಡ ಪ್ರಣಾಳಿಕೆಯನ್ನು ಜನರ ಮುಂದಿಟ್ಟಿದೆ. ಬಿಜೆಪಿ ತಮ್ಮ ಪ್ರಣಾಳಿಕೆ ಬಿಡುಗಡೆ ಮಾಡಿಲ್ಲ. ಕಾಂಗ್ರೆಸ್ ಒಂದೊಂದು ಭಾಗದಲ್ಲೂ ಒಂದೊಂದು ಗ್ಯಾರೆಂಟಿಗಳನ್ನು ಘೋಷಿಸಿಕೊಂಡು ಬಂದಿದೆ. ರಾಹುಲ್ ಗಾಂಧಿ ಮೊನ್ನೆಯಷ್ಟೇ ಐದನೆ ಭರವಸೆಯನ್ನು ಮಂಗಳೂರಿನಲ್ಲಿ ಘೋಷಿಸಿದ್ದಾರೆ.

ಕಾಂಗ್ರೆಸ್ ಘೋಷಿಸಿರುವ ಐದು ಘೋಷಣೆಗಳು ಹೀಗಿವೆ.
1. ಗೃಹ ಜ್ಯೋತಿ ಯೋಜನೆ
2. ಗೃಹ ಲಕ್ಷ್ಮೀ ಯೋಜನೆ
3. ಅನ್ನ ಭಾಗ್ಯ
4. ಯುವ ನಿಧಿ
5. ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ
1. *ಗೃಹ ಜ್ಯೋತಿ ಯೋಜನೆ*: ಆಮ್ ಆದ್ಮಿ ಸರ್ಕಾರದ ಉಚಿತ ವಿದ್ಯುತ್ ಯೋಜನೆಯ ರೀರಿಯಲ್ಲಿಯೇ ಕಾಂಗ್ರೆಸ್ ಈ ವರ್ಷದ ಜನವರಿಯಲ್ಲಿ ತಮ್ಮ ಮೊದಲ ಭರವಸೆ ಎಂದು ಗೃಹ ಜ್ಯೋತಿ ಯೋಜನೆಯನ್ನು ಘೋಷಿಸಿತು. "ಬೆಲೆ ಏರಿಕೆಯ ವಿರುದ್ಧ ಹೋರಾಡಲು ಕನ್ನಡಿಗರಿಗೆ ಸಹಾಯ ಮಾಡಲು ಮತ್ತು ಆಹಾರ, ಮಕ್ಕಳಿಗೆ ಶಿಕ್ಷಣ ಮತ್ತು ಆರೋಗ್ಯದಂತಹ ಅಗತ್ಯ ವಸ್ತುಗಳನ್ನು ಉಳಿಸಲು ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡಲಿದೆ" ಎಂದಿದೆ. ವಿದ್ಯುತ್ ಬೆಲೆ ಹೆಚ್ಚಾಗಿರುವ ಸಮಯದಲ್ಲಿ ಇದು ಮಧ್ಯಮ ವರ್ಗದವರನ್ನು ಪ್ರಧಾನವಾಗಿಟ್ಟುಕೊಮಡು ಘೋಷಿಸಿರುವ ಯೋಜನೆ ಇದಾಗಿದೆ. ಯೋಜನೆಯನ್ನು ಜನರಿಗೆ ತಲುಪಿಸಲುವ ಪ್ರಯತ್ನವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ನಾಯಕರು ಹೇಳಿಕೊಂಡಿದ್ದಾರೆ.
2. *ಗೃಹ ಲಕ್ಷ್ಮೀ ಯೋಜನೆ*: ಮಹಿಳಾ ಮತದಾರರನ್ನು ಗುರಿಯಾಗಿಸಿಕೊಂಡಿರುವ ಕಾಂಗ್ರೆಸ್ ತನ್ನ ಎರಡನೇ ಚುನಾವಣಾ ಭರವಸೆಯಲ್ಲಿ, ಪಕ್ಷವು ಗೃಹ ಲಕ್ಷ್ಮೀ ಯೋಜನೆಯನ್ನು ಘೋಷಿಸಿದೆ. ಪಕ್ಷ ಅಧಿಕಾರಕ್ಕೆ ಬಂದರೆ ಈ ಯೋಜನೆಯಡಿ ರಾಜ್ಯದ ಪ್ರತಿ ಗೃಹಿಣಿಯರಿಗೆ ತಿಂಗಳಿಗೆ 2,000 ರೂಪಾಯಿಗಳನ್ನು ನೀಡಲಾಗುತ್ತದೆ. ಈ ಯೋಜನೆಯಿಂದ 1.5 ಕೋಟಿ ಗೃಹಿಣಿಯರಿಗೆ ಅನುಕೂಲವಾಗಲಿದೆ. ಈ ಯೋಜನೆಯು ಕುಟುಂಬದ ಮುಖ್ಯಸ್ಥ ಮಹಿಳೆಗೆ ನೀಡಲಾಗುತ್ತದೆ. ಇದು ಮಹಿಳೆಯರಲ್ಲಿ ಒಂದು ಆರ್ಥಿಕ ಸ್ವಾವಲಂಬನೆ ನೀಡಲಿದೆ ಎಂಬುದು ಪಕ್ಷದ ಲೆಕ್ಕಾಚಾರ. ಇದು ಕೂಡ ಈಗಾಗಲೇ ಹಲವೆಡೆ ಪ್ರಚಾರ ಮಾಡಲಾಗಿದ್ದು, ಮಹಿಳೆಯರ ಬಾಯಿಂದ ಬಾಯಿಗೆ ಹರಡಿದೆ..

3. *ಅನ್ನ ಭಾಗ್ಯ*: ಕಾಂಗ್ರೆಸ್ ಎಂದರೆ ಅನ್ನಭಾಗ್ಯ ಎನ್ನುವಷ್ಟ ಮಟ್ಟಿಗೆ ಈ ಯೋಜನೆ ಪಕ್ಷಕ್ಕೆ ಹೆಸರು ತಂದು ಕೊಟ್ಟಿದೆ. ಈ ಯೋಜನೆ ಕಾಂಗ್ರೆಸ್ ಸರ್ಕಾರವನ್ನು ಮತ್ತು ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಜನಪ್ರಿಯ ಮಾಡಿದ ಯೋಜನೆ. ಈ ಯೋಜನೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮತ್ತೆ ಉತ್ತಮವಾಗಿ ಜಾರಿ ಮಾಡಲಾಗುತ್ತದೆ. 'ಅನ್ನ ಭಾಗ್ಯ' ಯೋಜನೆಯ ಅಡಿಯಲ್ಲಿ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಜನರಿಗೆ ಪ್ರತಿ ತಿಂಗಳು 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲಿದೆ ಎಂದು ಕಾಂಗ್ರೆಸ್ ತಿಳಿಸಿದೆ. ಇಂದಿಗೂ ಗ್ರಾಮೀಣ ಕರ್ನಾಟಕದಲ್ಲಿ ಮತ್ತು ಮಧ್ಯಮವರ್ಗದವರಲ್ಲಿ ಕಾಂಗ್ರೆಸ್ ಬಗ್ಗೆ ಭಾರಿ ಮೆಚ್ಚುಗೆ ತಂದಿರುವ ಯೋಜನೆ. ಹೀಗಾಗಿಯೇ ಇದನ್ನು ಮತ್ತೆ ಎನ್‌ಕ್ಯಾಚ್ ಮಾಡಿಕೊಳ್ಳಲು ಕಾಂಗ್ರೆಸ್ ಇದನ್ನು ಜಾರಿಗೊಳಿಸುವುದಾಗಿ ಹೇಳಿಕೊಂಡಿದೆ.
4. *ಯುವ ನಿಧಿ*: ದೇಶದ ಪ್ರಮುಖ ಸಮಸ್ಯೆಗಳಲ್ಲಿ ನಿರುದ್ಯೋಗ ಕೂಡ ಒಂದು. ಇದನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಯುವ ಮತದಾರರನ್ನು ಸೆಳೆಯಲು ಹೊರಟಿದೆ. ನಿರುದ್ಯೋಗದ ವಿರುದ್ಧ ಹೋರಾಡಲು, ಕಾಂಗ್ರೆಸ್ ಪಕ್ಷವು ಯುವ ನಿಧಿ ಯೋಜನೆಯನ್ನು ಘೋಷಿಸಿದೆ. ನಿರುದ್ಯೋಗಿ ಯುವಕರಿಗೆ ನೆರವಾಗಲು ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಯೋಜನೆ ಅಡಿಯಲ್ಲಿ ಪದವಿ ಪಡೆದಿರುವ ನಿರುದ್ಯೋಗಿ ಯುವಕರಿಗೆ ಪ್ರತಿ ತಿಂಗಳು 3000 ರೂಪಾಯಿ ನೀಡಲಾಗುತ್ತದೆ. ಜೊತೆಗೆ ರಾಜ್ಯದಲ್ಲಿ ಡಿಪ್ಲೊಮಾ ಪದವಿ ಪಡೆದ ನಿರುದ್ಯೋಗಿಗಳಿಗೆ ಭತ್ಯೆಯಾಗಿ ಪ್ರತಿ ತಿಂಗಳು 1500 ರೂಪಾಯಿ ನೀಡಲಾಗುತ್ತದೆ.
ರಾಜ್ಯದಲ್ಲಿ ಈಗಾಗಲೇ ನಿರುದ್ಯೋಗದ ವಿರುದ್ಧ ಸಾಲು ಸಾಲು ಪ್ರತಿಭಟನೆಗಳು ನಡೆಯುತ್ತಿದೆ. ಬಿಜೆಪಿ ಸರ್ಕಾರದ ವಿರುದ್ಧ ಯುವ ಜನರ ಆಕ್ರೋಶವಿದೆ. ಇದನ್ನು ಬಂಡವಾಳ ಮಾಡಿಕೊಳ್ಳಲು ಕಾಂಗ್ರೆಸ್ ಯುವಕರಿಗಾಗಿ ಈ ಯೋಜನೆ ಘೋಷಿಸಿದೆ.
5. *ಮಹಿಳೆಯರಿಗೆ ಉಚಿತ ಪ್ರಯಾಣ*: ಇತ್ತೀಚೆಗೆ ರಾಹುಲ್ ಗಾಂಧಿ ಮಂಗಳೂರಿನಲ್ಲಿ ಘೋಷಿಸಿದ ಕಾಂಗ್ರೆಸ್‌ನ ಐದನೆ ಗ್ಯಾರೆಂಟಿ ಮಹಿಳೆಯರಿಗೆ ರಾಜ್ಯಾದ್ಯಂತ ಸರ್ಕಾರಿ ಬಸ್‌ನಲ್ಲಿ ಉಚಿತ ಪ್ರಯಾಣದ ಭರವಸೆ. ಎಲ್ಲಾ ಮಹಿಳೆಯರನ್ನು ಟಾರ್ಗೆಟ್ ಮಾಡಿ ಘೋಷಿಸಲಾಗಿರುವ ಯೋಜನೆಗೆ ಈಗಾಗಲೇ ಉತ್ತಮ ಪ್ರತಿಕ್ರಿಯೆಗಳು ಬರುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೊದಲ ದಿನದಲ್ಲಿ ಈ ಯೋಜನೆ ಆರಂಭಿಸುತ್ತೇವೆ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.

ಆದರೆ, ಈ ಐದು ಯೋಜನೆಗಳು ನಿಜಕ್ಕೂ ಜನಪರ ಯೋಜನೆಗಳು ಎಂಬುದರಲ್ಲಿ ಅನುಮಾನವಿಲ್ಲ. ಇದನ್ನು ನಂಬಿ ಜನರು ಮತ ಚಲಾಯಿಸಬೇಕು ಎಂದರೇ, ಇದಕ್ಕೆ ಕಾಂಗ್ರೆಸ್ ತಳಮಟ್ಟದಲ್ಲಿ ಕೆಲಸ ಮಾಡಬೇಕಿದೆ. ಯೋಜನೆಗಳನ್ನು ಜನರ ಬಳಿಗೆ ತಲುಪಬೇಕಿವೆ. ಆಗ ಮಾತ್ರ ಯೀಜನೆಗಳನ್ನು ತಿಳಿದು ಜನ ಕಾಂಗ್ರೆಸ್‌ಗೆ ಮತ ಹಾಕಬಹುದು. ಈ ಕೆಲಸ ಈಗಾಗಲೇ ನಡೆಯುತ್ತಿದ್ದು, ಮತ್ತಷ್ಟು ಪ್ರಚಾರದ ಅವಶ್ಯಕತೆಯಿದೆ.
ಈ ಯೋಜನೆಗಳು ಪ್ರತಿಪಕ್ಷಗಳ ತಲೆ ಕೆಡಿಸಿವೆ ಎಂಬುದು ಕೂಡ ಕಾಂಗ್ರೆಸ್ ಭರವಸೆಗಳ ಪ್ರಾಮುಖ್ಯತೆಯನ್ನು ತೋರಿಸುತ್ತಿವೆ. ಬಿಜೆಪಿಯ ರಾಷ್ಟರೀಯ ನಾಯಕರು ಈ ಗ್ಯಾರೆಂಟಿಗಳನ್ನು ಮುಖ್ಯವಾಗಿಸಿಕೊಂಡೆ ಮತದಾರರ ಬಳಿ ಪ್ರಚಾರಕ್ಕೆ ತೆರಳುತ್ತಿರುವುದರಿಂದ ಕಾಂಗ್ರೆಸ್‌ಗೆ ಒಂದು ರೀತಿಯ ಉಪಯೋಗವೇ ಸರಿ. ಆದರೂ, ಉತ್ತಮ ಭರವಸೆಗಳನ್ನು ಘೋಷಿಸಿರುವ ಕಾಂಗ್ರೆಸ್‌ಗೆ ಹಿಮಾಚಲದಲ್ಲಿ ಈಗಾಗಲೇ ಹಳೆ ಪಿಂಚಣಿ ಯೋಜನೆ ಜಾರಿಗೆ ತಂದಿರುವುದು ಕೂಡ ಜನರ ವಿಶ್ವಾಸ ಗಳಿಸಲು ಪೂರಕವಾಗಿದೆ. ಹೀಗಾಗಿ ಈ ಗ್ಯಾರೆಂಟಿಗಳ ಬಗ್ಗೆ ಮತ್ತಷ್ಟು ಪ್ರಚಾರ ಮಾಡಿದಷ್ಟು ಕಾಂಗ್ರೆಸ್ ಮತಗಳನ್ನು ತನ್ನತ್ತ ಸೆಳೆಯಬಹುದು.












Click it and Unblock the Notifications