ಮಂಗಳೂರು ಚಲೋ ಜಾಥಾಕ್ಕೆ ಯಡಿಯೂರಪ್ಪ ಚಾಲನೆ ನೀಡಲಿಲ್ಲವೇಕೆ?
ಬೆಂಗಳೂರು, ಸೆ. 05: ರಾಜ್ಯದಲ್ಲಿ ಭಾರಿ ಸಂಚಲನ ಮೂಡಿಸುವ ಕುರುಹು ತೋರಿದ್ದ ಬಿಜೆಪಿಯ 'ಮಂಗಳೂರು ಚಲೋ' ಬೈಕ್ ಜಾಥಾಕ್ಕೆ ವ್ಯವಸ್ಥಿತವಾಗಿ ತಡೆಯೊಡ್ಡುವಲ್ಲಿ ಕರ್ನಾಟಕ ಸರ್ಕಾರ ಯಶಸ್ವಿಯಾಗಿದೆ.
ಬಿಜೆಪಿಯ ಕೆಲ ನಾಯಕರು ರಸ್ತೆಗಿಳಿದು ಬೈಕ್ ಸವಾರಿ ನಡೆಸಿ ಬಂಧನಕ್ಕೊಳಗಾಗಿದ್ದಾರೆ. ಸಂಸದೆ ಶೋಭಾ ಅವರು ಗಾಯ, ನೋವು ತಿಂದಿದ್ದಾರೆ. ಆದರೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರು ಮಾತ್ರ ಎಲ್ಲೂ ಕಾಣಿಸಿಲ್ಲವೇಕೆ? ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ...
ಮಂಗಳವಾರ ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಫ್ರೀಡಂಪಾರ್ಕ್‍ನಲ್ಲಿ ಬಿಜೆಪಿ ಯುವ ಮೋರ್ಚಾ ನಡೆಸಲು ಉದ್ದೇಶಿಸಿದ್ದ ಮಂಗಳೂರು ಚಲೋ ಬೈಕ್ rallyಗೆ ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರು ಚಾಲನೆ ನೀಡಬೇಕಿತ್ತು.
ಆದರೆ, ಯಡಿಯೂರಪ್ಪ ಅವರು ಎಲ್ಲೂ ಕಾಣಿಸಲಿಲ್ಲ. ನೂರಾರು ಮಂದಿ ಕಾರ್ಯಕರ್ತರು ಕಾದಿದ್ದಷ್ಟೇ ಬಂತು. ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂಸದ ಪ್ರತಾಪ್ ಸಿಂಹ, ಮಾಜಿ ಡಿಸಿಎಂ ಆರ್ ಅಶೋಕ್, ಸಂಸದೆ ಶೋಭಾ ಕರಂದ್ಲಾಜೆ ಅವರು ಜಾಥಾಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಡಾಲರ್ಸ್ ಕಾಲೋನಿ ಮನೆಯಲ್ಲಿದ್ದ ಯಡಿಯೂರಪ್ಪ ಅವರು ಟಿವಿ ಮೂಲಕ ಜಾಥಾ ಆರಂಭ, ಅಂತ್ಯವನ್ನು ಕಂಡಿದ್ದಾರೆ.

ಬೆಂಗಳೂರಿನಿಂದ ಚಾಲನೆ
ಈ ಮಂಗಳೂರು ಚಲೋ ಸಮಾವೇಶಕ್ಕೆ ಹುಬ್ಬಳ್ಳಿ, ಶಿವಮೊಗ್ಗ, ಮೈಸೂರು, ಬೆಂಗಳೂರು, ಚಿಕ್ಕಮಗಳೂರಿನಿಂದ ಬೈಕ್ ಜಾಥಾ ಸೆಪ್ಟೆಂಬರ್ 5 ಹಾಗೂ 6 ರಂದು ಹೊರಡಲಿದ್ದು, ಸೆಪ್ಟೆಂಬರ್ 7 ರಂದು ಮಂಗಳೂರು ತಲುಪಿ ಬೃಹತ್ ಸಮಾವೇಶ ನಡೆಸಲು ಬಿಜೆಪಿ ಯುವ ಮೋರ್ಚಾ ನಿರ್ಧರಿಸಿತ್ತು.

ಯಡಿಯೂರಪ್ಪ ಎಲ್ಲಿದ್ದರು?
ಡಾಲರ್ಸ್ ಕಾಲೋನಿಯಲ್ಲಿದ್ದ ಯಡಿಯೂರಪ್ಪ ಮನೆಯಿಂದ ಹೊರ ಬರಲೇ ಇಲ್ಲ. ಯಡಿಯೂರಪ್ಪನವರ ಮನೆ ಸುತ್ತ ಬಿಗಿಭದ್ರತೆ ಏರ್ಪಡಿಸಲಾಗಿತ್ತು. ಅಪ್ಪಿತಪ್ಪಿಯೂ ಅವರು ಮನೆಯಿಂದ ಹೊರಬರದಂತೆ ಗೃಹಬಂಧನ ವಿಧಿಸಲಾಗಿತ್ತು. ಹೀಗಾಗಿ ಅವರು ಹೊರ ಬರಲಿಲ್ಲ ಎಂಬ ಸುದ್ದಿ ಬಂದಿತು. ಫ್ರೀಡಂ ಪಾರ್ಕಿನಲ್ಲಿದ್ದ ಉಳಿದ ಮುಖಂಡರು ಬೈಕ್ ಜಾಥಾಕ್ಕೆ ಚಾಲನೆ ನೀಡಿದರು.

ಬಿಜೆಪಿ ಪೂರ್ವ ತಯಾರಿ ಏಕಮುಖವಾಗಿತ್ತು
ಬಿಜೆಪಿಯ ಯುವ ಮೋರ್ಚಾದ ಪೂರ್ವ ತಯಾರಿ ಏಕಮುಖವಾಗಿತ್ತು. ಬೈಕ್ ಹಾಗೂ ಕಾರ್ಯಕರ್ತರ ಸಂಘಟನೆಯಲ್ಲಿ ನಿರತರಾಗಿದ್ದರು. ಬೈಕ್ ಜಾಥಾಕ್ಕೆ ಅನುಮತಿ ಸಿಗದಿದ್ದರೆ ಏನು ಮಾಡಬೇಕು ಎಂಬ ಯೋಜನೆ ಹಾಕಿಕೊಂಡಿರಲಿಲ್ಲ. ಬೆಂಗಳೂರು, ಮೈಸೂರು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಹುಬ್ಬಳ್ಳಿ, ಕೋಲಾರ, ಚಾಮರಾಜನಗರ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಪೊಲೀಸರು ವ್ಯವಸ್ಥಿತವಾಗಿ ಜಾಥಾಕ್ಕೆ ಹೊರಟ ಬಿಜೆಪಿ ಬಾವುಟ ಹಿಡಿದವರನ್ನು ಅಡ್ಡಗಟ್ಟುವಲ್ಲಿ ಯಶಸ್ವಿಯಾದರು.

ಸಾರ್ವಜನಿಕರಿಗೂ ಬೇಕಿಲ್ಲ
ಮಂಗಳವಾರದ ದಿನ ಬೈಕ್ ಜಾಥಾಕ್ಕೆ ಅನುಮತಿ ಸಿಕ್ಕಿದ್ದರೆ ಮೂರು ದಿನಗಳ ಕಾಲ ರಾಜ್ಯದ ವಿವಿಧ ಜಿಲ್ಲೆಗಳಿಂದ 20 ಸಾವಿರಕ್ಕೂ ಅಧಿಕ ಬೈಕ್ ಸವಾರರು ಮಂಗಳೂರು ಸೇರುವ ಸಾಧ್ಯತೆಯಿತ್ತು. ಮಾರ್ಗಮಧ್ಯದಲ್ಲಿ ಸಂಚಾರ ದಟ್ಟಣೆ, ಪ್ರತಿಭಟನೆ, ಅಗತ್ಯ ವಸ್ತು ಪೂರೈಕೆ, ಸರಕು ಸಾಗಣೆ ವ್ಯವಸ್ಥೆಗೆ ತೊಂದರೆ, ಮಂಗಳೂರಿನ ಈಗಿನ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಆಯಾ ಜಿಲ್ಲೆಯ ಆಡಳಿತ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಿದ್ದಾರೆ. ಇದರಿಂದ ಬಿಜೆಪಿ ಜಾಥಾಕ್ಕೆ ಸಾರ್ವಜನಿಕರಿಂದ ಯಾವುದೇ ಬೆಂಬಲ ಸಿಗಲಿಲ್ಲ.












Click it and Unblock the Notifications