ಕೊಲೆಗಾರರು ಯಾಕೆ ಅಷ್ಟು ಹತ್ತಿರದಿಂದ ಶೂಟ್ ಮಾಡ್ತಾರೆ?
ಮಹಾರಾಷ್ಟ್ರದಲ್ಲಿ ನಡೆದ ವಿಚಾರವಾದಿಗಳ ಹತ್ಯೆ, ಕರ್ನಾಟಕದಲ್ಲಿ ನಡೆದ ಸಂಶೋಧಕ ಎಂ.ಎಂ.ಕಲಬುರ್ಗಿ ಹಾಗೂ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗಳ ಮಧ್ಯೆ ಸಾಮ್ಯತೆಗಳಿವೆ ಎಂಬುದು ಎಲ್ಲೆಡೆ ಹರಿದಾಡುತ್ತಿರುವ ಸುದ್ದಿ. ಇದು ಸುಮ್ಮನೆ ಬಾಯಿ ಮಾತಿಗೆ ಹೇಳಲು ಸಾಧ್ಯವಿಲ್ಲ. ಕೊಲೆಯಾದ ರೀತಿ, ಬಳಸಿದ ಪಿಸ್ತೂಲು ಇತ್ಯಾದಿ ಮಾಹಿತಿಗಳನ್ನು ಮುಂದಿಟ್ಟುಕೊಂಡು ಒಂದು ತರ್ಕ ಮುಂದಿಡಲಾಗುತ್ತಿದೆ.
ಆದರೆ, ಈ ರೀತಿ ಹತ್ಯೆ ಪ್ರಕರಣದ ಬೆನ್ನಟ್ಟಿದ ಪೊಲೀಸರು ಅಪರಾಧ ಸನ್ನಿವೇಶವನ್ನು ಹಾಗೂ ಅಪರಾಧಿಯ ಮನಸ್ಥಿತಿಯನ್ನು ಹೇಗೆ ಅವಲೋಕಿಸುತ್ತಾರೆ ಎಂಬ ಕುತೂಹಲ ಇದ್ದೇ ಇರುತ್ತದೆ. ಅಂಥ ಕುತೂಹಲದ ಬೆನ್ನಟ್ಟುವ ಸನ್ನಿವೇಶದ ಎದುರು ನಾವು ನಿಂತಿದ್ದೇವೆ. ಏಕೆಂದರೆ ಮಂಗಳವಾರ ರಾತ್ರಿ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯಾಗಿದೆ.
ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ನಡೆದ ರೀತಿ ಬಗ್ಗೆ ಪೊಲೀಸ್ ಅಧಿಕಾರಿಯೊಬ್ಬರ ವಿಶ್ಲೇಷಣೆಯನ್ನು 'ಒನ್ಇಂಡಿಯಾ ಕನ್ನಡ' ಸಂಗ್ರಹಿಸಿದೆ. ಕೊಲೆಗಾರರು ಏಕೆ ಅಷ್ಟು ಹತ್ತಿರದಿಂದ ಶೂಟ್ ಮಾಡ್ತಾರೆ? ಹಣೆಗೇ ಗುರಿ ಇಡುವ ಉದ್ದೇಶ ಏನು? ಹತ್ಯೆಯ ಕಾರಣವನ್ನು ಹೇಗೆ ನಿರ್ಧರಿಸಲಾಗುತ್ತದೆ ಇತ್ಯಾದಿ ಪ್ರಶ್ನೆಗಳನ್ನು ಅವರ ಮುಂದಿಟ್ಟು ಉತ್ತರ ಪಡೆಯಲಾಗಿದೆ. ಆ ಪ್ರಶ್ನೋತ್ತರಗಳ ವಿವರ ಇಲ್ಲಿವೆ.

ಪ್ರಶ್ನೆ: ಪಾಯಿಂಟ್ ಬ್ಲಾಂಕ್ ರೇಂಜ್ ಅಂದರೆ ಏನು?
ಉತ್ತರ: ಮೊದಲನೆಯದಾಗಿ ಪಾಯಿಂಟ್ ಬ್ಲಾಂಕ್ ರೇಂಜ್ ನಲ್ಲಿ ಆದ ಹತ್ಯೆ ಇದಲ್ಲ. ಹಾಗಂದರೆ ವ್ಯಕ್ತಿಯೊಬ್ಬರ ದೇಹದ ಚರ್ಮಕ್ಕೆ ತಾಗುವಂಥ ಅಂತರದಿಂದ ಶೂಟ್ ಮಾಡಿದರೆ ಅದು ಪಾಯಿಂಟ್ ಬ್ಲಾಂಕ್ ಅಂತಾರೆ. ಈ ಪ್ರಕರಣದಲ್ಲಿ ಕೊಲೆಗಾರರು ಹತ್ತಿರದಿಂದ ಶೂಟ್ ಮಾಡಿದ್ದಾರೆ.

ಪ್ರಶ್ನೆ: ಹಾಗೆ ಹತ್ತಿರದಿಂದ ನಿಂತು ಕೊಲ್ಲುವ ಉದ್ದೇಶ ಏನು?
ಉತ್ತರ: ಗುರಿ ಯಾವ ಕಾರಣಕ್ಕೂ ತಪ್ಪಬಾರದು ಎಂಬುದೇ ಉದ್ದೇಶ. ಜತೆಗೆ ಕೊಲೆಗಾರರು ಬಳಸುವುದು ನಾಡ ಪಿಸ್ತೂಲು. ಆದ್ದರಿಂದ ಹಾಗೆ ಹತ್ತಿರದಿಂದ ಕೊಲ್ತಾರೆ.

ಪ್ರಶ್ನೆ: ನಾಡ ಪಿಸ್ತೂಲು ಆದರೆ ಹಾಗೆ ಹತ್ತಿರದಿಂದ ಕೊಲ್ತಾರಾ?
ಉತ್ತರ: ರಿವಾಲ್ವರ್ ಅಥವಾ ಇಂಥ ನಾಡ ಪಿಸ್ತೂಲುಗಳಲ್ಲಿ ಗುರಿಯೆಡೆಗೆ ಗುಂಡು ಹಾರಿಸುವುದು ಸುಲಭ ಅಲ್ಲ. ನೀವೆಲ್ಲೋ ಗುರಿಯಿಟ್ಟರೆ ಅದೆಲ್ಲೋ ತಗುಲುತ್ತದೆ. ಇದನ್ನು ಬಳಸುವ ವ್ಯಕ್ತಿ ಅದೆಷ್ಟೇ ನಿಷ್ಣಾತ ಆದರೂ ಗುರಿ ತಪ್ಪುವ ಸಾಧ್ಯತೆ ಜಾಸ್ತಿ ಆದ್ದರಿಂದ ಹತ್ತಿರದಿಂದ ಶೂಟ್ ಮಾಡ್ತಾರೆ.

ಪ್ರಶ್ನೆ: ಅಷ್ಟು ಬಾರಿ ಗುಂಡು ಹಾರಿಸಿದ್ದಾರಲ್ಲಾ, ಅಷ್ಟು ದ್ವೇಷ ಇದೆ ಅಂತಲೇ?
ಉತ್ತರ: ನಾಡ ಪಿಸ್ತೂಲಿನಲ್ಲಿ ಬಳಕೆ ಆಗುವ ಗುಂಡಿನ ಗಾತ್ರ ಸಣ್ಣಗಿರುವ ವ್ಯಕ್ತಿಯ ಕಿರುಬೆರಳಿನ ತುದಿಯಷ್ಟಿರುತ್ತದೆ. ಅದು ತುಂಬ ಪ್ರಬಲವಾಗಿಯೂ ಇರೋದಿಲ್ಲ. ಆದ್ದರಿಂದಲೇ ಹಣೆಗೆ ಗುರಿಯಿಟ್ಟು ಗುಂಡು ಹಾರಿಸುತ್ತಾರೆ. ಒಂದಕ್ಕಿಂತ ಹೆಚ್ಚು ಬಾರಿ ಗುಂಡು ಹಾರಿಸುತ್ತಾರೆ.

ಪ್ರಶ್ನೆ: ಗೌರಿ ಲಂಕೇಶ್ ಅವರನ್ನು ಹಾಗೆ ಹತ್ಯೆ ಮಾಡಿದವರ ಉದ್ದೇಶ ಏನಿರಬಹುದು?
ಉತ್ತರ: ಇನ್ನು ತನಿಖೆ ಆರಂಭದ ಹಂತದಲ್ಲಿದೆ. ಈಗಲೇ ಇದೇ ಉದ್ದೇಶ ಅಂತ ಹೇಳಬಾರದು. ಆದರೆ ಮೇಲ್ನೋಟಕ್ಕೆ ಕಾಣಿಸುವಂತೆ ವೈಚಾರಿಕ ಕಾರಣಗಳಿಗೆ ಈ ಹತ್ಯೆ ಆಗಿರುವ ಸಾಧ್ಯತೆ ಹೆಚ್ಚಿದೆ.

ಪ್ರಶ್ನೆ: ಈ ರೀತಿ ವೈಚಾರಿಕ ಭಿನ್ನಾಭಿಪ್ರಾಯ ಬಂದರೆ ಕೊಂದೇ ಬಿಡ್ತಾರಾ? ಅಂದರೆ, ಅಪರಾಧಿಯ ಮನಸ್ಥಿತಿಯ ಬಗ್ಗೆ ಕೇಳ್ತಿದೀನಿ
ಉತ್ತರ: ಕೊಲ್ಲುವ ವ್ಯಕ್ತಿಗೆ, ನನ್ನದೇ ಧರ್ಮದ ವ್ಯಕ್ತಿ ಈ ರೀತಿ ಮಾತನಾಡ್ತಾರಲ್ಲಾ, ಅವಮಾನ ಮಾಡ್ತಾರಲ್ಲಾ ಎಂಬ ಸಿಟ್ಟು ಕಾರಣ ಇರಬಹುದು. ತನ್ನ ಧರ್ಮದ ವಿರುದ್ಧ ಇತರ ಧರ್ಮದವರು ಮಾತನಾಡುವುದಕ್ಕಿಂತ ಹೆಚ್ಚು ಸಿಟ್ಟು ಇಂಥ ಪ್ರಕರಣದಲ್ಲಿ ಇರುತ್ತವೆ.

ಪ್ರಶ್ನೆ: ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣದಲ್ಲಿ ಇನ್ನೂ ಆರೋಪಿಗಳು ಸಿಕ್ಕಿಲ್ಲ. ಅಪರಾಧಿಗಳು ಅಷ್ಟು ಬುದ್ಧಿವಂತರಿರ್ತಾರಾ?
ಉತ್ತರ: ತನಿಖೆ ಮಾಡುವ ಯಾವುದೇ ಸಂಸ್ಥೆಯವರಿರಲಿ ಅಂದರೆ ಪೊಲೀಸ್, ಸಿಐಡಿ ಅಥವಾ ಸಿಬಿಐ ತಮ್ಮ ಬುದ್ಧಿವಂತಿಕೆಯ ಪರಿಮಿತಿಯಲ್ಲಿ ಕೆಲಸ ಮಾಡ್ತಾರೆ. ಅವರನ್ನು ಮೀರಿಸಿದಂತೆ ಕ್ರಿಮಿನಲ್ ಯೋಚಿಸಿದಾಗ ಪ್ರಕರಣ ಭೇದಿಸುವುದು ಸವಾಲಾಗುತ್ತದೆ.












Click it and Unblock the Notifications