Property Scheme: 'ನಂಬಿಕೆ ನಕ್ಷೆ' ಯೋಜನೆ ತಂದು ಉಲ್ಟಾ ಹೊಡೆದ ಸರ್ಕಾರ
ಬೆಂಗಳೂರು, ಅಕ್ಟೋಬರ್ 10: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ( ಬಿಬಿಎಂಪಿ) ವ್ಯಾಪ್ತಿಯಲ್ಲಿ ಕಟ್ಟಡ ಮಂಜೂರಾತಿಗೆ ಹೊಸದಾಗಿ 'ನಂಬಿಕೆ ನಕ್ಷೆ' ಯೋಜನೆಯನ್ನು ಜಾರಿಗೆ ತರಲಾಗಿತ್ತು. ಈ ಮೂಲಕ ನಿವೇಶನ ವಿಚಾರದಲ್ಲಿ ಹೊಸ ಕ್ರಮದ ಬಗ್ಗೆ ತಿಳಿಸಿ ಸರ್ಕಾರ ಭಾರಿ ಪ್ರಚಾರ ಹೊಡೆದಿತ್ತು. ಆದರೆ ಈಗ ಉಲ್ಟಾ ಹೊಡೆಯಿತೇ ಎಂಬ ಅನುಮಾನ ವ್ಯಕ್ತವಾಗಿದೆ. ಈ ಕುರಿತು ಆರ್.ಅಶೋಕ್ ಲೇವಡಿ ಮಾಡಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟ್ಟರ್ (ಎಕ್ಸ್) ನಲ್ಲಿ ಪೋಸ್ಟ್ ಮಾಡಿರುವ ಆರ್.ಅಶೋಕ್ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ 4 ಸಾವಿರ ಚದರ ಅಡಿ (50X80) ವಿಸ್ತೀರ್ಣದ ವರೆಗಿನ ನಿವೇಶನದಲ್ಲಿ ಕಟ್ಟಡ ನಿರ್ಮಿಸಲು ಆನ್‌ಲೈನ್ ಮೂಲಕ ನಕ್ಷೆ ಮಂಜೂರಾತಿಗೆ ʼನಂಬಿಕೆ ನಕ್ಷೆʼ ಯೋಜನೆ ಜಾರಿಗೆ ತರಲಾಗುತ್ತಿದೆ ಎಂದು ಸರ್ಕಾರ ಹೇಳಿತ್ತು. ಈ ಮೂಲಕ ಬಿಟ್ಟಿ ಪ್ರಚಾರ ಪಡೆದುಕೊಂಡ ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರ, ಇದೀಗ ಏಕಾಏಕಿ ನಿಯಮ ಬದಲಾವಣೆ ಮಾಡಿದೆ. ಬಿಡಿಎ ಬಡಾವಣೆಗಳಲ್ಲಿರುವ ನಿವೇಶನಗಳಿಗೆ ಬಿಡಿಎ ಬಳಿಯೇ ನಕ್ಷೆ ಅನುಮತಿ ಪಡೆಯಬೇಕು ಎಂಬ ಆದೇಶಕ್ಕೆ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ ತಾವು ನಂಬಿಕೆ ನಕ್ಷೆ ಯೋಜನೆ ಜಾರಿ ಮಾಡುವಾಗ ಬಿಬಿಎಂಪಿ ಮತ್ತು ಬಿಡಿಎ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿರಲಿಲ್ಲವೇ?. ಬಿಬಿಎಂಪಿ ಮತ್ತು ಬಿಡಿಎ ನಡುವೆ ತಾಳಮೇಳವಿಲ್ಲದೆ ನಿಯಮಗಳನ್ನು ಮನಬಂದಂತೆ ಬದಲಾಯಿಸಿದರೆ ಸಾರ್ವಜನಿಕರಿಗೆ ತೊಂದರೆ ಆಗುವುದಿಲ್ಲವೇ? ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ.
ಈ ತುಘಲಕ್ ಸರ್ಕಾರದ ಆಡಳಿತದಲ್ಲಿ ಸಚಿವರಿಗೆ ಅಧಿಕಾರಿಗಳ ಮೇಲೆ ಹಿಡಿತವೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಇಲಾಖೆಗಳ ನಡುವೆ ಸಮನ್ವಯತೆ ಇಲ್ಲದಂತಾಗಿದೆ. ಸಾರ್ವಜನಿಕರು ತಮ್ಮ ಸ್ವಂತ ನಿವೇಶನದಲ್ಲಿ ತಮ್ಮ ಸ್ವಂತ ದುಡ್ಡಿನಲ್ಲಿ ಮನೆ ಕಟ್ಟಿಸಬೇಕಾದರೂ ವರ್ಷಗಟ್ಟಲೆ ಬಿಬಿಎಂಪಿ, ಬಿಡಿಎ ಕಚೇರಿಗಳಿಗೆ ಅಲೆದಾಟ ನಡೆಸಬೇಕಾದ ದುಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಸರ್ಕಾರ ನಡೆಯಗ್ಗೆ ಆಕ್ರೋಶ ಹೊರ ಹಾಕಿದ್ದಾರೆ.
ನಂಬಿಕೆ ನಕ್ಷೆ ಯೋಜನೆ ಉದ್ದೇಶ ಏನು?
ನಂಬಿಕೆ ನಕ್ಷೆ ಯೋಜನೆಯು ಆಸ್ತಿ ಮಾಲೀಕರು, ಇಂಜಿನಿಯರ್ ಇಲ್ಲವೇ ವಾಸ್ತುಶಿಲ್ಪಿಗಳಿಗೆ ಕಟ್ಟಡ ಯೋಜನೆಗಳಿಗೆ ಇದು ಅನುಮತಿ ನೀಡುತ್ತದೆ. ಆನ್‌ಲೈನ್ ಮೂಲಕ ಒಪ್ಪಿಗೆ ನೀಡುವ ಸಲುವಾಗಿ, ಕಚೇರಿಗಳಿಗೆ ಅಲೆದಾಟ ತಪ್ಪಿಸಲು ಮುಖ್ಯವಾಗಿ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಯೋಜನೆ ಜಾರಿಗೆ ಮಾಡಲಾಗಿದೆ ಎಂದು ಈ ಹಿಂದೆ ಸುದ್ದಿಗೋಷ್ಠಿಯಲ್ಲಿ ಡಿಕೆ ಶಿವಕುಮಾರ್ ತಿಳಿಸಿದ್ದರು.
ಮುಖ್ಯ ವಿಷಯವೆಂದರೆ, ಆಸ್ತಿ, ನಿವೇಶನ ಮಾಲೀಕರು ಕಟ್ಟಡ ನಿರ್ಮಾಣಕ್ಕೆ ಅನುಮೋದನೆಯನ್ನು ಈ ನಂಬಿಕೆ ನಕ್ಷೆ ಯೋಜನೆಯಡಿ ಪಡೆಯಬೇಕಾಗುತ್ತದೆ. ಪಡೆದ ಬಳಿಕ ಮಾಲೀಕರಿಗೆ ಯೋಜನೆಯಡಿ ತಾತ್ಕಾಲಿಕವಾಗಿ ಅನುಮೋದನೆ ಸಿಕ್ಕಂತಾಗುತ್ತದೆ. ಅದಾದ ಬಳಿಕ ಬಿಬಿಎಂಪಿಯಿಂದ ಅಂತಿಮ ಅನುಮೋದನೆ ಪಡೆಯಬೇಕು. ಅದಕ್ಕಾಗಿ ಬಿಬಿಎಂಪಿಗೆ ಆನ್‌ಲೈನ್ ಮೂಲಕ ಅನಮತಿ ಕೋರಬಹುದಾಗಿದೆ ಎಂದು ನಿಯಮ ಇದೆ.












Click it and Unblock the Notifications