ಡಿ.ಕೆ. ಶಿವಕುಮಾರ್ ಪರ ಪ್ರತಿಭಟನೆ : ಎಚ್‌ಡಿಕೆ ಗೈರಾಗಿದ್ದು ಏಕೆ?
ಬೆಂಗಳೂರು, ಸೆಪ್ಟೆಂಬರ್ 11 : ಮಾಜಿ ಸಚಿವ, ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕ ಡಿ. ಕೆ. ಶಿವಕುಮಾರ್ ಬಂಧನ ಖಂಡಿಸಿ ನಡೆಯುತ್ತಿರುವ ಬೃಹತ್ ಪ್ರತಿಭಟನೆಗೆ ಎಚ್. ಡಿ. ಕುಮಾರಸ್ವಾಮಿ ಗೈರಾಗಿದ್ದಾರೆ.
ಬುಧವಾರ ಬೆಂಗಳೂರಿನ ಬಸನವಗುಡಿ ನ್ಯಾಷನಲ್ ಕಾಲೇಜು ಮೈದಾನದಿಂದ ಫ್ರೀಡಂ ಪಾರ್ಕ್ ತನಕ ಬೃಹತ್ ಪ್ರತಿಭಟನೆ ವಿಶ್ವಒಕ್ಕಲಿಗೆ ಒಕ್ಕೂಟದಡಿ ನಡೆಯುತ್ತಿದೆ. ಹಲವಾರು ಸಂಘಟನೆಗಳ ಪ್ರಮುಖ ನಾಯಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಚಿವ ಕೃಷ್ಣ ಬೈರೇಗೌಡ, ರಾಮಲಿಂಗಾ ರೆಡ್ಡಿ, ಮಾಜಿ ಸಂಸದ ಎಲ್. ಆರ್. ಶಿವರಾಮೇಗೌಡ, ವಿ. ಎಸ್. ಉಗ್ರಪ್ಪ, ಶಾಸಕಿ ಸೌಮ್ಯಾ ರೆಡ್ಡಿ, ಬಿಬಿಎಂಪಿಯ ಅನೇಕ ಸದಸ್ಯರು ಭಾಗವಹಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಮತ್ತು ಡಿ. ಕೆ. ಶಿವಕುಮಾರ್ ಆಪ್ತರಾದ ಎಚ್. ಡಿ. ಕುಮಾರಸ್ವಾಮಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿಲ್ಲ. ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರಿಗೂ ಆಹ್ವಾನ ನೀಡಲಾಗಿತ್ತು. ಆದರೆ, ಅವರು ಸಹ ಗೈರಾಗಿದ್ದಾರೆ.
ಚನ್ನಪಟ್ಟಣದ ಕಾರ್ಯಕ್ರಮವೊಂದರಲ್ಲಿ ಎಚ್. ಡಿ. ಕುಮಾರಸ್ವಾಮಿ ಬುಧವಾರ ಪಾಲ್ಗೊಂಡಿದ್ದರು. ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ಈ ಮೊದಲೇ ನಿಗದಿಯಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇನೆ. ನನಗೆ ಪ್ರತಿಭಟನೆಗೆ ಆಹ್ವಾನವಿರಲಿಲ್ಲ. ಆದರೂ ಕೂಡ ನಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ" ಎಂದರು.
"ನನಗೆ ಮೊದಲೇ ಆಹ್ವಾನ ನೀಡಿದ್ದರೆ ನಾನು ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿದ್ದೆ. ಇನ್ನು ಕಾರ್ಯಕ್ರಮದ ಜಾಹೀರಾತಿನಲ್ಲಿ ನನ್ನ ಫೋಟೋ ಕೂಡ ಹಾಕಿದ್ದಾರೆ ಎಂದು ತಿಳಿಯಿತು. ಮುಂದೆ ಕುಮಾರಸ್ವಾಮಿಯನ್ನು ಬಂಧಿಸುತ್ತಾರೆಂದು ಅದರಲ್ಲಿ ಇದೆ. ಆದರೆ, ಈ ಕುಮಾರಸ್ವಾಮಿಯನ್ನು ಯಾರು, ಏನು ಮಾಡುವುದಕ್ಕೆ ಆಗುವುದಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ" ಎಂದು ಸ್ಪಷ್ಟಪಡಿಸಿದರು.












Click it and Unblock the Notifications