ಈ ವಾರವೇ ಬಿಜೆಪಿ ಶಾಸಕಾಂಗ ಪಕ್ಷದ ಸಭೆ: ವಿಪಕ್ಷ ನಾಯಕ ಸ್ಥಾನದ ರೇಸ್‌ನಲ್ಲಿ ಯಾರಿದ್ದಾರೆ?
ಬೆಂಗಳೂರು, ಮೇ 15: ವಿಧಾನಸಭಾ ಚುನಾವಣೆಯಲ್ಲಿ 66 ಸೀಟು ಪಡೆದು ವಿರೋಧ ಪಕ್ಷದ ಸ್ಥಾನದಲ್ಲಿರುವ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಈ ವಾರದಲ್ಲಿ ನಡೆಯಲಿದೆ. ಈ ಸಭೆಯಲ್ಲಿ ವಿಧಾನಸಭೆ ವಿರೋಧಪಕ್ಷ ನಾಯಕರ ಯಾರೆಂಬುದು ನಿರ್ಧಾರವಾಗಲಿದೆ.
ಕಾಂಗ್ರೆಸ್ 135 ಸ್ಥಾನ ಪಡೆಯುವ ಮೂಲಕ ಬಿಜೆಪಿ ಪಕ್ಷನವನ್ನು ವಿರೋಧ ಪಕ್ಷದಲ್ಲಿ ಕೂರಿಸಿದೆ. ಕಮಲ ಪಾಳಯದಲ್ಲಿ ಒಕ್ಕಲಿಗ ಸಮುದಾಯ ಶಾಸಕ ಆರ್ ಅಶೋಕ್, ಲಿಂಗಾಯತ-ಪಂಚಮಸಾಲಿ ಸಮುದಾಯದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಹಂಗಾಮಿ ಸಚಿವ ಈಡಿಗ ಸಮುದಾಯದ ವಿ.ಸುನೀಲ್ ಕುಮಾರ್ ಅವರು ಈ ವಿಪಕ್ಷ ನಾಯಕ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಇತ್ತ ಬಿಜೆಪಿಯ ಇನ್ನಿತರ ಹಿರಿಯ ನಾಯಕರುಗಳು ಮುಖ್ಯಮಂತ್ರಿ ಹುದ್ದೆ ಸೇರಿದಂತೆ ಹಲವು ಇಲಾಖೆಗಳನ್ನು ನಿಭಾಯಿಸಿದ್ದ ಬಸವರಾಜ ಬೊಮ್ಮಾಯಿ ಅವರು ವಿರೋಧ ಪಕ್ಷದ ನಾಯಕರಾಗಲು ಒಲವು ತೋರಿದ್ದಾರೆ ಎನ್ನಲಾಗಿದೆ. ಈ ಸ್ಥಾನಕ್ಕೆ ಅರ್ಹರನ್ನೇ ಕೂರಿಸಬೇಕಿದೆ. ಕಾರಣ ವಿಧಾನಸಭೆಯಲ್ಲಿ ರಾಜ್ಯ ಸರ್ಕಾರವನ್ನು ಮೂಲೆಗುಂಪು ಮಾಡುವ ನಿರ್ಣಾಯಕ ಸ್ಥಾನವಾಗಿದೆ. ಹೀಗಾಗಿ ಅನುಭವಿ, ಜವಾಬ್ದಾರಿಯುತ, ವಾಕ್ ಚಾತುರ್ಯದ ನಾಯಕರನ್ನೇ ಈ ಸ್ಥಾನ ಬೇಡುತ್ತದೆ.
ಬಸವರಾಜ ಬೊಮ್ಮಾಯಿ ಮೇಲೆ ಬಿಜೆಪಿ ಒಲವು
ಭಾನುವಾರ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಪ್ರಮುಖ ನಾಯಕರ ಸಭೆಯ ನಂತರ ಸುದ್ದಿಗಾರರೊಂದಿಗೆ ಬಸವರಾಜ ಬೊಮ್ಮಾಯಿ ಮಾತನಾಡಿದರು. ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಮುಂದಿನ 3-4 ದಿನಗಳಲ್ಲಿ ಹೊಸ ಶಾಸಕರ ಸಭೆ ಕರೆದಿದ್ದು, ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಾಗುವುದು ಎಂದರು.
ಬಸವರಾಜ ಬೊಮ್ಮಾಯಿಯವರು ಲಿಂಗಾಯತ ಸಾದರ ವಿಭಾಗಕ್ಕೆ ಸೇರಿದವರಾಗಿದ್ದಾರೆ. ಅಲ್ಲದೇ ಅವರು ಜಲಸಂಪನ್ಮೂಲ, ಹಣಕಾಸು ಮತ್ತು ಗೃಹ ಇಲಾಖೆಗಳನ್ನು ಜವಾಬ್ದಾರಿಯುವಾಗಿ ನಿಭಾಯಿಸಿದ್ದಾರೆ. ಸದನದಲ್ಲಿ ಅದ್ಭುತವಾಗಿ ಮಾತನಾಡಬಲ್ಲ ಅರ್ಹರು ಅವರಾಗಿದ್ದಾರೆ. ಅವರೇ ವಿರೋಧ ಪಕ್ಷದ ನಾಯಕರಾಗುವ ಸ್ಪರ್ಧೆಯಲ್ಲಿ ಮೊದಲಿದ್ದಾರೆ ಎಂದು ಬಿಜೆಪಿ ಹಿರಿಯ ನಾಯಕರೊಬ್ಬರು ಹೇಳಿದರು.

ಕೇಂದ್ರ ಹೈಕಮಾಂಡ್ ವರಿಷ್ಠರು ಬಿಜೆಪಿ ರಾಜ್ಯ ಘಟಕವನ್ನು ಸಂಪೂರ್ಣವಾಗಿ ಸರಿಪಡಿಸಲು ಮತ್ತು 2024 ರ ಲೋಕಸಭೆ ಚುನಾವಣೆಗೆ ಮುನ್ನ ಅರ್ಹ ಹುದ್ದೆಗಳಿಗೆ ಹೊಸ ಮುಖಗಳನ್ನು ಆಯ್ಕೆ ಮಾಡಬೇಕಿದೆ. ಅದು ಆಗದ ಹೊರತು ಅವರು ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಹಿಂದೆ ರಾಜ್ಯ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಗೋಹತ್ಯೆ ನಿಷೇಧ ಕಾನೂನುಗಳನ್ನು ರದ್ದುಗೊಳಿಸುವ ಮತ್ತು ಧಾರ್ಮಿಕ ಮತಾಂತರವನ್ನು ನಿಯಂತ್ರಿಸುವಂತಹ ಹಲವಾರು ನಿರ್ಧಾರಗಳನ್ನು ರದ್ದುಗೊಳಿಸುವ ನಿರೀಕ್ಷೆಯಿದೆ.
ಈ ಹಿನ್ನೆಲೆಯಲ್ಲಿ ಹಿಂದುತ್ವದ ಪ್ರಭಾವಿ ನಾಯಕರಾದ ಬಸನಗೌಡ ಪಾಟೀಲ್ ಯತ್ನಾಳ್ ಅಥವಾ ವಿ.ಸುನೀಲ್ ಕುಮಾರ್ ಅವರಂತಹ ನಾಯಕರ ಮೇಲೂ ಪಕ್ಷದೊಳಗೆ ಒಲವು ಇದೆ. ಕಾರಣ ಹೊಸ ಕಾಂಗ್ರೆಸ್ ಸರ್ಕಾರವನ್ನು ತೆಗೆದುಕೊಳ್ಳುವ ನೀರ್ಣಯಗಳ ವಿರುದ್ಧ ಸೆಣಸಲು ವಿಪಕ್ಷದಲ್ಲಿ ಇಂತವರ ಅಗತ್ಯತೆ ಇದೆ.
ಹೀಗಾಗಿ ಇವರನ್ನು ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಆಯ್ಕೆ ಮಾಡಬಹುದು ಅಂತಲೂ ಹೇಳಲಾಗುತ್ತಿದೆ. ಇಲ್ಲವೇ ಒಕ್ಕಲಿಗ ಸಮುದಾಯದ ಆರ್.ಅಶೋಕ್ ಮತ್ತು ಬ್ರಾಹ್ಮಣ ಸಮುದಾಯದ ಎಸ್.ಸುರೇಶ್ ಕುಮಾರ್ ಅವರನ್ನು ಈ ಸ್ಥಾನಕ್ಕೆ ಪರಿಗಣಿಸಬಹುದು ಎಂದು ಬಿಜೆಪಿ ಮೂಲಗಳು ತಿಳಿಸಿವೆ.












Click it and Unblock the Notifications