ಬಿಟಿಎಂ ಲೇಔಟ್; ರಾಮಲಿಂಗಾ ರೆಡ್ಡಿಗೆ ಎದುರಾಳಿ ಯಾರು?
ಬೆಂಗಳೂರು, ಏಪ್ರಿಲ್ 12; ಬೆಂಗಳೂರು ನಗರದ ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರ 4ನೇ ಚುನಾವಣೆಗೆ ಸಿದ್ಧವಾಗುತ್ತಿದೆ. ಕಾಂಗ್ರೆಸ್‌ನ ಭದ್ರಕೋಟೆಯಾಗಿರುವ ಕ್ಷೇತ್ರಕ್ಕೆ ಮಂಗಳವಾರ ಬಿಜೆಪಿ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ಕರ್ನಾಟಕದಲ್ಲಿ ಮೇ 10ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿಯೇ ಬಿಟಿಎಂ ಲೇಔಟ್ ಕ್ಷೇತ್ರಕ್ಕೆ ಹಾಲಿ ಶಾಸಕ ರಾಮಲಿಂಗಾ ರೆಡ್ಡಿ ಅಭ್ಯರ್ಥಿ ಎಂದು ಪಕ್ಷ ಘೋಷಣೆ ಮಾಡಿತ್ತು. ಮಂಗಳವಾರ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಿದೆ. ಕೆ. ಆರ್. ಶ್ರೀಧರ್ ರೆಡ್ಡಿ ಈ ಬಾರಿಯ ಚುನಾವಣೆಗೆ ಪಕ್ಷದ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದೆ. ಈ ಮೂಲಕ ಚುನವಣೆ ಕಣ ಸಿದ್ಧವಾಗಿದೆ. ಆದರೆ ಜೆಡಿಎಸ್ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ.

ಬಿಟಿಎಂ ಕ್ಷೇತ್ರದ ಬಿಜೆಪಿ ಟಿಕೆಟ್‌ಗಾಗಿ ಯುವ ಮೋರ್ಚಾದ ಅನಿಲ್ ಶೆಟ್ಟಿ, ಶ್ರೀಧರ್ ರೆಡ್ಡಿ, ಜಯದೇವ್ ಆಕಾಂಕ್ಷಿಗಳಾಗಿದ್ದರು. ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ರಾಮಲಿಂಗಾ ರೆಡ್ಡಿ ಸೋಲಿಸಬೇಕು ಎಂದು ಪ್ರಬಲ ಅಭ್ಯರ್ಥಿಗಾಗಿ ಬಿಜೆಪಿ ಹುಡುಕಾಟ ನಡೆಸಿತ್ತು. ಅಂತಿಮವಾಗಿ ಪಕ್ಷದ ಟಿಕೆಟ್ ಕೆ. ಆರ್. ಶ್ರೀಧರ್ ರೆಡ್ಡಿ ಪಾಲಾಗಿದೆ.
ಹ್ಯಾಟ್ರಿಕ್ ಗೆಲುವು; ಒಟ್ಟು 7 ಬಾರಿ ಗೆದ್ದಿರುವ ರಾಮಲಿಂಗಾ ರೆಡ್ಡಿ 2008ರಲ್ಲಿ ಬಿಟಿಎಂ ಲೇಔಟ್ ಕ್ಷೇತ್ರಕ್ಕೆ ಬಂದರು. 2008, 2013 ಮತ್ತು 2018ರ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಗೆಲ್ಲುವ ಮೂಲಕ ಅವರು ಹ್ಯಾಟ್ರಿಕ್ ಬಾರಿಸಿದ್ದಾರೆ. ರಾಮಲಿಂಗಾ ರೆಡ್ಡಿ ಗೆಲುವಿನ ಓಟಕ್ಕೆ ತಡೆ ಹಾಕಬೇಕು ಎಂದು ಬಿಜೆಪಿ ಈ ಬಾರಿಯ ಚುನಾವಣೆಯಲ್ಲಿ ತಂತ್ರ ರೂಪಿಸಿದೆ.

2018ರ ಚುನಾವಣೆಯಲ್ಲಿ ರಾಮಲಿಂಗಾ ರೆಡ್ಡಿ ಬಿಟಿಎಂ ಲೇಔಟ್ ಕ್ಷೇತ್ರದಲ್ಲಿ 67,085 ಮತಗಳನ್ನು ಪಡೆದು ಜಯಗಳಿಸಿದ್ದರು. ಲಲ್ಲೇಶ್ ರೆಡ್ಡಿ ಬಿಜೆಪಿ ಅಭ್ಯರ್ಥಿಯಾಗಿದ್ದರು. ಅವರು 46,607 ಮತಗಳನ್ನು ಪಡೆದಿದ್ದರು. 2013ರ ಚುನಾವಣೆಯಲ್ಲಿ ರಾಮಲಿಂಗಾ ರೆಡ್ಡಿ 69,712 ಮತಗಳನ್ನು ಪಡೆದು ಗೆದ್ದಿದ್ದರು. ಬಿಜೆಪಿಯ ಎನ್. ಸುಧಾಕರ್ 20,664 ಮತ ಪಡೆದಿದ್ದರು. 2008ರ ಚುನಾವಣೆಯಲ್ಲಿ ಬಿಜೆಪಿ ರಾಮಲಿಂಗಾ ರೆಡ್ಡಿಗೆ ಪ್ರಬಲ ಪೈಪೋಟಿ ನೀಡಿತ್ತು. ಜಿ. ಪ್ರಸಾದ್ ರೆಡ್ಡಿ 44,949 ಮತಗಳನ್ನು ಪಡೆದರೆ, ರಾಮಲಿಂಗಾ ರೆಡ್ಡಿ 46,805 ಮತಗಳನ್ನು ಪಡೆದು ಜಯಗಳಿಸಿದ್ದರು.
ಏಷ್ಯಾದ ಅತಿದೊಡ್ಡ ಕ್ಷೇತ್ರ ಎಂದು ಖ್ಯಾತಿಗಳಿಸಿದ್ದ ಉತ್ತರಹಳ್ಳಿಯಲ್ಲಿ ಬಿಟಿಎಂ ಲೇಔಟ್ ಇತ್ತು. 2008ರಲ್ಲಿ ಕ್ಷೇತ್ರ ಪುನರ್ ವಿಂಗಡನೆ ಆದಾಗ ಬಿಟಿಎಂ ಪ್ರತ್ಯೇಕ ಕ್ಷೇತ್ರವಾಗಿ ಅಸ್ತಿತ್ವಕ್ಕೆ ಬಂದಿತು. ಬಳಿಕ ನಡೆದ 3 ಚುನಾವಣೆಯಲ್ಲಿಯೂ ಕಾಂಗ್ರೆಸ್ ಗೆಲ್ಲುವ ಮೂಲಕ ಕ್ಷೇತ್ರವನ್ನು ತನ್ನ ಭದ್ರಕೋಟೆಯಾಗಿ ಮಾಡಿದೆ.
ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ನೇರ ಹಣಾಹಣ ಇದೆ. 2008ರಲ್ಲಿ ಪಕ್ಷದ ಅಭ್ಯರ್ಥಿ 6031, 2013ರಲ್ಲಿ 44,949 ಮತ್ತು 2018ರಲ್ಲಿ ಪಕ್ಷದ ಅಭ್ಯರ್ಥಿ 17,216 ಮತಗಳನ್ನು ಪಡೆದಿದ್ದಾರೆ. ಜಯನಗರ ಕ್ಷೇತ್ರ ಬಿಟ್ಟು ಬಿಟಿಎಂ ಲೇಔಟ್‌ಗೆ ಬಂದ ರಾಮಲಿಂಗಾ ರೆಡ್ಡಿ ಮೂರು ಚುನಾವಣೆ ಗೆಲ್ಲುವ ಮೂಲಕ ಕ್ಷೇತ್ರದಲ್ಲಿ ಭಾರೀ ಪ್ರಭಾವ ಬೆಳೆಸಿಕೊಂಡಿದ್ದಾರೆ.
ಬಿಟಿಎಂ ಕ್ಷೇತ್ರವನ್ನು ಬಿಟಿಎಂ ಲೇಔಟ್, ಜಕ್ಕಸಂದ್ರ, ಈಜಿಪುರ, ಕೋರಮಂಗಲ, ಲಕ್ಕಸಂದ್ರ, ಸದ್ದುಗುಂಟೆ ಪಾಳ್ಯವನ್ನು ಸೇರಿಸಿ ರಚನೆ ಮಾಡಲಾಗಿದೆ. ಭೈರಸಂದ್ರ ಮಾತ್ರ ಈ ಕ್ಷೇತ್ರದ ವ್ಯಾಪ್ತಿಗೆ ಸೇರುವುದಿಲ್ಲ. ರಾಮಲಿಂಗಾ ರೆಡ್ಡಿ 4 ಬಾರಿ ಜಯನಗರ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ಕ್ಷೇತ್ರದ ಮೇಲೆ ಅವರಿಗೆ ಈಗಲೂ ಹಿಡಿತವಿದೆ. 2018ರ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಪುತ್ರಿ ಸೌಮ್ಯಾ ರೆಡ್ಡಿಯನ್ನು ಗೆಲ್ಲಿಸಿಕೊಂಡು ಬಂದಿದ್ದಾರೆ. ಈ ಬಾರಿಯ ಚುನಾವಣೆಗೆ ಸಹ ಅವರೇ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ.
ಕ್ಷೇತ್ರದ ಒಟ್ಟು ಮತದಾರರು 2, 64,553. ಪುರುಷರು 1,38,299, ಮಹಿಳೆಯರು 1,26,212 ಮತ್ತು ತೃತೀಯ ಲಿಂಗಿಗಳು 42. ಈ ಬಾರಿಯ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯನ್ನು ಘೋಷಣೆ ಮಾಡಿದರೆ ಕ್ಷೇತ್ರದ ಚುನಾಣಾ ಕಣ ಅಂತಿಮವಾಗಲಿದೆ. ಏಪ್ರಿಲ್ 13ರಂದು ಚುನಾವಣೆ ಅಧಿಸೂಚನೆ ಪ್ರಕಟವಾಗಲಿದ್ದು, ಏಪ್ರಿಲ್ 20ರ ತನಕ ನಾಮಪತ್ರಗಳನ್ನು ಸಲ್ಲಿಸಬಹುದಾಗಿದೆ.












Click it and Unblock the Notifications