ಕೋವಿಡ್ ಲಸಿಕೆ ಸಿಕ್ಕ ಬಳಿಕ ದೊಡ್ಡ ಸವಾಲು ಯಾವುದು ಎಂದು ವಿವರಿಸಿದ WHO ವಿಜ್ಞಾನಿ
ಬೆಂಗಳೂರು, ಆಗಸ್ಟ್ 26: ಕೊರೊನಾ ವೈರಸ್‌ಗೆ ವಿವಿಧ ದೇಶಗಳಲ್ಲಿನ ಅನೇಕ ಔಷಧ ಸಂಸ್ಥೆಗಳು ಲಸಿಕೆ ಕಂಡುಹಿಡಿಯುವ ಪ್ರಯತ್ನದಲ್ಲಿ ನಿರತವಾಗಿವೆ. 20ಕ್ಕೂ ಹೆಚ್ಚು ಲಸಿಕೆಗಳನ್ನು ತಯಾರಿಸಿದ್ದು, ಅವುಗಳ ವಿವಿಧ ಹಂತಗಳ ಪ್ರಯೋಗಗಳು ನಡೆಯುತ್ತಿವೆ. ಕೋವಿಡ್‌ಅನ್ನು ಸುಲಭವಾಗಿ ಹಿಮ್ಮೆಟ್ಟಿಸುವ ಲಸಿಕೆ ತಯಾರಿಕೆಗೆ ಇನ್ನೂ ಹೆಚ್ಚಿನ ಸಮಯ ಬೇಕಾಗಬಹುದು ಎಂಬ ಅಭಿಪ್ರಾಯವಿದೆ.
Recommended Video
ಆದರೆ, ಕೋವಿಡ್ 19 ಲಸಿಕೆ ಸಿದ್ಧವಾದ ಬಳಿಕ ಉಂಟಾಗುವ ಅತಿ ದೊಡ್ಡ ಸವಾಲು ಯಾವುದು ಎಂಬುದನ್ನು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ, ಭಾರತದ ಸೌಮ್ಯ ಸ್ವಾಮಿನಾಥನ್ ವಿವರಿಸಿದ್ದಾರೆ.
ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಸಾರ್ವಜನಿಕ ನೀತಿ ಕೇಂದ್ರವು ಸಾರ್ವಜನಿಕ ನೀತಿ ಮತ್ತು ನಿರ್ವಹಣೆಯ ಕುರಿತು ಬುಧವಾರ ಆನ್‌ಲೈನ್ ಮೂಲಕ ಆಯೋಜಿಸಿದ್ದ 15ನೇ ಅಂತಾರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಮುಂದೆ ಓದಿ.

ಅತಿ ದೊಡ್ಡ ಸವಾಲು
ಶ್ರೀಮಂತ ದೇಶಗಳನ್ನು ಮುಖ್ಯವಾಗಿ ಈ ಲಸಿಕೆ ವ್ಯವಸ್ಥೆಯೊಳಗೆ ಬಿಟ್ಟುಕೊಳ್ಳದೆ ಸೀಮಿತ ಡೋಸ್‌ಗಳನ್ನು ಜಗತ್ತಿನಾದ್ಯಂತ ನ್ಯಾಯಸಮ್ಮತವಾಗಿ ವಿತರಿಸುವುದು ಅತ್ಯಂತ ದೊಡ್ಡ ಸವಾಲಾಗಿ ಪರಿಣಮಿಸಲಿದೆ ಎಂದು ಸೌಮ್ಯ ಸ್ವಾಮಿನಾಥನ್ ತಿಳಿಸಿದರು.

ನ್ಯಾಯೋಚಿತ ಹಂಚಿಕೆ
ನಾವಲ್ ಕೊರೊನಾ ವೈರಸ್‌ಗೆ ಲಸಿಕೆ ಸಿದ್ಧಪಡಿಸುತ್ತಿರುವುದರ ಕುರಿತು ಪ್ರತಿಕ್ರಿಯಿಸಿದ ಅವರು, '2021ರ ಆರಂಭದ ವೇಳೆಗೆ ನಾವು ಶುಭ ಸುದ್ದಿಯನ್ನು ಪಡೆಯಲೇಬೇಕಿದೆ. ಅದರ ಬಳಿಕ ನಮ್ಮ ಮುಂದೆ ಅತ್ಯಂತ ಪ್ರಮುಖ ಸವಾಲು ಎದುರಾಗಲಿದೆ. ಲಸಿಕೆಗಳನ್ನು ಅಳೆಯುವುದು, ಪೂರೈಕೆ ಮಾಡುವುದು ಮತ್ತು ಸೀಮಿತ ಡೋಸ್‌ಗಳು ಶ್ರೀಮಂತ ರಾಷ್ಟ್ರಗಳ ಪಾಲಾಗದಂತೆ ನೋಡಿಕೊಂಡು ಜಗತ್ತಿನಾದ್ಯಂತ ನ್ಯಾಯೋಚಿತವಾಗಿ ಹಂಚಿಕೆ ಮಾಡಬೇಕಾಗಿದೆ ಎಂದು ಹೇಳಿದರು.

ಭಾರತದಲ್ಲಿ ಉತ್ತಮ ಪ್ರಯತ್ನ
ಆದರೆ ಲಸಿಕೆ ವಿಚಾರದಲ್ಲಿ ಭಾರತ ಉತ್ತಮ ಸ್ಥಿತಿಯಲ್ಲಿದೆ. ಏಕೆಂದರೆ ಲಸಿಕೆ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಅನೇಕ ಕಂಪೆನಿಗಳು ಸ್ವಂತ ಪ್ರಯತ್ನ ಅಥವಾ ಸಹಯೋಗದೊಂದಿಗೆ ಕೆಲಸ ಮಾಡುತ್ತಿವೆ. ಭಾರತವು ಲಸಿಕೆಗಳ ಉತ್ಪಾದನೆಯ ಹಬ್ ಆಗಿದೆ. ಕೊರೊನಾ ವೈರಸ್ ಬಿಕ್ಕಟ್ಟು ಅಸಮಾನತೆಯನ್ನು ಮತ್ತಷ್ಟು ಉಲ್ಬಣಗೊಳಿಸಿದೆ. ಮತ್ತು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಗೊಳಿಸುವ ಹಾಗೂ ಸ್ಥಿತಿಸ್ಥಾಪಕತೆಯನ್ನು ಸುಧಾರಿಸಲು ದೊರಕಿರುವ ಕಲಿಕೆಯ ಅವಕಾಶವಾಗಿ ಪರಿಣಮಿಸಿದೆ ಎಂದರು.

ಮರಣ ಪ್ರಮಾಣ ಭೌಗೋಳಿಕತೆ ಆಧಾರಿತವೇ?
ಕೊರೊನಾ ವೈರಸ್ ಸೋಂಕಿನ ಎರಡನೆಯ ಹಂತದಲ್ಲಿ ಮರಣ ಪ್ರಮಾಣ ಹೆಚ್ಚಾಗಲಾರದು. ಸೋಂಕಿನಿಂದ ಉಂಟಾಗುವ ಸಾವಿನ ಪ್ರಮಾಣವು ಭೌಗೋಳಿಕತೆ ಮತ್ತು ಇತರೆ ಅಂಶಗಳಿಗೆ ಸಂಬಂಧಿಸಿದೆ ಎನಿಸುತ್ತದೆ. ಯುರೋಪ್ ಹಾಗೂ ಅಮೆರಿಕಗಳಲ್ಲಿ ಸಾವಿನ ಸಂಖ್ಯೆಗಿಂತ ದಕ್ಷಿಣ ಏಷ್ಯಾ ಮತ್ತು ಆಫ್ರಿಕಾಗಳಲ್ಲಿ ಸಾವಿನ ಪ್ರಮಾಣ ಕಡಿಮೆ ಇರುವುದು ಏಕೆ ಎನ್ನುವುದು ನಮಗೆ ಇನ್ನೂ ಗೊತ್ತಾಗಿಲ್ಲ ಎಂದು ಹೇಳಿದರು.












Click it and Unblock the Notifications