ಬೆಂಗಳೂರಿನ ಈ ಭಾಗದ ವೈಟ್‌ಟಾಪಿಂಗ್ ಕಾಮಗಾರಿ ಚುರುಕು!
ಬೆಂಗಳೂರಿನ ವಿವಿಧ ಭಾಗದಲ್ಲಿ ವೈಟ್‌ಟಾಪಿಂಗ್ ಕಾಮಗಾರಿ ನಡೆಯುತ್ತಿದ್ದು. ಡಾ: ರಾಜ್ ಕುಮಾರ್ ರಸ್ತೆಯಲ್ಲಿ ನಡೆಯುತ್ತಿರುವ ವೈಟ್ ಟಾಪಿಂಗ್ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯ ಡಾ. ರಾಜ್ ಕುಮಾರ್ ರಸ್ತೆ ನವರಂಗ್ ಚಿತ್ರಮಂದಿರದಿಂದ 10ನೇ ಕ್ರಾಸ್ ಜಂಕ್ಷನ್ ವರೆಗೆ ಸುಮಾರು 700 ಮೀಟರ್ ಉದ್ದದ ವೈಟ್ ಟಾಪಿಂಗ್ ಕಾಮಗಾರಿಯ ಸ್ಥಳಕ್ಕೆ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೆಲವೊಂದು ಪ್ರಮುಖ ಸೂಚನೆಗಳನ್ನು ಕೊಟ್ಟಿದ್ದಾರೆ.
ಜಲಮಂಡಳಿಯಿಂದ ಕುಡಿಯುವ ನೀರಿನ ಪೈಪ್‌ಲೈನ್ ಮತ್ತು ಒಳಚರಂಡಿ ಪೈಪ್‌ಲೈನ್ ಕಾಮಗಾರಿಗಳು ನಡೆಯುತ್ತಿದ್ದು, ಅವುಗಳಿಗೆ ಚೇಂಬರ್‌ಗಳನ್ನು ಅಳವಡಿಸಲಾಗುತ್ತಿದೆ. ಈ ಕಾರ್ಯಗಳಿಗೆ ವೇಗ ನೀಡಿ ಶೀಘ್ರ ಪೂರ್ಣಗೊಳಿಸುವಂತೆ ಆಯುಕ್ತರು ಸೂಚಿಸಿದ್ದು, ಪಾಲಿಕೆ ವತಿಯಿಂದ ಮಳೆನೀರು ಸುಗಮ ಹರಿವಿಗಾಗಿ 1000 ಮಿ.ಮೀ ಪೈಪ್‌ಲೈನ್ ಅಳವಡಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಪ್ರಗತಿಯಲ್ಲಿರುವ ಕಾಮಗಾರಿಗಳನ್ನು 15 ದಿನಗಳೊಳಗಾಗಿ ಪೂರ್ಣಗೊಳಿಸಿ, ನಂತರ ವೈಟ್ ಟಾಪಿಂಗ್ ಕಾಮಗಾರಿಯನ್ನು ಕೈಗೆತ್ತಿಕೊಂಡು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ನಿರ್ದೇಶನ ನೀಡಿದ್ದಾರೆ.

ಕ್ರಾಸ್ ಕಲ್ವರ್ಟ್ ಕಾಮಗಾರಿ ಆರಂಭ: ವೈಟ್ ಟಾಪಿಂಗ್ ಕಾಮಗಾರಿ ನಡೆಯಲಿರುವ ಸ್ಥಳದಲ್ಲಿ ಮೂವರು ಕ್ರಾಸ್ ಕಲ್ವವರ್ಟ್ ಗಳು ನಿರ್ಮಾಣವಾಗಲಿದ್ದು, ಈಗಾಗಲೇ ಒಂದು ಕಲ್ವರ್ಟ್ ಕಾಮಗಾರಿ ಪ್ರಾರಂಭಗೊಂಡಿದೆ. ಅದನ್ನು ತ್ವರಿತವಾಗಿ ಪೂರ್ಣಗೊಳಿಸಲು ಆಯುಕ್ತರು ಸೂಚಿಸಿದ್ದಾರೆ. ಕಾಮಗಾರಿ ನಡೆಯುವ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಇನ್ನೊಂದು ಬದಿಯಲ್ಲಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಕಾಮಗಾರಿ ಸಮಯದಲ್ಲಿ ಸಂಚಾರ ದಟ್ಟಣೆ ಉಂಟಾಗದಂತೆ ಹಾಗೂ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಈ ಸಂದರ್ಭದಲ್ಲಿ ಪಶ್ಚಿಮ ನಗರ ಪಾಲಿಕೆ ಆಯುಕ್ತರಾದ ಡಾ: ರಾಜೇಂದ್ರ ಕೆ.ವಿ, ಜಂಟಿ ಆಯುಕ್ತೆ ಆರತಿ ಆನಂದ್, ಮುಖ್ಯ ಎಂಜಿನಿಯರ್‌ರಾದ ಸ್ವಯಂಪ್ರಭಾ ಸೇರಿದಂತೆ ಹಲವರು ಹಾಜರಿದ್ದರು.
ನಾಳೆ ಫೋನ್-ಇನ್ ಕಾರ್ಯಕ್ರಮ: ಬೆಂಗಳೂರಿನ ಜನರ ಕುಂದುಕೊರತೆಗಳನ್ನು ನೇರವಾಗಿ ಆಲಿಸಿ, ವೇಗವಾಗಿ ಪರಿಹರಿಸುವ ಉದ್ದೇಶದಿಂದ, ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಅವರು ಪ್ರತಿ ಶುಕ್ರವಾರ "ಫೋನ್-ಇನ್ ಕಾರ್ಯಕ್ರಮ" ನಡೆಸುತ್ತಿದ್ದಾರೆ. ಮುಂದಿನ ಫೋನ್-ಇನ್ ಕಾರ್ಯಕ್ರಮವು ಅಕ್ಟೋಬರ್ 31, ಶುಕ್ರವಾರ ಬೆಳಿಗ್ಗೆ 7 ರಿಂದ 9 ನಡೆಯಲಿದೆ. ಈ ವೇಳೆ ಸಾರ್ವಜನಿಕರಿಂದ ಬರುವ ಅಹವಾಲುಗಳನ್ನು ಆಯುಕ್ತರು ಸ್ವತಃ ಸ್ವೀಕರಿಸಿ ಕ್ರಮ ಕೈಗೊಳ್ಳಲಿದ್ದಾರೆ.
ರಸ್ತೆ ಗುಂಡಿಗಳು, ಬೀದಿ ದೀಪಗಳ ನಿರ್ವಹಣೆ, ಕಸದ ಸಂಗ್ರಹಣೆ, ಅಪಾಯಕಾರಿ ಹಂತದಲ್ಲಿರುವ ಮರಗಳ ಕೊಂಬೆಗಳ ತೆರವು, ಸೊಳ್ಳೆ ನಿಯಂತ್ರಣ ಕ್ರಮಗಳು, ಬೀದಿ ನಾಯಿಗಳ ತೊಂದರೆ, ಉದ್ಯಾನವನಗಳ ಸಂರಕ್ಷಣೆ, ಅನಧಿಕೃತ ಬ್ಯಾನರ್‌ಗಳು ಮತ್ತು ಪೋಸ್ಟರ್‌ಗಳ ತೆರವು, ಪಾದಚಾರಿ ಮಾರ್ಗದ ಅತಿಕ್ರಮಣ, ಇ-ಖಾತಾ ವಿಷಯಗಳು ಹಾಗೂ ಚರಂಡಿ ಶುದ್ಧೀಕರಣ ಕುರಿತು ತಮ್ಮ ದೂರುಗಳನ್ನು ನೀಡಬಹುದು.
ಎಲ್ಲಾ ದೂರುಗಳು ಸಹಾಯ 2.0 ಪೋರ್ಟಲ್ ಮೂಲಕ ದಾಖಲಾಗಲಿದ್ದು, ಸಂಬಂಧಿಸಿದ ಅಧಿಕಾರಿಗಳಿಗೆ ತಕ್ಷಣ ಕಳುಹಿಸಲಾಗುತ್ತದೆ. ಪ್ರತಿ ದೂರು ದಾಖಲಾದ ಬಳಿಕ ನಾಗರಿಕರಿಗೆ SMS ಮುಖಾಂತರ ದೂರು ಸಂಖ್ಯೆ ಮತ್ತು ಅಧಿಕಾರಿಯ ಸಂಪರ್ಕ ಮಾಹಿತಿ ದೊರೆಯುತ್ತದೆ ಎಂದು ಜಿಬಿಎ ಅಧಿಕಾರಿಗಳು ತಿಳಿಸಿದ್ದಾರೆ. ಮೊಬೈಲ್/ವಾಟ್ಸಪ್: 9480685705 ಹಾಗೂ ಲ್ಯಾಂಡ್‌ಲೈನ್: 080-22975936 / 080-23636671. ಅಲ್ಲದೇ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಸಹಾಯ ಮೊಬೈಲ್ ಆಪ್ ಮೂಲಕವೂ ಸಲ್ಲಿಸಬಹುದು ಎಂದು ಹೇಳಲಾಗಿದೆ.












Click it and Unblock the Notifications