ಕರ್ನಾಟಕ ಬಂದ್‌ಗೆ ಕರೆ: ಯಾವೆಲ್ಲ ಕನ್ನಡಪರ ಸಂಘಟನೆಗಳು ಬೆಂಬಲಿಸಿವೆ! ಇಲ್ಲಿದೆ ಮಾಹಿತಿ
ಬೆಂಗಳೂರು, ಫೆಬ್ರವರಿ 28: ಬೆಳಗಾವಿಯಲ್ಲಿ ನಡೆದ ಘಟನೆ ಖಂಡಿಸಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗಾರಾಜ್ ನೇತೃತ್ವದಲ್ಲಿ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಅನೇಕ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಇನ್ನು ಕೆಲವರು ಬೆಂಬಲಿಸುವುದಾಗಿ ತಿಳಿಸಿದೆ. ಇದೀಗ ಕನ್ನಡ ಫಿಲ್ಮ್ ಚೇಂಬರ್ ಸಹ ಬೆಂಬಲ ನೀಡುವುದಾಗಿ ತಿಳಿಸಿದೆ. ಈ ಸಂಬಂಧ ಮಾರ್ಚ್ 03ರಂದು ಮಹತ್ವದ ಸಭೆ ನಡೆಸಿ ತಿರ್ಮಾನ ಪ್ರಕಟಿಸುವುದಾಗಿ ಹೇಳಿದೆ.
ಬೆಳಗಾವಿಯಲ್ಲಿ ಕರ್ನಾಟಕ ಸಾರಿಗೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವುದು, ಕನ್ನಡಿಗರಿಗೆ ಅಪಮಾನ ಮಾಡಿ ಮರಾಠಿಗರು ದೌರ್ಜನ್ಯ ಮೆರೆದಿದ್ದಾರೆ. ಕನ್ನಡಪರ ಸಂಘಟನೆಗಳು ಮಾರ್ಚ್ 22ರಂದು ರಾಜ್ಯ ಬಂದ್‌ಗೆ ಕರೆ ನೀಡಿವೆ. ಇದಕ್ಕೆ ತಾವು ಬೆಂಬಲಿಸುವುದಾಗಿ ಫಿಲ್ಮ್ ಚೇಂಬರ್ ಅಧ್ಯಕ್ಷ ಎಂ.ನರಸಿಂಹಲು ಶುಕ್ರವಾರ ತಿಳಿಸಿದೆ.

ಕನ್ನಡ, ನೆಲ, ಜಲ ಭಾಷೆ ವಿಚಾರಕ್ಕೆ ಬಂದರೆ ನಮ್ಮ ಬೆಂಬಲ ಸದಾ ಇರುತ್ತದೆ. ಮಾರ್ಚ್ 22ರ ಬಂದ್ ದಿನ ಚಿತ್ರೀಕರಣ ಮಾಡದೇ, ಸಿನಿಮಾ ಥಿಯೇಟರ್ ಬಂದ್ ಮಾಡಿ ನಿಮಗೆ ಬೆಂಬಲಿಸಲಾಗುವುದು. ಈ ಸಂಬಂಧ ಮಾರ್ಚ್ 3ರಂದು ಸಭೆ ನಡೆಸಲಾಗುವುದು. ಅಂದು ವಿವಿಧ ಚೇಂಬರ್ ಅಂಗ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಸಭೆ ಸೇರಿ ಚರ್ಚಿಸಿ ನಿರ್ಧಾರ ತಿಳಿಸಲಾಗುವುದು.
ಸದ್ಯ ಬಂದ್‌ಗೆ ಕರೆ ನೀಡಿದ ಯಾವ ಸಂಘಟನೆಗಳು ನಮ್ಮನ್ನು ಸಂಪರ್ಕಿಸಿಲ್ಲ. ಈ ನೆಲ, ಜಲ, ಭಾಷೆಗೆ ತೊಂದರೆ ಆದಾಗ ಚಿತ್ರರಂಗ ಸಹ ಜೊತೆಗೆ ನಿಲ್ಲುತ್ತದೆ ಎಂದು ಅವರು ತಿಳಿಸಿದರು.

ಈಗಾಗಲೇ ರಾಜ್ಯ ಆಟೋ ಯೂನಿಯನ್ ವಾಟಾಳ್ ನಾಗಾರಾಜ್ ಅವರ ಕರೆಗೆ ಓಗೊಟ್ಟು ಬಂದ್‌ಗೆ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. ಮರಾಠಿ ಪುಂಡರ ವಿರುದ್ಧ ಕಿರಿ ಕಾರಿದ್ದಾರೆ. ಇದೇ ರೀತಿ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣವು ಅಖಂಡ ಕರ್ನಾಟಕ ಬಂದ್‌ಗೆ ಸಹಕಾರ ನೀಡುವುದಾಗಿ, ಬೆಂಬಲಿಸುವುದಾಗಿ ತಿಳಿಸಿದೆ.
ಬೆಳಗಾವಿಯಲ್ಲಿ ಮಹಾರಾಷ್ಟ್ರ ಪುಂಡರ ದಬ್ಬಾಳಿಕೆಗೆ ಅಂತ್ಯ ಹಾಡಬೇಕಿದೆ. ಸರ್ಕಾರ ಸದರಿ ಘಟನೆ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಬೇಕು. ಕನ್ನಡ ನೆಲದಲ್ಲಿ ಕನ್ನಡಿಗರ ಮೇಲಿನ ದೌರ್ಜನ್ಯ ಖಂಡನೀಯ ಎಂದರು. ಬಂದ್ ವೇಳೆ ನಮ್ಮ ಬಣದಿಂದ ಹೋರಾಟ ನಡೆಸುವುದಾಗಿ ಪ್ರವೀಣ್ ಶೆಟ್ಟಿ ಅವರು ಪ್ರತಿಕ್ರಿಯಿಸಿದ್ದಾರೆ.
ಕರ್ನಾಟಕ ಬಂದ್‌ಗೆ ಸದ್ಯ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ನಾರಾಯಣ ಗೌಡ ಬಣದಿಂದ ಬೆಂಬಲ ಇಲ್ಲ ಎನ್ನಲಾಗುತ್ತಿದೆ. ಈಗಾಗಲೇ ಕರ್ನಾಟಕ ಲೋಕಸೇವಾ ಆಯೋಗದ ಲೋಪದೋಷ ವಿಚಾರವಾಗಿ ಅಭ್ಯರ್ಥಿಗಳ ಪರವಾದ ಹೋರಾಟದಲ್ಲಿ ಪಾಲ್ಗೊಂಡಿದ್ದೇವೆ. ಸಾವಿರಾರು ಅಭ್ಯರ್ಥಿಗಳ ಭವಿಷ್ಯ ಇದರಲ್ಲಿ ಅಡಗಿದೆ. ಹೀಗಾಗಿ ಬಂದ್‌ಗೆ ಬೆಂಬಲ ನೀಡಿಲ್ಲ ಎನ್ನಲಾಗಿದೆ.
ರಾಜ್ಯ ಬಂದ್ ಗೆ ಇನ್ನೂ ಮೂರು ವಾರಗಳ ಸಮಯವಿದೆ. ಅಷ್ಟರೊಳಗೆ ಸಾರಿಗೆ ನೌಕರರ ಸಂಘ, ಖಾಸಗಿ ವಾಹನಗಳ ಸಂಘಟ, ಇನ್ನಷ್ಟು ಕನ್ನಡ ಸಂಘ-ಸಂಸ್ಥೆಗಳು ಕೈ ಜೋಡಿಸುವ, ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.












Click it and Unblock the Notifications