6 ಸಾವಿರ ರಸ್ತೆ ಗುಂಡಿ ಮುಚ್ಚಿದ ಬಿಬಿಎಂಪಿ ಇತ್ತ ನೋಡಲಿ!
ಬೆಂಗಳೂರು, ನವೆಂಬರ್ 19 : ಬೆಂಗಳೂರು ನಗರದ ರಸ್ತೆಗಳು ಗುಂಡಿ ಮುಕ್ತವಾಗುವುದು ಯಾವಾಗ?. ರಸ್ತೆಗಳ ಕಥೆ ಹಾಗಿರಲಿ ಈಗ ಫ್ಲೈ ಓವರ್‌ನಲ್ಲಿಯೂ ಗುಂಡಿಗಳು ಕಂಡು ಬರುತ್ತಿದ್ದು, ಬಿಬಿಎಂಪಿ ವಿರುದ್ಧ ಜನರು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.
ಅಕ್ಟೋಬರ್ ತಿಂಗಳಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪತ್ತೆ ಹಚ್ಚಿದ ರಸ್ತೆಗುಂಡಿಗಳ ಸಂಖ್ಯೆ 6,520. ನವೆಂಬರ್ 10ರೊಳಗೆ ಎಲ್ಲಾ ಗುಂಡಿ ಮುಚ್ಚುತ್ತೇವೆ ಎಂದು ಹೇಳಿದ್ದ ಬಿಬಿಎಂಪಿ ಅಧಿಕಾರಿಗಳು ತಮ್ಮ ಗಡುವನ್ನು ವಿಸ್ತರಣೆ ಮಾಡಿಕೊಂಡಿದ್ದರು.
ಬೆಂಗಳೂರು ನಗರಾಭಿವೃದ್ಧಿ ಖಾತೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಕೈಯಲ್ಲಿ ಇದೆ. ಬಿಬಿಎಂಪಿಯಲ್ಲಿ ಬಿಜೆಪಿಯೇ ಅಧಿಕಾರದಲ್ಲಿದೆ. ಆದರೆ, ನಗರದ ರಸ್ತೆಗಳು ಮಾತ್ರಗುಂಡಿ ಮುಕ್ತವಾಗುತ್ತಿಲ್ಲ. ನವೆಂಬರ್ 10ರಂದು ನಗರದಲ್ಲಿ ಇನ್ನೂ 1 ಸಾವಿರಕ್ಕೂ ಅಧಿಕ ಗುಂಡಿ ಮುಚ್ಚಬೇಕು ಎಂದು ಬಿಬಿಎಂಪಿ ಅಧಿಕಾರಿಗಳು ಲೆಕ್ಕ ಕೊಡುತ್ತಿದ್ದರು.

ಮಹದೇವಪುರ ವಿಧಾನಸಭಾ ಕ್ಷೇತ್ರವ ವ್ಯಾಪ್ತಿಯ ಚಿನ್ನಪ್ಪನಹಳ್ಳಿ ಮುಖ್ಯ ರಸ್ತೆಯನ್ನು ಅಧಿಕಾರಿಗಳು ಒಮ್ಮೆ ನೋಡಿದರೆ ಜನರ ಕಷ್ಟ ಏನೆಂದು ಅರ್ಥವಾಗುತ್ತದೆ. ಹೂಡಿ ಅಂಡರ್‌ಪಾಸ್ ರಸ್ತೆ, ಕೋಡಿಗೆಹಳ್ಳಿ ಮುಖ್ಯರಸ್ತೆ, ಅಯ್ಯಪ್ಪ ನಗರ ಮುಂತಾದ ಕಡೆ ಒಮ್ಮೆ ಸಂಚಾರ ನಡೆಸಿದರೆ ವಾಹನ ಸವಾರರು ಪಡುತ್ತಿರುವ ಕಷ್ಟದ ಅರಿವು ಎಲ್ಲರಿಗೂ ಆಗುತ್ತದೆ.
ವೈಟ್ ಫೀಲ್ಡ್ ಮತ್ತು ಎಲ್ಲಾ ಐಟಿ ಪಾರ್ಕ್‌ಗಳಿಗೆ ಸಂಪರ್ಕ ಕಲ್ಪಿಸುವ ಚಿನ್ನಪ್ಪನಹಳ್ಳಿ ಮುಖ್ಯ ರಸ್ತೆಯ 1 ವರ್ಷದಿಂದ ಹದಗೆಟ್ಟಿದೆ. ರಸ್ತೆಯ ಒಂದು ಭಾಗದಲ್ಲಿ ಡಾಂಬರು ಸಂಪೂರ್ಣ ಕಿತ್ತು ಬಂದಿದೆ. ಆದರೆ, ಬಿಬಿಎಂಪಿ ಅಧಿಕಾರಿಗಳ ಕಣ್ಣಿಗೆ ಮಾತ್ರ ಇದು ಕಾಣುತ್ತಿಲ್ಲ.

ಐಟಿ ಪಾರ್ಕ್‌ಗಳಿಗೆ ಸಂಪರ್ಕಿಸುವ ರಸ್ತೆಗಳ ಸ್ಥಿತಿ ಹೀಗಾದರೆ? ಉಳಿದ ಪ್ರದೇಶಗಳಲ್ಲಿನ ರಸ್ತೆ ಹೇಗಿದೆ? ಎಂದು ಅಧಿಕಾರಿಗಳು ಒಮ್ಮೆ ಪರಿಶೀಲನೆ ನಡೆಸುವುದು ಉತ್ತಮ. ರಸ್ತೆಗುಂಡಿಗಳಿಂದಾಗಿ ವಾಹನ ಸವಾರರು ಪರದಾಡುತ್ತಿದ್ದಾರೆ.
ಆಗಸ್ಟ್ ತಿಂಗಳಿನಲ್ಲಿ ಬೆಂಗಳೂರು ನಗರದಲ್ಲಿ ಸುರಿದ ಮಳೆಯಿಂದಾಗಿ ನಗರದ ರಸ್ತಗಳಲ್ಲಿ ಗುಂಡಿಗಳು ಕಾಣಿಸಿಕೊಂಡಿವೆ. ಬಿಬಿಎಂಪಿ ಅಧಿಕಾರಿಗಳು ಹೇಳುವ ಪ್ರಕಾರ ಹಗಲು-ರಾತ್ರಿ ಎನ್ನದೇ ಗುಂಡಿ ಮುಚ್ಚಲು ಶ್ರಮಿಸಲಾಗುತ್ತಿದೆ. ಆದರೆ, ಯಾವ ಪ್ರದೇಶದಲ್ಲಿ? ಎಂಬುದನ್ನು ಅವರೇ ಹೇಳಬೇಕು.

ಬೆಂಗಳೂರಿನ ರಸ್ತೆಗುಂಡಿಯಲ್ಲಿ ಫೋಟೋ ಶೂಟ್ ಮಾಡಿಸಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾಗಿದೆ. ಬಿಬಿಎಂಪಿ ಗಮನ ಸೆಳೆಯಲು ಇನ್ನೂ ಏನು ಮಾಡಬೇಕು? ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ.












Click it and Unblock the Notifications