ಗಾರ್ಡನ್ ಸಿಟಿ ಕಾಲೇಜಿನಲ್ಲಿ ಇಸ್ರೋ ವಿಜ್ಞಾನಿ ಹೇಳಿದ್ದೇನು?
ಬೆಂಗಳೂರು, ಮಾರ್ಚ್ 10: ವಿದ್ಯಾರ್ಥಿಗಳು ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನು ಪಡೆದರಷ್ಟೇ ಸಾಲದು. ಅದರ ಜತೆಗೆ ತಮ್ಮ ಬದುಕನ್ನು ರೂಪಿಸಿಕೊಳ್ಳಲು ಕಂಪ್ಯೂಟರ್ ಶಿಕ್ಷಣ ಮುಖ್ಯ. ಆಗಷ್ಟೇ ಬದುಕನ್ನು ಉಜ್ವಲವಾಗಿಸಲು ಸಾಧ್ಯ ಎಂದು ಇಸ್ರೋದ ಹಿರಿಯ ವಿಜ್ಞಾನಿ ವಿಶುಪಂತ್ ಮಿಸಾಲೆ ಹೇಳಿದರು.
ನಗರದ ಗಾರ್ಡನ್ ಸಿಟಿ ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗದ ವತಿಯಿಂದ ಈಚೆಗೆ 'ಮಾಹಿತಿ ತಂತ್ರಜ್ಞಾನದ ಇತ್ತೀಚಿನ ಪ್ರವೃತ್ತಿಗಳು' ಶೀರ್ಷಿಕೆ ಅಡಿ ಆಯೋಜಿಸಿದ್ದ ಸಮಾವೇಶ ಉದ್ಘಾಟಿಸಿ, ಅವರು ಮಾತನಾಡಿದರು.

ಬದಲಾಗುವ ತಂತ್ರಜ್ಞಾನಕ್ಕೆ ತಕ್ಕಂತೆ ವಿದ್ಯಾರ್ಥಿಗಳಿಗೆ ಚಿಕ್ಕಂದಿನಿಂದಲೇ ತಯಾರು ಮಾಡುವುದರಿಂದ ಭವಿಷ್ಯದಲ್ಲಿ ದೇಶದ ಮಾನವ ಸಂಪನ್ಮೂಲದ ಸಾಮರ್ಥ್ಯ ಹೆಚ್ಚುತ್ತದೆ. ಪೋಷಕರು ಮತ್ತು ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಹೊರೆಯಾಗದ ಶಿಕ್ಷಣ ಒದಗಿಸಬೇಕು ಎಂದು ಸಲಹೆ ನೀಡಿದರು.[ಇಸ್ರೋ ಸಾಧನೆ ನೋಡಿ ಶಾಕ್ ಆಗಿದ್ದ ಡೊನಲ್ಡ್ ಟ್ರಂಪ್ ಆಪ್ತ!]
ಆಧುನಿಕ ಯುಗವು ಜಾಗತೀಕರಣದಿಂದ ಬಹುಬೇಗ ಬದಲಾವಣೆ ಹೊಂದುತ್ತಾ ಅಭಿವೃದ್ಧಿ ಹೊಂದುತ್ತಿದೆ. ವಿದ್ಯಾರ್ಥಿಗಳು ಕಂಪ್ಯೂಟರ್ ಕೋರ್ಸ್ ಮತ್ತು ಕಂಪ್ಯೂಟರ್ ತರಬೇತಿ ಪಡೆದುಕೊಳ್ಳಬೇಕು ಎಂದರು.

ಬೆಳಗ್ಗೆಯಿಂದ ಸಂಜೆವರೆಗೆ ನಡೆದ ಸಮಾವೇಶದಲ್ಲಿ ರಾಜ್ಯ ಅಷ್ಟೇ ಅಲ್ಲದೆ ದೇಶ- ವಿದೇಶಗಳಿಂದ ಆಗಮಿಸಿದ್ದ 80ಕ್ಕೂ ಹೆಚ್ಚು ಮಂದಿ ಸಂಶೋಧಕರು ಹಾಗೂ ವಿದ್ಯಾರ್ಥಿಗಳು ಮಾಹಿತಿ ತಂತ್ರಜ್ಞಾನದ ಇತ್ತೀಚಿನ ಪ್ರವೃತ್ತಿಗಳು ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡರು.[ಇಸ್ರೋ ವಿಶ್ವದಾಖಲೆ ಹಿಂದೆ ಇರುವ 8 ಮಹಿಳೆಯರಿಗೊಂದು ಸಲಾಂ]
ಗಾರ್ಡನ್ ಸಿಟಿ ವಿಶ್ವವಿದ್ಯಾಲಯದ ಕುಲಪತಿ ಡಾ.ವಿ.ಜಿ.ಜೋಸೆಫ್, ಬೆಂಗಳೂರು ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗದ ಉಪನ್ಯಾಸಕ ಹಾಗೂ ಚೇರ್‍ಮನ್ ಡಾ.ಬಿ.ಎಲ್.ಮುರಳೀಧರ್, ರೆಡ್ ಹ್ಯಾಟ್ ನ ಪ್ರಿನ್ಸಿಪಾಲ್ ಎಂಜಿನಿಯರ್ ರಾಮಕೃಷ್ಣರೆಡ್ಡಿ, ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಬಿ.ಹಿಂಚಿಗೇರಿ, ಉಪನ್ಯಾಸಕ ಶಿವಮೂರ್ತಯ್ಯ ಮತ್ತಿತರರು ಪಾಲ್ಗೊಂಡಿದ್ದರು.












Click it and Unblock the Notifications