ಈ ದೀಪಾವಳಿಯಂದು ನೀವು ಏನೇನು ಮಾಡಿದಿರಿ?
ಬೆಂಗಳೂರು, ಅ. 24 : ಸಂಭ್ರಮದ ಬೆಳಕಿನ ಹಬ್ಬ ಇನ್ನೇನು ಮುಗೀತಾ ಬಂತು. ಹೇಗಿತ್ತು ದೀಪಾವಳಿ? ಮನೆಯಲ್ಲೇ ಆಚರಿಸಿದಿರಾ? ಮಾವನ ಮನೆಗೆ ಹೋಗಿದ್ರಾ? ಭೋಜನಕ್ಕೆ ಯಾವ್ಯಾವ ಸಿಹಿ ತಯಾರಿಯಾಗಿತ್ತು? ಅಥವಾ ಎಲ್ಲಾದ್ರೂ ಪ್ರವಾಸ ಹೋಗಿದ್ರಾ? ಪಟಾಕಿಗಾಗಿ ಎಷ್ಟು ಹಣ ಸುಟ್ಟು ಹಾಕಿದ್ರಿ? ಹುಷಾರಾಗಿದ್ದೀರಿ ತಾನೆ?
ಇಂಥದೊಂದು ಸಂಭ್ರಮಕ್ಕೆ ಬೀಳುವ ಮುನ್ನವೇ, ಪರಿಸರದ ಬಗ್ಗೆ ಅಪಾರ ಕಾಳಜಿ ಇಟ್ಟುಕೊಂಡಿರುವ ಒನ್ಇಂಡಿಯಾ ಸೋಷಿಯಲ್ ಮೀಡಿಯಾದಲ್ಲಿ ಒಂದು ವಿಶಿಷ್ಟ ಚಟುವಟಿಕೆಗೆ ಚಾಲನೆ ನೀಡಿತ್ತು. ಅದೇನೆಂದರೆ, #thisdiwaliiwill ಎಂಬ ಹ್ಯಾಶ್ ಟ್ಯಾಗ್ ಬರೆದು ದೀಪಾವಳಿಗೆ ನೀವು ಏನು ಮಾಡುತ್ತೀರೆಂದು ಸ್ಲೋಗನ್ ಬರೆಯಲು ಕರೆ ನೀಡಿತ್ತು.
ತಮ್ಮ ಚಿತ್ರದ ಜೊತೆ ಅತ್ಯುತ್ತಮ ಘೋಷಣೆ ಬರೆದ ಅತ್ಯುತ್ತಮ ಪೋಸ್ಟ್(ಚಿತ್ರ)ಗಳನ್ನು ಒನ್ಇಂಡಿಯಾ ಲೇಖನದಲ್ಲಿ ಆಯ್ಕೆ ಮಾಡಲಾಗುವುದು ಎಂದು ಕರೆ ಕೂಡ ನೀಡಲಾಗಿತ್ತು. ಇದಕ್ಕೆ ಅಭೂತಪೂರ್ವ ಅಲ್ಲದಿದ್ದರೂ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಗೂಗಲ್ ಪ್ಲಸ್ ನಲ್ಲಿ ಈ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ನಲ್ಲಿ ಕೂಡ ಇತ್ತು. ಹಲವಾರು ಓದುಗರು, ಹಿತೈಷಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ ಚಿತ್ರ ಕಳುಹಿಸಿಕೊಟ್ಟಿದ್ದಾರೆ.
ಕೆಲವರು, ತಾವು ಈ ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿಸಿ ಪರಿಸರವನ್ನು ನಾಶ ಮಾಡುವುದಿಲ್ಲ ಎಂದು ಹೇಳಿದ್ದರೆ, ಕೆಲವರು, ತಾವು ಮನೆಮಂದಿಯೊಂದಿಗಿದ್ದು ಸಂತಸದ ಕ್ಷಣಗಳನ್ನು ಕಳೆಯುತ್ತೇವೆ ಎಂದಿದ್ದರು. ಓರ್ವ ನಾನು ಈ ಹಬ್ಬದಂದು ಮಣ್ಣಿನಿಂದ ತಯಾರಿಸಿದ ದೀಪಗಳನ್ನು ಖರೀದಿಸಿ ಬಡವರಿಗೆ ಸಹಾಯ ಮಾಡಲು ಯತ್ನಿಸುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದರು.
ನಮಗೆ ಬಂದಿರುವ ಕೆಲ ಚಿತ್ರಗಳನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇವೆ. ಇಲ್ಲಿ ಕೆಲವೊಂದು ಗಂಭೀರ ಚಿಂತನೆಯಿಂದ ಕೂಡಿದ್ದರೆ, ಕೆಲವು ಸಖತ್ ತಮಾಷೆಯಾಗಿವೆ. ಒಟ್ಟಿನಲ್ಲಿ, ನಮ್ಮ ಕಳಕಳಿಯೇನೆಂದರೆ, ಹಬ್ಬಗಳನ್ನು ಚೆನ್ನಾಗಿ ಆಚರಿಸಿ, ಹೊಸ ಬಟ್ಟೆಗೆ ದುಡ್ಡು ಹಾಕಿ, ಪಟಾಕಿಗೆ ವ್ಯಯ ಮಾಡಬೇಡಿ, ಪರಸರ ನಾಶಮಾಡಬೇಡಿ ಎಂಬುದಷ್ಟೆ ನಮ್ಮ ಮನವಿ. [ಸಮೃದ್ಧಿ ಸಂಪ್ರೀತಿ ಸಮಾನತೆಯ ದೀಪಾವಳಿ]

ಒನ್ಇಂಡಿಯಾದಲ್ಲಿ ಕಾಣಿಸಿಕೊಳ್ಳುವ ಬಯಕೆ
ಹೇಮಾ ತೊಟ್ಟಾದ್ರಿಯವರು ಒನ್ಇಂಡಿಯಾ ಪುಟಗಳಲ್ಲಿ ಕಾಣಿಸಿಕೊಳ್ಳುವ ಬಯಕೆ ವ್ಯಕ್ತಪಡಿಸಿದ್ದರು. ಆ ಬಯಕೆ ಈಗ ಈಡೇರಿದೆ. ಅಭಿನಂದನೆಗಳು ಹೇಮಾ.

ಪರ್ಫೆಕ್ಷನ್ ಹಾಳುಮೂಳು ಎಲ್ಲ ಬೇಡ
ಈ ದೀಪಾವಳಿಯಂದು ಪರ್ಫೆಕ್ಷನಿಸ್ಟ್ ಆಗುವುದಕ್ಕೆ ಖಂಡಿತ ಯತ್ನಿಸುವುದಿಲ್ಲ, ಜೀವನ ಹೇಗೆ ಬರುತ್ತದೋ ಹಾಗೆಯೇ ಇರುತ್ತೇನೆ. ದೀಪಾವಳಿ ಚೆನ್ನಾಗಿ ಆಚರಿಸುತ್ತೇನೆ ಎಂದಿದ್ದರು ಮಿಥಿಲೇಶ್ ಮಿಶ್ರಾ.

ಊರಿನ ಮನೆಯಿಂದ ದೂರವಿದ್ದರೇನಾಯಿತು?
2177 ಕಿ.ಮೀ. ದೂರವಿರುವ ನನ್ನ ಮನೆಯವರಿಂದ ದೂರವಿದ್ದರೇನಾಯಿತು ನನ್ನ 'ಬಾಡಿಗೆ' ಮನೆಯಲ್ಲೇ ದೀಪಾವಳಿ ಭರ್ಜರಿಯಾಗಿ ಆಚರಿಸುತ್ತೇನೆ.

ಸಿಕ್ಕಾಪಟ್ಟೆ ಪ್ರಯಾಣ ಮಾಡ್ತೀವಿ
ಈ ಬಾರಿ ಸಿಕ್ಕಾಪಟ್ಟೆ ಪ್ರಯಾಣ ಮಾಡ್ತೀವಿ, ಹೆಚ್ಚು ನೋಡ್ತೀವಿ ಮತ್ತು ಹೆಚ್ಚೆಚ್ಚು ಕಲಿತೀವಿ ಎಂದು ಹೇಳಿದ್ದಾರೆ ನೇಟಿವ್ ಪ್ಲಾನೆಟ್ ಟ್ರಾವೆಲ್ ವೆಬ್ ಸೈಟ್ ಉದ್ಯೋಗಿಗಳು.

ಖುಷಿಯನ್ನು ಭೇಟಿ ಮಾಡುತ್ತೇನೆ
ದೂರದೂರಿನಲ್ಲಿರುವ ಹೆಂಡತಿ ಖುಷಿಯನ್ನು ಭೇಟಿ ಮಾಡಿ ಆಕೆಗೂ ಖುಷಿ ತರುತ್ತೇನೆ ಮತ್ತು ಆಕೆಯ ಮೊಗದಲ್ಲಿ ನಗೆಯರಳಿಸುತ್ತೇನೆ ಎಂದಿದ್ದಾರೆ ಪಂಕಜ್.

ಬಡವರಿಗೆ ಸಹಾಯ ಮಾಡುವ ಪ್ರತಿಜ್ಞೆ
ಈ ದೀಪಾವಳಿಯಂದು ಮಣ್ಣಿನಿಂದ ತಯಾರಿಸಿದ ಮಡಕೆ, ದಿಯಾಗಳನ್ನು ಖರೀದಿ ಮಾಡಿ ಬಡವರಿಗೆ ಸಾಧ್ಯವಾದಷ್ಟು ಸಹಾಯ ಮಾಡುತ್ತೇನೆ ಎಂಬ ಉದಾತ್ತ ಸಂದೇಶವನ್ನು ಒಬ್ಬರು ಸಾರಿದ್ದಾರೆ.

ಪರಿಸರ ಮಾಲಿನ್ಯ ದೇವರಾಣೆ ಮಾಡಲ್ಲ
ನಮ್ಮಿಂದಾಗಿಯೇ ಪರಿಸರ ಇಂದು ಹಾಳಾಗುತ್ತಿದೆ. ಈ ಕಾರಣದಿಂದ ನಾನು ಪ್ರೀತಿಯನ್ನು ಮಾತ್ರ ಪಸರಿಸುತ್ತೇನೆ, ವಾಯು ಮಾಲಿನ್ಯವನ್ನಲ್ಲ ಎಂದಿದ್ದಾರೆ ಪ್ರೀತಿನ್ ವೀಗಾಸ್.

ಹಸಿರು ಉಳಿಸಿ ಪರಿಸರ ಕಾಪಾಡಿ
ಕಾರ್ತಿಕ್ ವರ್ನಾ ಅವರು ಪರಿಸರ ಕಾಳಜಿ ತೋರಿದ್ದು, ಈ ದೀಪಾವಳಿಯನ್ನು ಪರಿಸರ ಉಳಿಸಿ ಎಂಬ ಪ್ರಚಾರದಿಂದ ಆರಂಭಿಸುತ್ತೇನೆ ಎಂದಿದ್ದಾರೆ. ನೀವೂ ಪಾಲಿಸಿ.

ಪಟಾಕಿ ಹೊಡೆಯಲ್ಲ
ಇನ್ನೊಬ್ಬ ಪರಿಸರ ಪ್ರೇಮಿ ಈ ದೀಪಾವಳಿಯ ಸಂದರ್ಭದಲ್ಲಿ ಪಟಾಕಿ ಹೊಡೆದು ವಾತಾವರಣವನ್ನು ಇನ್ನಷ್ಟು ಕಲುಷಿತಗೊಳಿಸುವುದಿಲ್ಲ ಎಂದು ಪ್ರಮಾಣ ಮಾಡಿದ್ದಾರೆ.

ಎಲ್ಲರಿಗೂ ಕ್ಯಾಷ್ ಕಳಿಸುತ್ತೇನೆ ಎಂದಿದ್ದಾರೊಬ್ಬರು
ಎಲ್ಲರಿಗೂ ಕ್ಯಾಷ್ ಕಳಿಸುತ್ತೇನೆ ಎಂದಿದ್ದಾರೊಬ್ಬರು. ಕ್ಯಾಷ್ ಎಂದಾಕ್ಷಣ ಹಣ ಎಂದು ತಿಳಿಯಬೇಡಿ. ಕ್ಯಾಷ್ ಎಂದರೆ ಕೇರ್, ಅಫೆಕ್ಷನ್, ಸ್ಮೈಲ್ ಮತ್ತು ಹಗ್. ಎಂದರೆ ಕಾಳಜಿ, ಪ್ರೀತಿ, ನಗು ಮತ್ತು ಅಪ್ಪುಗೆ! ನೀವೂ ಹಾಗೆಯೇ ಮಾಡಿರಿ.

ದಿಯಾ ಮತ್ತು ಮೇಣದ ಬತ್ತಿ ಮಾತ್ರ ಉರಿಸುತ್ತೇನೆ
ಸ್ನೇಹಾ ಕಂಚನ್ ಎಂಬ ಹೊಸದಾಗಿ ಮದುವೆಯಾದ ಗೃಹಿಣಿ ತಾವು ಈ ದೀಪಾವಳಿಯಂದು ದೀಪ ಮತ್ತು ಮೇಣದ ಬತ್ತಿ ಮಾತ್ರ ಹಚ್ಚುತ್ತೇನೆ, ಪಟಾಕಿ ಬತ್ತಿ ಹಚ್ಚಲ್ಲ ಎಂದು ನುಡಿದಿದ್ದಾರೆ. ಶಭಾಶ್!

ಬಡವರಿಗಾಗಿ ಮೇಣದಬತ್ತಿ ಬೆಳಗಿ
ಬಡವರ ಬಗ್ಗೆ ಅಪಾರ ಕಾಳಜಿ ಇರುವ ಮನೋಜ್ ಕುಮಾರ್ ಸೇಠಿ ಅವರು ಬಡವರ ಸಂತೋಷಕ್ಕಾಗಿ ಮೇಣದಬತ್ತಿ ಬೆಳಗಿ ಎಂಬ ಸಂದೇಶ ನೀಡಿದ್ದಾರೆ. ಧನ್ಯವಾದಗಳು ಮನೋಜ್.

ನಗರವನ್ನು ಸ್ವಚ್ಛವಾಗಿಡಿ ಸಾಕು
ಶ್ರವಣ್ ಕುಮಾರ್ ಎಂಬುವವರು ಕೂಡ ಪರಿಸರ ಕಾಳಜಿ ವ್ಯಕ್ತಪಡಿಸಿದ್ದು, ಗಬ್ಬೆದ್ದು ಹೋಗುತ್ತಿರುವ ನಮ್ಮ ನಗರವನ್ನು ಸ್ವಚ್ಛವಾಗಿಡಿ. ಈ ಮೂಲಕ ವಿಶಿಷ್ಟವಾಗಿ ಮತ್ತು ಅರ್ಥಪೂರ್ಣವಾಗಿ ದೀಪಾವಳಿ ಆಚರಿಸಿ ಎಂದು ಕರೆ ನೀಡಿದ್ದಾರೆ.

ಸಿಹಿ ತಿಂದು ತಿಂದು ತೇಗುತ್ತೇನೆ
ಸಿಹಿ ಪ್ರೇಮಿಯೊಬ್ಬರು ತಾವು ಈ ದೀಪಾವಳಿಯಂದು ಎಲ್ಲ ಬಗೆಯ ಸಿಹಿ ತಿಂದು ತೇಗುತ್ತೇನೆ ಎಂದು ಹೇಳಿದ್ದಾರೆ. ಆಲ್ ದಿ ಬೆಸ್ಟ್.

ಬೇರೆ ವ್ಯಕ್ತಿಯಾಗಿ ನೋಡಬಯಸುತ್ತೇನೆ
ನಾನು ಇನ್ನು ಮುಂದೆ ನನ್ನನ್ನು ಬೇರೆ ವ್ಯಕ್ತಿಯಾಗಿ ನೋಡಬಯಸುತ್ತೇನೆ ಎಂದಿದ್ದಾರೆ. ಇದರ ಹಿಂದಿನ ಉದ್ದೇಶ ಏನಿದೆಯೋ ಕಾಣೆ.

ನನ್ನಲ್ಲಿನ ಅತ್ಯುತ್ತಮವಾದದ್ದು ಹೊರತರುತ್ತೇನೆ
ದೀಪಾವಳಿಯನ್ನು ಪ್ರತಿವರ್ಷ ಆಚರಿಸುವ ವಿದೇಶಿ ಮಹಿಳೆ ಕರ್ಸ್ಟಿ ಡೇಲ್ ಅವರು ತಾವು ಇನ್ನು ಮುಂದೆ ನನ್ನಲ್ಲಿನ ಅತ್ಯುತ್ತಮವಾದದ್ದು ಹೊರತರುತ್ತೇನೆ ವಿಭಿನ್ನವಾದ ಪ್ರತಿಜ್ಞೆ ಮಾಡಿದ್ದಾರೆ. ಇವರ ಬಗ್ಗೆ ಒಂದು ಲೇಖನ ಸದ್ಯದಲ್ಲಿಯೇ ಪ್ರಕಟವಾಗಲಿದೆ. ನಿರೀಕ್ಷಿಸಿ.












Click it and Unblock the Notifications