Karnataka Weather Report : ಸೋಮವಾರವೂ ರಾಜ್ಯಾದ್ಯಂತ ಗುಡುಗು ಸಹಿತ ವ್ಯಾಪಕ ಮಳೆ: ಯೆಲ್ಲೋ ಅಲರ್ಟ್

ಬೆಂಗಳೂರು, ಸೆಪ್ಟೆಂಬರ್ 5: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಆರ್ಭಟ ಮುಂದುವರೆದಿದೆ. ಬೆಂಗಳೂರಿನಲ್ಲಿ ಶನಿವಾರ ಚೂರು ಕಡಿಮೆಯಾಗಿದ್ದ ಮಳೆ ಭಾನುವಾರ ಸಂಜೆ ಮತ್ತೆ ಆರ್ಭಟಿಸಿದೆ, ಗುಡುಗು, ಮಿಂಚು ಸಹಿತ ಭಾನುವಾರ ರಾತ್ರಿ ವ್ಯಾಪಕ ಮಳೆಯಾಗಿದೆ.

ಸೋಮವಾರ ಕೂಡ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಪರಿಸ್ಥಿತಿ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಮುಂದಿನ ಇನ್ನೂ ಒಂದು ವಾರಗಳ ಕಾಲ ಮಳೆಯಾಗುವ ಮುನ್ಸೂಚನೆಯನ್ನು ನೀಡಿದೆ.

ಸೆಪ್ಟೆಂಬರ್ 9 ರವೆರೆಗೆ ರಾಜ್ಯದಲ್ಲಿ ಮಳೆ ಪರಿಸ್ಥಿತಿ ಇದೇ ರೀತಿ ಮುಂದುವರೆಯುವ ಬಗ್ಗೆ ಹವಾಮಾನ ಇಲಾಖೆ ಸೂಚನೆ ನೀಡಿದ್ದು, ಈಗಾಗಲೇ ಮಳೆಯಿಂದ ಉಂಟಾದ ಅವ್ಯವಸ್ಥೆ ಕಂಡ ಜನ ಹವಾಮಾನ ಇಲಾಖೆ ವರದಿಯಿಂದ ಮತ್ತಷ್ಟು ಆತಂಕಗೊಂಡಿದ್ದಾರೆ. ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಸೆಪ್ಟೆಂಬರ್ 5ರಂದು ಸೋಮವಾರ ರಾಜ್ಯದ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಭಾನುವಾರ ರಾತ್ರಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಯಿತು. ಸಂಜೆಯಿಂದಲೇ ಆರಂಭವಾದ ಮಳೆ ಮಧ್ಯರಾತ್ರಿಯವರೆಗೆ ಎಡಬಿಡದೆ ಸುರಿಯಿತು.

 ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ

ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ

ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ಸೋಮವಾರ ಗುಡುಗು ಸಹಿತ ವ್ಯಾಪಕ ಮಳೆ ಸುರಿಯುವ ನಿರೀಕ್ಷೆ ಇದೆ. ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ರಾಜ್ಯದ ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು, ಶಿವಮೊಗ್ಗ, ಕೋಲಾರ, ರಾಮನಗರ, ದಾವಣಗೆರೆ, ಹಾಸನ ಜಿಲ್ಲೆಗಳಲ್ಲೂ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿರುವ ಭಾರತೀಯ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ.

 ರಾಜ್ಯದ ಹಲವು ಭಾಗಗಳಲ್ಲಿ ಮಳೆ ಮುನ್ಸೂಚನೆ

ರಾಜ್ಯದ ಹಲವು ಭಾಗಗಳಲ್ಲಿ ಮಳೆ ಮುನ್ಸೂಚನೆ

ಸೋಮವಾರ ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಬಹುತೇಕ ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಜಿಲ್ಲೆಗಳಲ್ಲೂ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ನದಿ ಪಾತ್ರದ ಜನತೆ ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಲಾಗಿದೆ.

ಎಡಬಿಡದೆ ಸುರಿಯುತ್ತಿರುವ ಮಳೆಗೆ ರಾಜ್ಯದ ಹಲವೆಡೆ ಬೆಳೆಗಳಿಗೆ ಹಾನಿಯಾಗಿದೆ. ಗದಗ ತಾಲ್ಲೂಕಿನ ಹಂದಿಗೋಳ ಗ್ರಾಮದಲ್ಲಿ ಕೆರೆ ಕೋಡಿ ಬಿದ್ದ ಪರಿಣಾಮ ರೈತರ ಜಮೀನುಗಳು ಮುಳುಗಡೆಯಾಗಿದ್ದು ನೂರಾರು ಎಕರೆಯಲ್ಲಿ ಬೆಳೆದಿದ್ದ, ಗೋವಿನ ಜೋಳ, ಶೇಂಗಾ ಸೇರಿದಂತೆ ಹಲವು ಬೆಳೆಗಳು ನಾಶವಾಗಿವೆ.

 ಎಚ್ಚರಿಕೆಯಿಂದ ಇರುವಂತೆ ಜನತೆಗೆ ಸೂಚನೆ

ಎಚ್ಚರಿಕೆಯಿಂದ ಇರುವಂತೆ ಜನತೆಗೆ ಸೂಚನೆ

ರಾಜ್ಯದ ಎಲ್ಲಾ ಜಲಾಶಯಗಳು ಭರ್ತಿಯಾಗಿದ್ದು ಹೆಚ್ಚುವರಿ ನೀರನ್ನು ಹೊರಕ್ಕೆ ಹರಿಸಲಾಗುತ್ತಿದೆ. ಮಲಪ್ರಭಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ಗೋವನಕೊಪ್ಪ ಹಳೆ ಸೇತುವೆ ಜಲಾವೃತಗೊಂಡಿದೆ. ನವಿಲು ತೀರ್ಥ ಜಲಾಶಯದಿಂದ 7 ಸಾವಿರ ಕ್ಯೂಸೆಕ್ಸ್ ನೀರು ಹೊರಬಿಡಲಾಗಿದೆ.

ನದಿಪಾತ್ರದ ಅಕ್ಕಪಕ್ಕದ ಹೊಲ ಗದ್ದೆಗಳಿಗೆ ನೀರು ನುಗ್ಗಿದ್ದು, ಮೆಕ್ಕೆಜೋಳ, ಕಬ್ಬು, ಈರುಳ್ಳಿ, ಸೂರ್ಯಕಾಂತಿ ಸೇರಿದಂತೆ ಹಲವು ಬೆಳೆಗಳು ಜಲಾವೃತಗೊಂಡಿವೆ. ನದಿ ಪಾತ್ರದ ಗ್ರಾಮಗಳ ಜನರು ಎಚ್ಚರಿಕೆಯಿಂದ ಇರುವಂತೆ ತಹಶೀಲ್ದಾರ ಜೆ.ಬಿ‌.ಮಜ್ಜಗಿ ಎಚ್ಚರಿಕೆ ನೀಡಿದ್ದಾರೆ. ನದಿ ಪಾತ್ರದಲ್ಲಿ ವಾಸಿಸುವ ರೈತರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಗ್ರಾಮಗಳಿಗೆ ಸೂಚನೆ ನೀಡಲಾಗಿದೆ.

 ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಂಚಾರ ಬೇಡ

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಂಚಾರ ಬೇಡ

ದಕ್ಷಿಣ ಕರ್ನಾಟಕ ಭಾಗದಲ್ಲಿ ಬುಧವಾರದವರೆಗೆ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಮೈಸೂರು-ಬೆಂಗಳೂರು, ಬೆಂಗಳೂರು-ಮೈಸೂರು ಪ್ರಯಾಣ ಮಾಡಲು ಉದ್ದೇಶಿಸಿರುವ ಪ್ರಯಾಣಿಕರು ಪ್ರಯಾಣವನ್ನು ಮುಂದೂಡುವುದು ಒಳ್ಳೆಯದು ಅಥವಾ ಅನಿವಾರ್ಯ ಆದ ಸಂದರ್ಭದಲ್ಲಿ ಹೆದ್ದಾರಿಯನ್ನು ಹೊರತು ಪಡಿಸಿ ಪರ್ಯಾಯ ಮಾರ್ಗದಲ್ಲಿ ಸಂಚರಿಸಿ ಎಂದು ರಾಮನಗರ ಎಸ್‌ಪಿ ಸಂತೋಷ್ ಬಾಬು ಸೂಚನೆ ನೀಡಿದ್ದಾರೆ.

ಮಳೆ ಯಾವಾಗ ಹೇಗೆ ಸುರಿಯುತ್ತೆ ಎಂದು ಅಂದಾಜಿಸುವುದು ಕಷ್ಟ. ದಿಢೀರ್ ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡರೆ ಬದಲಿ ಮಾರ್ಗ ಬಳಸುವುದು ಅನಿವಾರ್ಯ ಎಂದು ಅವರು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+