BBMP Election: ಬಿಬಿಎಂಪಿ ಚುನಾವಣೆ ನಡೆಸಲು ಮುಂದಾದ ರಾಜ್ಯ ಸರ್ಕಾರ: ಡಿ ಕೆ ಶಿವಕುಮಾರ್ ಹೇಳಿದೇನು?
ಬೆಂಗಳೂರು, ಜೂನ್ 12: ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ಬಿಬಿಎಂಪಿ ಚುನಾವಣೆ ನಡೆಸಲು ರಾಜ್ಯ ಸರ್ಕಾರ ಮುಂದಾಗಿದೆ. ಬಿಬಿಎಂಪಿ ಚುನಾವಣೆ ಮಾಡಲು ಮೀಸಲಾತಿ ಸೇರಿದಂತೆ ಇತರೆ ಪ್ರಕ್ರಿಯೆ ಪೂರ್ಣಗೊಳಿಸಲು ತಯಾರು ಮಾಡಿದ್ದೇವೆ. ಆದಷ್ಟು ಬೇಗ ಚುನಾವಣೆ ಮಾಡುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಬಿಬಿಎಂಪಿ ವಿಭಜನೆ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಈ ವಿಚಾರವಾಗಿ ಈ ಹಿಂದೆಯೇ ಪ್ರಸ್ತಾವನೆ ಇತ್ತು. ಆ ಬಗ್ಗೆ ಚರ್ಚೆ ಮಾಡಲಾಗುತ್ತಿದೆ. ಏನೇ ಇದ್ದರೂ ಆದಷ್ಟು ಬೇಗ ಚುನಾವಣೆ ಮಾಡಲಾಗುವುದು. ನಾವು ಮಾಡದಿದ್ದರೆ ಕೋರ್ಟ್ ಬಿಡುವುದಿಲ್ಲ ಎಂದು ತಿಳಿಸಿದ್ದಾರೆ.

ಸೋಮಣ್ಣ ಅವರು ಜಲಶಕ್ತಿ ಸಚಿವರಾಗಿರುವುದರಿಂದ ತಾರತಮ್ಯವಾಗಲಿದೆ ಎಂಬ ತಮಿಳುನಾಡು ಕಾಂಗ್ರೆಸ್ ಪ್ರಧಾನಿಗೆ ಬರೆದಿರುವ ಪತ್ರದ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಒಮ್ಮೆ ಸಚಿವರಾದರೆ ಅವರು, ಇಡೀ ದೇಶಕ್ಕೆ ಸಚಿವರಾಗುತ್ತಾರೆಯೇ ಹೊರತು ಅವರು ಪ್ರತಿನಿಧಿಸುವ ರಾಜ್ಯಕ್ಕೆ ಸಚಿವರಾಗುವುದಿಲ್ಲ. ಯಾವುದೇ ರಾಜಕಾರಣಿಯಾದರೂ ತಮ್ಮ ರಾಜ್ಯ ಹಾಗೂ ಊರಿಗೆ ಹೆಚ್ಚಿನ ಅನುಕೂಲ ಮಾಡಿಕೊಡುವುದು ಸಹಜ.
ನಾನು ಸಚಿವನಾಗಿದ್ದಾಗ ಪೈಲೆಟ್ ಯೋಜನೆಗಳನ್ನು ನನ್ನ ಕ್ಷೇತ್ರಕ್ಕೆ ತೆಗೆದುಕೊಂಡು ಹೋಗಿದ್ದೆ. ಖರ್ಗೆ ಅವರು ಕಾರ್ಮಿಕ ಸಚಿವರಾಗಿದ್ದಾಗ ಕಲುಬುರ್ಗಿಯಲ್ಲಿ ಇಎಸ್ಐ ಆಸ್ಪತ್ರೆ ಕಟ್ಟಿಸಿದರು. ಇದು ಸಹಜ. ಸೋಮಣ್ಣ ಅವರು ಈಗಷ್ಟೇ ಸಚಿವರಾಗಿ ಕಣ್ಣು ಬಿಡುತ್ತಿದ್ದಾರೆ. ನಮ್ಮ ರಾಜ್ಯದಿಂದ ಮಂತ್ರಿಯಾದವರು ರಾಜ್ಯಕ್ಕೆ ಶಕ್ತಿ ತುಂಬಲಿ. ನಿರ್ಮಲಾ ಸೀತರಾಮನ್ ಅವರು ಹಣಕಾಸು ಸಚಿವೆಯಾಗಿ ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಹಣ ಘೋಷಣೆ ಮಾಡಿದರು. ಆದರೆ ಹಣ ಬರಲಿಲ್ಲ. ಏನು ಮಾಡಲು ಸಾಧ್ಯ? ಎಂದು ಪ್ರಶ್ನಿಸಿದರು.
ಯಾವುದೇ ಕೆಲಸವಾದರೂ ಕಾನೂನು ಬದ್ಧವಾಗಿ ಅವಕಾಶ ಇದ್ದರೆ ಅದನ್ನು ಮಾಡುತ್ತಾರೆ. ಆದರೆ ಕಾವೇರಿ ವಿಚಾರ ನ್ಯಾಯಾಲಯಕ್ಕೆ ಸಂಬಂಧಿಸಿದ ವಿಚಾರವಾಗಿದೆ. ತಮಿಳುನಾಡಿನವರು ತಮ್ಮ ಅಭಿಪ್ರಾಯವನ್ನು ಬರೆದಿದ್ದಾರೆ. ಪ್ರಧಾನಮಂತ್ರಿಗಳು ಅಂತಿಮ ತೀರ್ಮಾನ ಮಾಡುತ್ತಾರೆ. ನಾವು ಆ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದು ಬೇಡ ಎಂದು ಹೇಳಿದರು.
ಇನ್ನು ಘನತ್ಯಾಜ್ಯ ಸಂಗ್ರಹ ವಿಚಾರವಾಗಿ ರೂ.100 ಶುಲ್ಕದ ಬಗ್ಗೆ ಮಾತನಾಡಿ, ಘನತ್ಯಾಜ್ಯ ವಿಲೇವಾರಿ ನಿಯಮದಲ್ಲಿ ಹೆಚ್ಚಾಗಿದ್ದು, ಹೊಣೆಗಾರಿಕೆ ನಿಗದಿ ಮಾಡಬೇಕಿದೆ. ಬೆಂಗಳೂರಿನ ಹೊರವಲಯದ ನಾಲ್ಕು ಕಡೆಗಳಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ ಮಾಡಬೇಕಿದೆ. ಸದ್ಯದಲ್ಲೇ ಈ ವಿಚಾರವಾಗಿ ಟೆಂಡರ್ ಕರೆಯಲಾಗುವುದು. ಈ ವಿಚಾರವಾಗಿ ತಮಿಳುನಾಡಿಗೆ ಭೇಟಿ ನೀಡಿ ಪರಿಶೀಲನೆ ಮಾಡಲಾಗುವುದು ಎಂದರು.
ಪಾಲಿಕೆ ವತಿಯಿಂದ ಅನಧಿಕೃತ ಫ್ಲೆಕ್ಸ್ ನಿಷೇಧ ಮಾಡಿದ್ದರೂ, ಎಲ್ಲಾ ರಾಜಕೀಯ ಪಕ್ಷಗಳ ವತಿಯಿಂದ ಫ್ಲೆಕ್ಸ್ ಹಾಕಲಾಗುತ್ತಿದೆ. ಇದನ್ನು ನಿಯಂತ್ರಿಸುವುದು ಆಯಾ ಪ್ರದೇಶದ ಸಹಾಯಕ ಕಂದಾಯ ಅಧಿಕಾರಿಯ (ARO) ಜವಾಬ್ದಾರಿಯಾಗಿದ್ದು, ಇನ್ನು ಮುಂದೆ ಅನಧಿಕೃತ ಫ್ಲೆಕ್ಸ್ ಇದ್ದರೆ, ಅನಧಿಕೃತ ಫ್ಲೆಕ್ಸ್ ಹಾಕಿದವರ ಜತೆಗೆ ಈ ಅಧಿಕಾರಿಗಳ ಮೇಲೂ ಶಿಸ್ತುಕ್ರಮ ದಾಖಲಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ಅನಧಿಕೃತ ಫ್ಲೆಕ್ಸ್ ಗಳ ಬಗ್ಗೆ ಸಾರ್ವಜನಿಕರು ಪಾಲಿಕೆಗೆ ದೂರು ನೀಡಲು 1533 ಸಹಾಯವಾಣಿಯನ್ನು ಸಂಪರ್ಕಿಸಬಹುದು. 9480683939 ವಾಟ್ಸಪ್ ಮೂಲಕ ಸಾರ್ವಜನಿಕರು ಅನಧಿಕೃತ ಫ್ಲೆಕ್ಸ್ ಹಾಕಿರುವ ಫೋಟೋ ಹಾಗೂ ವಿಳಾಸ ಕಳುಹಿಸಬಹುದು. ಆಗ ಪಾಲಿಕೆ ವತಿಯಿಂದ ತಕ್ಷಣ ಕ್ರಮ ಕೈಗೊಳ್ಳಲಾಗುವುದು.












Click it and Unblock the Notifications