Bengaluru rains: ಪ್ರಧಾನಿ ಮೋದಿ ಉದ್ಘಾಟನೆ ಮಾಡಿ ತಿಂಗಳು ಕಳೆಯುವ ಮುನ್ನವೇ ಜಲಾವೃತವಾದ ಮೆಟ್ರೋ ನಿಲ್ದಾಣ!
ಬೆಂಗಳೂರು, ಏಪ್ರಿಲ್. 05: ಸಿಲಿಕಾನ್ ಸಿಟಿಯಲ್ಲಿ ಕಳೆದೆರಡು ದಿನಗಳಿಂದ ಮಳೆಯಾಗುತ್ತಿದೆ. ಈ ಮಳೆಯಿಂದಾಗಿ ಕೆಲಸ ಮುಗಿಸಿ ಮನೆಗೆ ತೆರಳುವ ಜನರು ಬಸ್ ನಿಲ್ದಾಣ, ಮೆಟ್ರೋ ನಿಲ್ದಾಣ ಸೇರಿದಂತೆ ಅಂಗಡಿ ಮುಂಗಟ್ಟುಗಳ ಬಳಿ ಆಶ್ರಯ ಪಡೆಯುತ್ತಿದ್ದಾರೆ. ಆದರೆ, ಒಂದೇ ಮಳೆಗೆ ಮೆಟ್ರೋ ನಿಲ್ದಾಣಗಳೇ ನೀರಿನಿಂದ ತುಂಬಿದರೇ ಹೇಗಾಗಬೇಡ..?
ಹೌದು, ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ ಬೆಂಗಳೂರು ಮೆಟ್ರೋ 2ನೇ ಹಂತದ ಯೋಜನೆಯ 13.71 ಕಿ.ಮೀ ಉದ್ದದ ಮೆಟ್ರೋ ಮಾರ್ಗದ ಮೆಟ್ರೋ ನಿಲ್ದಾಣ ಜಲಾವೃತವಾಗಿದ್ದು, ಜನರ ಕೆಂಗಣ್ಣಿಗೆ ಗುರಿಯಾಗಿದೆ. ಉದ್ಘಾಟನೆಯಾಗಿ ಒಂದು ತಿಂಗಳು ಕೂಡ ಕಳೆದಿಲ್ಲ ಆಗಲೇ ಹೊಸ ನಲ್ಲೂರು ಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಜಲಾವೃತವಾಗಿದೆ.

ಬೆಂಗಳೂರಿನ ನಾಗರಿಕ ವೇದಿಕೆಯಾದ ವೈಟ್‌ಫೀಲ್ಡ್ ರೈಸಿಂಗ್ಈ ಬಗ್ಗೆ ವಿಡಿಯೋ ಸಮೇತ ಟ್ವೀಟ್ ಮಾಡಿ, "ಹೊಚ್ಚ ಹೊಸ ನಲ್ಲೂರಹಳ್ಳಿ ಮೆಟ್ರೋ ನಿಲ್ದಾಣದ ಒಳಗಿನ ದೃಶ್ಯ. ಪ್ಲಾಟ್‌ಫಾರ್ಮ್‌ನಲ್ಲಿ ಹಾಗೂ ಟಿಕೆಟಿಂಗ್ ಕೌಂಟರ್ ಬಳಿ ನೀರು ತುಂಬಿದೆ. ಒಂದೇ ಮಳೆಗೆ ನೀರು ಸಂಪೂರ್ಣವಾಗಿ ಒಳಗೆ ನುಗ್ಗಿದೆ" ಎಂದು ನಮ್ಮ ಮೆಟ್ರೋ ಟ್ವಿಟರ್ ಖಾತೆಯನ್ನು ಟ್ಯಾಗ್ ಮಾಡಿದೆ.
ಇದಕ್ಕೆ ಹಲವು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದು, ಟ್ವಿಟರ್ ಬಳಕೆದಾರರಾದ ಶನೋಜ್ ದೇವಸ್ಸಿ, "ಮೆಟ್ರೋ ನಿಲ್ದಾಣಗಳನ್ನು ಸರಿಯಾಗಿ ಪೂರ್ಣಗೊಳಿಸದೆ ತರಾತುರಿಯಲ್ಲಿ ಸಾರ್ವಜನಿಕರ ಬಳಕೆಗೆ ಬಿಟ್ಟಾಗ ಇದನ್ನಲ್ಲದೇ ಇನ್ನೇನು ನಿರೀಕ್ಷಿಸಬಹುದು..." ಎಂದು ಪೋಸ್ಟ್ ಮಾಡಿದ್ದಾರೆ.
Inside the brand new Nallurhalli Metro station.
— Whitefield Rising (@WFRising) April 4, 2023
Water on the platform as well near the ticketing counter. @cpronammametro one rain, and water has seeped inside fully. pic.twitter.com/HhJFt8aQkw
ಈ ಹಿಂದೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೇವಾಲಾ ಕೂಡ ಪೂರ್ಣಗೊಳ್ಳದ ಕಾಮಗಾರಿಗಳನ್ನು ಜನರ ಸೇವೆಗೆ ನೀಡುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. "ಅಪೂರ್ಣ ಕಾಮಗಾರಿಗಳನ್ನು ಪ್ರಧಾನಿ ಏಕೆ ಉದ್ಘಾಟಿಸುತ್ತಿದ್ದಾರೆ" ಎಂದು ಪ್ರಶ್ನಿಸಿ ಕಿಡಿಕಾರಿದ್ದರು.

ಪ್ರಧಾನಿ ಭೇಟಿಗೂ ಮುನ್ನ ರಂದೀಪ್ ಸಿಂಗ್ ಸುರ್ಜೇವಾಲಾ, "ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣ ಮತ್ತು ಕೆಆರ್ ಪುರಂ ಮೆಟ್ರೋ ನಿಲ್ದಾಣದ ನಡುವೆ ಕಡ್ಡಾಯವಾಗಿ ಮೆಟ್ರೋ ಸಂಪರ್ಕವನ್ನು ನಿರ್ಮಿಸದೆ ಪ್ರಧಾನಿ ಮೋದಿ ನೇರಳೆ ಮೆಟ್ರೋ ಮಾರ್ಗವನ್ನು ಏಕೆ ಉದ್ಘಾಟಿಸುತ್ತಿದ್ದಾರೆ..? ವಿದ್ಯುದ್ದೀಕೃತ ರೈಲು ಮಾರ್ಗದ ಮೂಲಕ ಹಾದುಹೋಗುವ ಈ ಅಪೂರ್ಣ ಮೆಟ್ರೋ ಲಿಂಕ್ ಪೂರ್ಣಗೊಳ್ಳಲು ಕನಿಷ್ಠ ಆರು ತಿಂಗಳು ತೆಗೆದುಕೊಳ್ಳುತ್ತದೆ. ಆದರೂ ಮೆಟ್ರೋ ಉದ್ಘಾಟನೆ ಮಾಡುವುದು ಸರಿಯಲ್ಲ" ಎಂದಿದ್ದರು. ಕೆಆರ್ ಪುರಂ ಮತ್ತು ವೈಟ್‌ಫೀಲ್ಡ್ ನಡುವಿನ ಹೊಸ ಮೆಟ್ರೋ ಮಾರ್ಗವನ್ನು ಮಾರ್ಚ್ 25 ರಂದು ಉದ್ಘಾಟಿಸಲಾಯಿತು.
ಇನ್ನು, ಬೆಂಗಳೂರಿನಲ್ಲಿ ಸುರಿದ ಮಳೆಗೆ ವರ್ತೂರು ಕೋಡಿ ಮತ್ತು ಕಾಡುಬೀಸನಹಳ್ಳಿ ರಸ್ತೆಗಳಲ್ಲಿಯೂ ನೀರು ನಿಂತಿದೆ. ವೈಟ್‌ಫಿಲ್ಡ್, ಮಾರತ್ತಹಳ್ಳಿ ಸೇರಿದಂತೆ, ಕೋರಮಂಗಲ, ಬಸವನಗುಡಿ, ಜಯನಗರ, ಚಾಮರಾಜಪೇಟೆ, ಟೀಚರ್ಸ್ ಕಾಲೋನಿ, ಮಡಿವಾಳ, ಟಿನ್ ಫ್ಯಾಕ್ಟರಿ ಜಂಕ್ಷನ್, ಯಲಹಂಕ, ಕೃಷ್ಣರಾವ್ ವೃತ್ತ, ವಿಧಾನಸೌಧ, ಮಲ್ಲೇಶ್ವರಂ, ರಾಜಾಜಿನಗರ, ವಿದ್ಯಾರಣ್ಯಪುರ ಸೇರಿ ಹಲವೆಡೆ ಧಾರಾಕಾರ ಮಳೆಯಾಗಿದೆ.
ಹವಾಮಾನ ಇಲಾಖೆಯು ಪತ್ರಿಕಾ ಪ್ರಕಟಣೆಯಲ್ಲಿ, ಮುಂದಿನ 48 ಗಂಟೆಗಳ ಕಾಲ ಸಂಜೆ ಮತ್ತು ರಾತ್ರಿ ಸಮಯದಲ್ಲಿ ಬೆಂಗಳೂರಿನಲ್ಲಿ ಲಘುವಾಗಿ ಸಾಧಾರಣ ಮಳೆ ಅಥವಾ ಗುಡುಗು ಸಹಿತ ಮಳೆಯಾಗಬಹುದು ಎಂದು ತಿಳಿಸಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 31 ಮತ್ತು 22 ಡಿಗ್ರಿ ಸೆಲ್ಸಿಯಸ್ ಆಗಿರುವ ಸಾಧ್ಯತೆಯಿದೆ. ಇನ್ನು ಬೆಂಗಳೂರಿನಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಎಂಟು ವಿಮಾನಗಳ ಮಾರ್ಗ ಬದಲಿಸಲಾಗಿದ್ದು, ಆರು ವಿಮಾನಗಳ ನಿರ್ಗಮನ ವಿಳಂಬವಾಗಿದೆ.












Click it and Unblock the Notifications