Breaking; ಬೆಂಗಳೂರು-ತುಮಕೂರು ಹೆದ್ದಾರಿ ಸರ್ವೀಸ್ ರಸ್ತೆ ಜಲಾವೃತ
ಬೆಂಗಳೂರು, ಸೆಪ್ಟೆಂಬರ್ 05: ಭಾನುವಾರ ತಡರಾತ್ರಿ ಬೆಂಗಳೂರು ನಗರದಲ್ಲಿ ಮಾತ್ರ ಮಳೆ ಸುರಿದಿಲ್ಲ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿಯೂ ಭಾರೀ ಮಳೆಯಾಗಿದೆ. ಇದರ ಪರಿಣಾಮ ಬೆಂಗಳೂರು-ತುಮಕೂರು ರಸ್ತೆ ಜಲಾವೃತವಾಗಿದೆ.
ಬೆಂಗಳೂರು-ತುಮಕೂರು ನಡುವಿನ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆ ನೆಲಮಂಗಲ ಬಳಿ ಜಲಾವೃತವಾಗಿದೆ. ಇದರಿಂದಾಗಿ ಸಂಚಾರ ದಟ್ಟಣೆ ಉಂಟಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಬಳಿ ಸರ್ಕಾರಿ ಶಾಲೆಗೆ ಮಳೆ ನೀರು ನುಗ್ಗಿದೆ. ವಾಜರಹಳ್ಳಿ ಸರ್ಕಾರಿ ಶಾಲೆ ಕಾಂಪೌಂಡ್ಗೆ ಹಾನಿಯಾಗಿದ್ದು, ಕೊಠಡಿಗಳಿಗೂ ನೀರು ನುಗ್ಗಿ ಕಲಿಕಾ ಸಾಮಾಗ್ರಿಗಳಿಗೆ ಹಾನಿಯಾಗಿದೆ.

ಸೋಮವಾರ ಬೆಳಗ್ಗೆ ಶಾಲೆಗೆ ಬಂದ ಮಕ್ಕಳು, ಶಿಕ್ಷಕರು ಶಾಲಾ ಕೊಠಡಿಯಲ್ಲಿ ತುಂಬಿರುವ ನೀರು ಹೊರಹಾಕಲು ಪ್ರಯತ್ನ ನಡೆಸಿದ್ದಾರೆ.
ಎಲ್ಲಾ ನಗರದಲ್ಲೂ ಸಮಸ್ಯೆ; ಬೆಂಗಳೂರು ಮಳೆ, ಪ್ರವಾಹದ ಬಗ್ಗೆ ಐಟಿಬಿಟಿ ಕಂಪನಿಗಳು ಮುಖ್ಯಮಂತ್ರಿಗಳಿಗೆ ಪತ್ರ ಬರೆದ ವಿಚಾರದ ಬಗ್ಗೆ ಐಟಿ-ಬಿಟಿ, ಕೌಶಲ ಅಭಿವೃದ್ಧಿ ಸಚಿವ ಡಾ. ಅಶ್ವಥ ನಾರಾಯಣ್ ಪ್ರತಿಕ್ರಿಯೆ ನೀಡಿದ್ದಾರೆ.
"ಪ್ರವಾಹ ದೇಶಕ್ಕೂ ಯಾವ ರಾಜಧಾನಿಗೂ ತಪ್ಪಿಲ್ಲ. ಎಲ್ಲಾ ದೊಡ್ಡ ನಗರಗಳಲ್ಲಿ ಇಂತಹ ಸಮಸ್ಯೆಯಾಗಿದೆ. ನೆರೆಯ ಸಮಸ್ಯೆಯಾಗಿದೆ. ಈ ಸಲ ಭಾರೀ ಮಳೆಯಾಗುತ್ತಿದೆ. ಬೇಸಿಗೆ ಕೂಡ ಸರಿಯಾಗಿ ಕಂಡಿಲ್ಲ" ಎಂದರು.
"ನಮ್ಮ ಮುಖ್ಯಮಂತ್ರಿಗಳು ನೀರಾವರಿ ಸಚಿವರಾಗಿ ಕೆಲಸ ಮಾಡಿದವರು. ಯಾವ ಕ್ರಮಗಳನ್ನು ಕೈಗೊಳ್ಳಬೇಕೋ ಅದನ್ನು ಮಾಡಲಾಗುತ್ತಿದೆ. ಚರಂಡಿ ಒತ್ತುವರಿಯನ್ನು ಸಹ ತೆರವುಗೊಳಿಸಲಾಗುತ್ತಿದೆ" ಎಂದು ಹೇಳಿದರು.
ಭಾರೀ ಮಳೆಯ ಕಾರಣ ಅಮಾನಿಕೆರೆಯ ಕೋಡಿ ನೀರು ನೆಲಮಂಗಲ ಪಟ್ಟಣದ ಜನವಸತಿ ಪ್ರದೇಶಗಳಿಗೆ ನುಗ್ಗಿದೆ. ಎಂಜಿ ರಸ್ತೆಯ ಸುತ್ತಲಿನ ಬಡಾವಣೆಗಳಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.
ಗಜೇರಿಯಾ ಬಡಾವಣೆ, ಸುಭಾಷ್ ನಗರ, ಜ್ಯೋತಿ ನಗರ, ವಾಜರಹಳ್ಳಿ, ಚನ್ನಪ್ಪ ಬಡಾವಣೆಯ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ತುಮಕೂರು-ಬೆಂಗಳೂರು ಸರ್ವೀಸ್ ರಸ್ತೆ ಜಲಾವೃತಗೊಂಡ ಕಾರಣ ವಾಹನಗಳು ಸಾಲುಗಟ್ಟಿ ನಿಂತಿವೆ.












Click it and Unblock the Notifications