ಬೆಂಗಳೂರು ದಕ್ಷಿಣ ಭಾಗದಲ್ಲಿ ನೀರಿನ ವ್ಯತ್ಯಯ
ಬೆಂಗಳೂರು, ಜೂ. 23 : ಬೆಂಗಳೂರು ಜಲಮಂಡಳಿಯ ಹಾರೋಹಳ್ಳಿ ಪಂಪಿಂಗ್ ಸ್ಟೇಷನ್ ನಲ್ಲಿ ಟ್ರಾನ್ಸ್ಫಾರ್ಮರ್ ಸ್ಫೋಟಗೊಂಡ ಪರಿಣಾಮ ಸೋಮವಾರ ಬೆಂಗಳೂರು ನಗರದ ದಕ್ಷಿಣ ಭಾಗದಲ್ಲಿ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಜಲಮಂಡಳಿ ತಿಳಿಸಿದೆ.
ಶನಿವಾರ ರಾತ್ರಿ ಕಾವೇರಿ ನೀರು ಪೂರೈಕೆಯ ಹಾರೋಹಳ್ಳಿ ಪಂಪಿಂಗ್ ಸ್ಟೇಷನ್ನಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಆದ್ದರಿಂದ ಕಾವೇರಿ ಒಂದು, ಎರಡು ಹಾಗೂ ಮೂರನೇ ಹಂತದ ಪಂಪಿಂಗ್ ಕಾರ್ಯ ಸ್ಥಗಿತಗೊಂಡಿತ್ತು. ಭಾನುವಾರ ನಗರದಲ್ಲಿ ನೀರಿನ ಪೂರೈಕೆಯಲ್ಲಿ ತೊಂದರೆ ಉಂಟಾಗಿತ್ತು.

ಭಾನುವಾರ ದುರಸ್ತಿ ಕಾರ್ಯ ಪೂರ್ಣಗೊಳಿಸಿ ನೀರು ಪೂರೈಕೆಯನ್ನು ಯಥಾಸ್ಥಿತಿಗೆ ತರಲಾಗಿದೆ. ಆದರೆ, ಒಂದನೇ ಹಂತದ ಘಟಕದಲ್ಲಿ ಮಾತ್ರ ಕಡಿಮೆ ನೀರು ಪೂರೈಕೆಯಾಗಿದೆ. ಆದ್ದರಿಂದ ದಕ್ಷಿಣ ಭಾಗಕ್ಕೆ ಸ್ವಲ್ಪ ಮಟ್ಟಿನ ವ್ಯತ್ಯಯ ಆಗುತ್ತದೆ ಎಂದು ಬೆಂಗಳೂರು ಜಲಮಂಡಳಿ ಮುಖ್ಯ ಎಂಜಿನಿಯರ್ ಎಸ್.ಕೃಷ್ಣಪ್ಪ ತಿಳಿಸಿದ್ದಾರೆ. [ನೀರಿನ ದರ ಏರಿಕೆ ಇಲ್ಲ]
ಶನಿವಾರ ರಾತ್ರಿ ಟ್ರಾನ್ಸ್ಫಾರ್ಮರ್ ಸುಟ್ಟಿದ್ದರಿಂದ ನೀರು ಪಂಪಿಂಗ್ ಕಾರ್ಯ ಸ್ಥಗಿತಗೊಂಡು ಭಾನುವಾರ ನಗರದ ಹಲವು ಪ್ರದೇಶಗಳಿಗೆ ನೀರು ಪೂರೈಕೆಯಾಗಿರಲಿಲ್ಲ. ವಿಜಯನಗರ, ಬಸವೇಶ್ವರನಗರ, ಆರ್.ಟಿ.ನಗರ ಮೊದಲಾದ ಕಡೆ ಸಂಗ್ರಹಾಗಾರದಲ್ಲಿ ಇದ್ದ ನೀರನ್ನು ಪೂರೈಕೆ ಮಾಡಲಾಯಿತು.
ವಿದ್ಯುತ್ ವ್ಯತ್ಯಯದಿಂದ ಒಮ್ಮೆ ಪಂಪಿಂಗ್ ಕಾರ್ಯ ಸ್ಥಗಿತಗೊಂಡರೆ ಯಥಾಸ್ಥಿತಿಗೆ ಬರಲು ಒಂದು ದಿನ ಬೇಕಾಗುತ್ತದೆ. ನೂರು ಕಿ.ಮೀ. ದೂರದ ಕಾವೇರಿಯಿಂದ ನೀರು ಪಂಪಿಂಗ್ ಆಗಬೇಕಾಗಿರುವುದರಿಂದ ಕಾಲಾವಕಾಶ ಅಗತ್ಯ. ಸೋಮವಾರ ಸಂಜೆ ಇಲ್ಲವೇ ಮಂಗಳವಾರದೊಳಗೆ ನೀರು ಸರಬರಾಜು ಸಹಜ ಸ್ಥಿತಿಗೆ ಬರಲಿದೆ ಎಂದು ಜಲಮಂಡಳಿ ಅಧಿಕಾರಿಗಳು ಹೇಳಿದ್ದಾರೆ.


Click it and Unblock the Notifications
