ಬೆಂಗಳೂರಿಗೆ ಕಾಡಲಿದೆ ನೀರಿನ ಅಭಾವ: ಮಳೆ ಬಾರದಿದ್ದರೆ ಪರಿಸ್ಥಿತಿ ಗಂಭೀರ
ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಕೃಷ್ಣರಾಜ ಸಾಗರ ಅಣೆಕಟ್ಟಿನ ನೀರಿನ ಸಂಗ್ರಹ ತೀವ್ರವಾಗಿ ಕುಸಿತ ಕಂಡಿದ್ದು, ಬೆಂಗಳೂರಿಗೆ ಜಲಕ್ಷಾಮ ಉಂಟಾಗುವ ಸಾಧ್ಯತೆ ಇದೆ. ಕೆಆರ್ಎಸ್ ನೀರಿನ ಸಂಗ್ರಹ 5 ವರ್ಷಗಳಲ್ಲಿ ಕನಿಷ್ಠ ಮಟ್ಟಕ್ಕೆ ತಲುಪಿದ್ದು, ಈಗ ಆತಂಕಕ್ಕೆ ಕಾರಣವಾಗಿದೆ.
ಕೆಆರ್ಎಸ್ ಡ್ಯಾಂನಲ್ಲಿ ನೀರಿನ ಮಟ್ಟ ಕುಸಿಯುತ್ತಿರುವ ಹಿನ್ನೆಲೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾವೇರಿ ನೀರಾವರಿ ನಿಗಮಕ್ಕೆ ಪತ್ರ ಬರೆದಿದ್ದು ವಿಶೇಷ ಮನವಿ ಮಾಡಿಕೊಂಡಿದೆ. ಸದ್ಯ ಕೃಷ್ಣರಾಜ ಸಾಗರದಲ್ಲಿ ಕೇವಲ 11 ಟಿಎಂಸಿ ಮಾತ್ರ ನೀರಿದ್ದು, ಮುಂದಿನ ದಿನಗಳಲ್ಲಿ ಬೆಂಗಳೂರಿಗೆ ನೀರಿನ ಸರಬರಾಜಿನಲ್ಲಿ ಕೊರತೆ ಉಂಟಾಗುವ ಸಾಧ್ಯತೆ ಇದೆ.

ಆದ್ದರಿಂದ ಬೆಂಗಳೂರಿಗೆ ಅಗತ್ಯವಿರುವ ನೀರನ್ನು ಕಾಯ್ದಿರಿಸುವಂತೆ ಮನವಿ ಮಾಡಲಾಗಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾವೇರಿ ನೀರಾವರಿ ಮುಖ್ಯ ಇಂಜಿನಿಯರ್ ನಿಗಮಕ್ಕೆ ಪತ್ರ ಬರೆದಿದ್ದು ಜೂನ್, ಜುಲೈ ,ಆಗಸ್ಟ್ವರೆಗೆ ಬಳಕೆಗೆ ಅಗತ್ಯವಿರುವ 4.8 ಟಿಎಂಸಿ ನೀರನ್ನು ಕಾಯ್ದಿರಿಸಿ ಎಂದು ಕೇಳಿದ್ದಾರೆ.
ಬೆಂಗಳೂರಿಗೆ ಪ್ರತಿದಿನ 1,450 ಮಿಲಿಯನ್ ಲೀಟರ್ ನೀರು
ಇನ್ನು ಮಹಾನಗರ ಬೆಂಗಳೂರಿಗೆ ಪ್ರತಿದಿನ 1,450 ಮಿಲಿಯನ್ ಲೀಟರ್ ನೀರು ಅಗತ್ಯವಿದೆ. ಬೆಂಗಳೂರಿಗೆ ಅಗತ್ಯವಿರುವ ನೀರನ್ನು ಕಾವೇರಿ ನದಿಯ ವಿವಿಧ ಅಣೆಕಟ್ಟುಗಳಿಂದ ಪೂರೈಕೆ ಮಾಡಲಾಗುತ್ತದೆ. ಇದರಂತೆ ಪ್ರತಿ ತಿಂಗಳು ನಗರಕ್ಕೆ 1.6 ಟಿಎಂಸಿ ನೀರು ಬೇಕಾಗುತ್ತದೆ. ಮುಂದಿನ ಮೂರು ತಿಂಗಳಿಗೆ 4.8 ಟಿಎಂಸಿ ನೀರು ಬೇಕಾಗಲಿದ್ದು, ಅಷ್ಟನ್ನು ಕಾಯ್ದಿರಿಸಲು ಕೋರಲಾಗಿದೆ.
ಸದ್ಯ ಮುಂಗಾರು ದುರ್ಬಲವಾಗಿರುವದರಿಂದ ಆತಂಕ ಎದುರಾಗಿದೆ. ಮಳೆಗಾಗಿ ಪ್ರಾರ್ಥಿಸಿ ಕೆಆರ್ ಎಸ್ ಅಣೆಕಟ್ಟೆ ಬಳಿ ವಿಶೇಷ ಹೋಮ ಹವನ ಕೂಡ ಮಾಡಲಾಗಿದೆ. ಬಿಪರ್ ಜಾಯ್ ಚಂಡಮಾರುತದ ಪರಿಣಾಮ ಮುಂಗಾರು ದುರ್ಬಲವಾಗಿದೆ. ಅತ್ಯುತ್ತಮ ಮಳೆಯ ನಿರೀಕ್ಷೆಯಲ್ಲಿ ರಾಜ್ಯದ ಜನತೆಗೆ ಕುಡಿಯುವ ನೀರಿಗೂ ಸಮಸ್ಯೆಯಾಗುವ ಆತಂಕ ಎದುರಾಗಿದೆ.
ರಾಜ್ಯದ ಬಹುತೇಕ ಜಲಾಶಯಗಳು ಖಾಲಿ
ಕೃಷ್ಣರಾಜಸಾಗರ ಮಾತ್ರವಲ್ಲದೆ ರಾಜ್ಯದ ಬಹುತೇಕ ಜಲಾಶಯಗಳು ಖಾಲಿಯಾಗಿದ್ದು, ನೀರಿನ ಅಭಾವ ತಲೆದೋರಿದೆ. ಸಿಎಂ ಸಿದ್ದರಾಮಯ್ಯ ಮಹಾರಾಷ್ಟ್ರಕ್ಕೆ ಪತ್ರ ಬರೆದ ಬಳಿಕ ಕೃಷ್ಣಾ ನದಿಗೆ ನೀರು ಹರಿಸಲಾಗಿದೆ. ಆದರೂ ಕೃಷಿ ಮತ್ತು ಕುಡಿಯುವ ಉದ್ದೇಶಕ್ಕೆ ನೀರು ಇಲ್ಲವಾಗಿದ್ದು, ರೈತರು ಕೂಡ ಆತಂಕಗೊಂಡಿದ್ದಾರೆ.












Click it and Unblock the Notifications