ಬೆಂಗಳೂರಿನ ದೊಡ್ಡ ಗ್ರಾಹಕರ ನೀರು ಪೂರೈಕೆ ಶೇ.20ರಷ್ಟು ಕಡಿತ, ಯಾಕೆ?
ಬೆಂಗಳೂರು, ಮಾರ್ಚ್ 13: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ನಗರದ ಜನರಿಗೆ ನೀರು ಪೂರೈಕೆಯ ಸವಾಲು ಎದುರಿಸುತ್ತಿದೆ. ನೀರು ಪೂರೈಕೆಗೆ ಹಲವು ಕ್ರಮಗಳ ಭಾಗವಾಗಿ ಇದೀಗ ಬೃಹತ್ ಗ್ರಾಹಕರ ಶೇಕಡಾ 20ರಷ್ಟನ್ನು ನೀರು ಕಡಿತಕ್ಕೆ ನಿರ್ಧರಿಸಿದೆ. ಯಾರು ದೊಡ್ಡ ಗ್ರಾಹಕರು, ಎಲ್ಲಿವರೆಗೆ ನೀರು ಕಡಿತಗೊಳ್ಳಲಿದೆ, ಜಲಮಂಡಳಿ ಅಧ್ಯಕ್ಷರು ಹೇಳಿದ್ದೇನು ಎಂಬ ಪೂರ್ತಿ ಡಿಟೇಲ್ಸ್ ಇಲ್ಲಿದೆ.
ಮಂಗಳವಾರ ಬೆಂಗಳೂರು ಜಲಮಂಡಳಿಯು ದೊಡ್ಡ ಗಾತ್ರದ ನೀರಿನ ಸಂಪರ್ಕ ಪಡೆದಿರುವ ಪ್ರಮುಖ ಗ್ರಾಹಕರುಗಳೊಂದಿಗೆ ಮಂಡಳಿ ಅಧ್ಯಕ್ಷ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ನೀರು ಕಡಿತ ವಿಚಾರವಾಗಿ ಸಭೆ ನಡೆಸಿದರು.

ರಾಜಧಾನಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಿಗುಡಾಯಿಸಿದೆ. ಬೆಂಗಳೂರಿನಲ್ಲಿ 1.40 ಕೋಟಿ ಜನಸಂಖ್ಯೆ ಇದ್ದು, ಇವರಿಗೆ ಈ ಬೇಸಿಗೆಯಲ್ಲಿ ನೀರನ್ನು ಸಮಪರ್ಕವಾಗಿ ಒದಗಿಸುವಲ್ಲಿ ಜಲಮಂಡಲಿ ಸವಾಲು ಎದುರಿಸುತ್ತಿದೆ. ಆದರೂ ಸೂಕ್ತ ನೀರು ಪೂರೈಕೆಗೆ ಅಗತ್ಯ ಎಲ್ಲ ಕ್ರಮ ಜಲಮಂಡಳಿ ಕೈಗೊಂಡಿದೆ.
ಈ ದಿನಾಂಕಗಳಲ್ಲಿ ಹಂತ ಹಂತವಾಗಿ ಕಡಿತ
ಇದರ ಮುಂದುವರಿದ ಭಾಗವಾಗಿ ಇದೀಗ ಇದೇ ಮಾರ್ಚ್ 15ರಿಂದ ದೊಡ್ಡಗಾತ್ರದ ಪ್ರಮುಖ ಗ್ರಾಹಕರ ನೀರಿನ ಪೂರೈಕೆಯಲ್ಲಿ ಶೇ.20ರಷ್ಟು ನೀರನ್ನು ಹಂತ ಹಂತವಾಗಿ ಮಂಡಳಿಯಿಂದ ಪೂರೈಸಲಾಗುತ್ತಿರುವ ಕಾವೇರಿ ನೀರನ್ನು ಕಡಿತಗೊಳಿಸಲಾಗುವುದು ಎಂದು ಅವರು ಸಭೆಯಲ್ಲಿ ತಿಳಿಸಿದರು.

ಮಾರ್ಚ್ 15ರಿಂದ ಏಪ್ರಿಲ್ 01 ರವರೆಗೆ ಶೇ.10 ರಷ್ಟು ಹಾಗೂ ಏ.1ರಿಂದ ಏ.15ರವರೆಗೆ ಶೇ.10ರಷ್ಟು ಸೇರಿದಂತೆ ಶೇ.20ರಷ್ಟು ಮಂಡಳಿಯಿಂದ ಪೂರೈಸಲಾಗುತ್ತಿರುವ ಕಾವೇರಿ ನೀರು ಕಡಿತಗೊಳಿಸಲಾಗುವುದು. ನಗರದಲ್ಲಿ ಒಟ್ಟು 38 ದೊಡ್ಡ ಗಾತ್ರದ ನೀರಿನ ಸಂಪರ್ಕ ಪಡೆದ ಪ್ರಮುಖ ಗ್ರಾಹಕರಿದ್ದಾರೆ.
ಈ ಆರೋಗ್ಯ ಸಂಸ್ಥೆ ಬಿಟ್ಟು ಉಳಿದೆಡೆ ಕಡಿತ
ಇನ್ನೂ ನಿಮ್ಹಾನ್ಸ್, ಏರ್ ಫೋರ್ಸ್ ಕಮಾಂಡಿಂಗ್ ಆಸ್ಪತ್ರೆ, ವಿಕ್ಟೋರಿಯಾ ಆಸ್ಪತ್ರೆಗಳಿಗೆ ಪೂರೈಸಲಾಗುತ್ತಿರುವ ನೀರಿನಲ್ಲಿ ಯಾವುದೇ ರೀತಿಯಲ್ಲಿ ಕಡಿತಗೊಳಿಸದೇ ಉಳಿದ 35 ದೊಡ್ಡ ಗಾತ್ರದ ನೀರಿನ ಸಂಪರ್ಕ ಪಡೆದ ಪ್ರಮುಖ ಗ್ರಾಹಕರಿಗೆ ಕಾವೇರಿ ನೀರು ಕಡಿತಗೊಳಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಬೆಂಗಳೂರಿನಲ್ಲಿ ದೊಡ್ಡಗಾತ್ರದ ನೀರಿನ ಸಂಪರ್ಕ ಪಡೆದಿರುವವರು 1.40ಕೋಟಿ ಜನರ ಹಿತದೃಷ್ಟಿಯಿಂದ ಮಂಡಳಿ ಕೈಗೊಂಡಿರುವ ಈ ನಿರ್ಧಾರಕ್ಕೆ ಕೈಜೋಡಿಸಬೇಕು ಎಂದು ಅಧ್ಯಕ್ಷರು ಕೋರಿದರು.
ದೊಡ್ಡಗಾತ್ರದ ನೀರಿನ ಸಂಪರ್ಕ ಪಡೆದಿರುವವರಿಗೆ ಮಂಡಳಿ ವತಿಯಿಂದ ಇದುವರೆಗೆ ಶೇ.95 ರಿಂದ ಶೇ.100 ರಷ್ಟು ಪೂರೈಸಲಾಗುತ್ತಿದ್ದು, ಇದರಲ್ಲಿ ಇನ್ಮುಂದೆ ಶೇ.20ರಷ್ಟು ನೀರು ಪೂರೈಕೆ ಕಡಿತಗೊಳಿಸಲಾಗುವುದು.
ದೊಡ್ಡ ಗ್ರಾಹಕರು ಯಾರು?
ನೃಋತ್ಯ ರೈಲ್ವೆ, ಎಚ್ಎಎಲ್, ಏರ್ ಪೋರ್ಸ್, ಡಿಫೆನ್ಸ್, ಸಿ.ಆರ್.ಪಿ.ಎಫ್,ಬಯೋಕಾನ್, ನಿಮ್ಹಾನ್ಸ್, ವಿಕ್ಟೋರಿಯಾ ಆಸ್ಪತ್ರೆ ಸೇರಿದಂತೆ ದೊಡ್ಡಗಾತ್ರದ ನೀರಿನ ಸಂಪರ್ಕ ಪಡೆದಿರುವ ಅನೇಕ ಸಂಸ್ಥೆಗಳು ತಮ್ಮ ಕ್ಯಾಂಪಸ್ ನಲ್ಲಿ ನೀರಿನ ಪ್ರಾಮುಖ್ಯತೆ, ನೀರಿನ ಉಳಿತಾಯ ಕುರಿತು ಅರಿವು ಮೂಡಿಸಬೇಕು. ಕ್ಯಾಂಪಸ್ ನಲ್ಲಿ ಈಜುಕೋಳಗಳಿದ್ದರೇ ಕೂಡಲೇ ಸ್ಥಗಿತಗೊಳಿಸಿ ಎಂದು ಅವರು ನಿರ್ದೇಶಿಸಿದರು.
ನೀರಿನ ಸಮಸ್ಯೆ ಹಿನ್ನೆಲೆ ಬೆಂಗಳೂರು ನಗರದಲ್ಲಿರುವ ಎಲ್ಲ ಈಜುಕೋಳ ಕಾರ್ಯನಿರ್ವಹಣೆ ಸ್ಥಗಿತಗೊಳಿಸುವ ನಿಟ್ಟಿನಲ್ಲಿ ಆದೇಶ ಹೊರಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ದೊಡ್ಡಗಾತ್ರದ ನೀರಿನ ಸಂಪರ್ಕ ಪಡೆದ ಪ್ರಮುಖ ಗ್ರಾಹಕರ ನೀರಿನ ಪೂರೈಕೆಯಲ್ಲಿ ಶೇ. 20ರಷ್ಟು ಕಡಿತಗೊಳಿಸಿದ ನೀರನ್ನು ಜನನೀಬಿಡ ಪ್ರದೇಶಗಳಿಗೆ, ಸ್ಲಂಗಳು ಹಾಗೂ ಬಡವರು ವಾಸಿಸುತ್ತಿರುವ ಪ್ರದೇಶಗಳಿಗೆ ಮತ್ತು ಅತ್ಯಂತ ಅವಶ್ಯವಿರುವ ಪ್ರದೇಶಗಳಿಗೆ ಪೂರೈಸುವಂತೆ ಎಂಜನಿಯರ್ ಗಳಿಗೆ ಸೂಚಿಸಿದರು.
ಸಭೆಯಲ್ಲಿ ದೊಡ್ಡಗಾತ್ರದ ನೀರಿನ ಸಂಪರ್ಕ ಪಡೆದ ಪ್ರಮುಖ ಸಂಸ್ಥೆಗಳ ಪ್ರತಿನಿಧಿಗಳು, ಮಂಡಳಿಯ ಮುಖ್ಯ ಎಂಜನಿಯರ್ ಗಳು ಹಾಗೂ ಎಂಜನಿಯರ್ ಗಳು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.












Click it and Unblock the Notifications