ಕೊತ್ತನೂರು ಬಳಿ ಕಟ್ಟಡ ಕುಸಿತ, 2 ಸಾವು
ಬೆಂಗಳೂರು, ಮೇ 15 : ನಿರ್ಮಾಣ ಹಂತದ ಕಟ್ಟಡದ ಪಕ್ಕದ ಗೋಡೆ ಕುಸಿದು ಬಿದ್ದು 2 ಕಾರ್ಮಿಕರು ಸಾವನ್ನಪ್ಪಿದ್ದ ಘಟನೆ ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ಬೆಳಗ್ಗೆ ನಡೆದಿದೆ. ಮೃತಪಟ್ಟವರು ಗುಲ್ಬರ್ಗ ಮತ್ತು ಚಿಂತಾಮಣಿಯಿಂದ ಕೂಲಿ ಕೆಲಸ ಅರಸಿಕೊಂಡು ಬೆಂಗಳೂರಿಗೆ ಬಂದಿದ್ದರು.
ಹೆಣ್ಣೂರು ಬಳಿಯ ಭೈರತಿ ಗ್ರಾಮದಲ್ಲಿ ಕಾರ್ಬನ್ ಕನ್‌ಸ್ಟ್ರಕ್ಷನ್ ಕಂಪೆನಿ ಅಪಾರ್ಟ್ ಮೆಂಟ್ ನಿರ್ಮಿಸುತ್ತಿತ್ತು. ಗುರುವಾರ ಬೆಳಗ್ಗೆ ಕಾರ್ಮಿಕರು ಪಾಯ ತೆಗೆಯುವ ಸಂದರ್ಭದಲ್ಲಿ ಪಕ್ಕದ ಮನೆಯ ಕಾಂಪೌಂಡ್ ಗೋಡೆ ಕುಸಿದು ಕಾರ್ಮಿಕರ ಮೇಲೆ ಬಿದ್ದಿದೆ.

ಇದರಿಂದಾಗಿ ಇಬ್ಬರು ಕಾರ್ಮಿಕರು ಮಣ್ಣಿನಡಿ ಸಿಲುಕಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಗೋಡೆ ಕುಸಿದ ಸುದ್ದಿ ತಿಳಿದು ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದರು. ಆದರೆ, ಕಾರ್ಮಿಕರ ಜೀವ ಉಳಿಸಲು ಸಾಧ್ಯವಾಗಿಲ್ಲ. ಹುಸೇನ್ ಎಂಬ ಕಾರ್ಮಿಕ ಘಟನೆಯಲ್ಲಿ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. [ಮೂರು ಜೀವ ತೆಗೆದ ಆರು ಅಂತಸ್ತಿನ ಕಟ್ಟಡ]
ಕೂಲಿಗಾಗಿ ಬಂದಿದ್ದರು : ಗೋಡೆ ಕುಸಿದು ಮೃತಪಟ್ಟ ಕಾರ್ಮಿಕರನ್ನು ಚಿಂತಾಮಣಿಯ ಪೆದ್ದೂರು ಗ್ರಾಮದ ಚನ್ನಪ್ಪಯ್ಯ ಮತ್ತು ಗುಲ್ಬರ್ಗದ ಚಿತ್ತಾಪುರ ತಾಲ್ಲೂಕಿನ ಶರಣಪ್ಪ ಎಂದು ಗುರುತಿಸಲಾಗಿದೆ. ಇವರು ಕೂಲಿ ಅರಸಿಕೊಂಡು ಬೆಂಗಳೂರಿಗೆ ಆಗಮಿಸಿದ್ದರು. ಕಳೆದ ಒಂದು ತಿಂಗಳಿನಿಂದ ಅಪಾರ್ಟ್ ಮೆಂಟ್ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.
ಕೊತ್ತನೂರು ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ನಡೆಸುತ್ತಿದ್ದಾರೆ. ಈಶಾನ್ಯ ವಿಭಾಗದ ಡಿಸಿಪಿ ಸುರೇಶ್ ಸ್ಥಳ ಪರಿಶೀಲನೆ ನಡೆಸಿದ್ದು, ಈ ಜಾಗದ ಮಾಲೀಕರು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ. ಆದ್ದರಿಂದ ದುರಂತ ಸಂಭವಿಸಿದೆ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.












Click it and Unblock the Notifications