ಬೆಂಗಳೂರು; ಪ್ಯಾರಾ ಮೆಡಿಕಲ್ ಹುದ್ದೆಗೆ ನೇರ ಸಂದರ್ಶನ
ಬೆಂಗಳೂರು, ಆಗಸ್ಟ್ 04: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೋವಿಡ್ 19 ನಿಯಂತ್ರಣಕ್ಕಾಗಿ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಆರೋಗ್ಯ ವಿಭಾಗದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ತಾತ್ಕಾಲಿಕವಾಗಿ ಭರ್ತಿ ಮಾಡಲಾಗುತ್ತಿದೆ.
ಬಿಬಿಎಂಪಿ ಯು ಪ್ಯಾರಾ ಮೆಡಿಕಲ್ ಸಿಬ್ಬಂದಿಗಳನ್ನು ನೇಮಕಾತಿ ಮಾಡಿಕೊಳ್ಳುತ್ತಿದೆ. ಇದಕ್ಕಾಗಿ ಆಗಸ್ಟ್ 4 ರಿಂದ 6ರ ತನಕ ನೇರ ಸಂದರ್ಶನವನ್ನು ಆಯೋಜನೆ ಮಾಡಿದೆ. ಆಸಕ್ತ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಬಹುದು.
ಕೋವಿಡ್ ಶಂಕಿತ ರೋಗಿಗಳನ್ನು ಕರೆದೊಯ್ಯುವ 100 ಬಿಎಲ್‌ಎಸ್ ಅಂಬ್ಯುಲೆನ್ಸ್‌ಗಳಲ್ಲಿ ಪ್ಯಾರಾ ಮೆಡಿಕಲ್ ಸಿಬ್ಬಂದಿಗಳ ಸೇವೆಯನ್ನು ಪಡೆಯಲು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಒಟ್ಟು ನೂರು ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ವಾಕಿನ್ ಇಂಟರ್ ವ್ಯೂ ಮೂಲಕ ನೇಮಕಾತಿ ಮಾಡಿಕೊಳ್ಳಲಿದೆ. ಆಸಕ್ತರು ಇಂದಿನಿಂದ ದಿ.06.08.2020ರ ಬೆಳಿಗ್ಗೆ 10.30 ರಿಂದ 5.30 ರವರೆಗೆ ನಡೆಯಲಿರುವ ಸಂದರ್ಶನದಲ್ಲಿ ಭಾಗವಹಿಸಬಹುದು. ಆಯ್ಕೆಯಾದ ಅಭ್ಯರ್ಥಿಗಳಿಗೆ 15 ಸಾವಿರ ರೂ. ವೇತನ ಮತ್ತು 5 ಸಾವಿರ ರೂ. ಕೋವಿಡ್ ಭತ್ಯೆ ನೀಡಲಾಗುತ್ತದೆ.
ಅಭ್ಯರ್ಥಿಗಳು ಕರ್ನಾಟಕ ಪ್ಯಾರಾಮೆಡಿಕಲ್ ಬೋರ್ಡ್‌ನಿಂದ ಅಂಗೀಕೃತ ಸ್ಟಾಫ್ ನರ್ಸ್/ಲ್ಯಾಬ್ ಟೆಕ್ನಿಷಿಯನ್/ ಫಾರ್ಮಾಸಿಸ್ಟ್/ ಎಎನ್‌ಎಂ/ ಕಿರಿಯ ಪುರುಷ ಆರೋಗ್ಯ ಸಹಾಯಕ ಕೋರ್ಸ್‌ಗಳನ್ನು ಪೂರ್ಣಗೊಳಿಸಿರಬೇಕು.
ಅಧಿಸೂಚನೆ ಹೊರಡಿಸಿದ ದಿನಾಂಕಕ್ಕೆ 50 ವರ್ಷಗಳನ್ನು ಮೀರಿರಬಾರದು. ಕನ್ನಡ ಓದಲು, ಬರೆಯಲು ಮತ್ತು ಮಾತನಾಡಲು ಬರಬೇಕು. ಆಸಕ್ತ ಅಭ್ಯರ್ಥಿಗಳು ಸೂಕ್ತ ದಾಖಲಾತಿಗಳ ಜೊತೆ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-22975563.
ನೇರ ಸಂದರ್ಶನದ ಸ್ಥಳ: ಸರ್ ಪುಟ್ಟಣ್ಣಚೆಟ್ಟಿ ಟೌನ್ ಹಾಲ್, ಬೆಂಗಳೂರು. ಸಮಯ : ಬೆಳಗ್ಗೆ 10.30 ರಿಂದ ಸಂಜೆ 5.30.












Click it and Unblock the Notifications