ದೊಡ್ಡ ಕೊಂಬಿನ ರಾಜಕಾರಣಿಗಳಿಗೆ ಅಂಬ್ಯುಲೆನ್ಸ್ ಯಾಕೆ ಕಾಣಲ್ಲ!
ರಾಜಕಾರಣಿಗಳು ಜೇನು ಸುರಿಸುವ ಮಾತನಾಡಿದರೂ ತಮ್ಮ ಗತ್ತು-ಗೈರತ್ತು ಅಷ್ಟು ಸುಲಭಕ್ಕೆ ಬಿಡುವುದಿಲ್ಲ. ಬೆಂಗಳೂರಿನಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರ ವಾಹನದ ಸಲುವಾಗಿ ಅಂಬ್ಯುಲೆನ್ಸ್ ಅನ್ನು ಕಾಯಿಸಿದ ಸುದ್ದಿ ನಿಮಗೆ ಗೊತ್ತಾಯ್ತಾ?
ಬೆಂಗಳೂರು, ಮೇ 8: ಗಣ್ಯರು, ರಾಜಕಾರಣಿಗಳು ದೊಡ್ಡ ಕೊಂಬಿನವರು ಅನ್ನೋದು ಸಾಬೀತು ಪಡಿಸುವ ಮತ್ತೊಂದು ಘಟನೆ ನಡೆದಿದೆ. ಕರ್ನಾಟಕದ ಗೃಹ ಸಚಿವ ಡಾ.ಜೊ.ಪರಮೇಶ್ವರ ಅವರಿಗೆ ದಾರಿ ಮಾಡಿಕೊಡುವ ಕಾರಣಕ್ಕೆ ಆಂಬ್ಯುಲೆನ್ಸ್ ಒಂದನ್ನು ಸೋಮವಾರ ಕಾಯಿಸಲಾಗಿದೆ.
ಬೆಂಗಳೂರಿನ ಕಾಂಗ್ರೆಸ್ ಕಚೇರಿ ಬಳಿ ಗೃಹಸಚಿವರ ವಾಹನಕ್ಕೆ ದಾರಿ ಮಾಡಿಕೊಡುವ ಕಾರಣಕ್ಕೆ ಬಹಳ ಹೊತ್ತು ವಾಹನಗಳನ್ನು ನಿಲ್ಲಿಸಲಾಗಿತ್ತು. ಇಂತಹ ದಟ್ಟಣೆ ಮಧ್ಯೆ ಅಂಬ್ಯುಲೆನ್ಸ್ ಸಿಕ್ಕಿ ಹಾಕಿಕೊಂಡು, ಅವಸ್ಥೆ ಪಡುವಂತಾಯಿತು. ಪರಮೇಶ್ವರ್ ಅವರಾಗಲೀ ಅಥವಾ ಪೊಲೀಸರಾಗಲೀ ಆ ಅಂಬ್ಯುಲೆನ್ಸ್ ತೆರಳಲು ಯಾವ ಅನುಕೂಲವೂ ಮಾಡಿಕೊಡಲಿಲ್ಲ.[ಸಿದ್ದರಾಮಯ್ಯ ಕಾರಿನ ಕೆಂಪು ದೀಪ ತೆಗೆದವರ್ಯಾರು..?!]

ಸಚಿವರ ವಾಹನಗಳೆಲ್ಲ ತೆರಳಿ, ಸಂಚಾರ ದಟ್ಟಣೆಯಿಂದ ಮುಂದೆ ತೆರಳಲು ಸಾಧ್ಯವಾದ ನಂತರವಷ್ಟೇ ಅಂಬ್ಯುಲೆನ್ಸ್ ಹೋಯಿತು. ಅಂಬ್ಯುಲೆನ್ಸ್ ನ ಯಾಕೆ ಕಾಯಿಸಿದಿರಿ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ (ಸಂಚಾರ)ರನ್ನು ಪ್ರಶ್ನಿಸಿದರೆ, ಮಾತೇ ಆಡಲಿಲ್ಲ. ಅಂಬ್ಯುಲೆನ್ಸ್ ಗೆ ಮೊದಲ ಆದ್ಯತೆ ಎಂಬ ನಿಯಮ ಉಲ್ಲಂಘನೆ ಆಗುತ್ತಿರುವುದು ಇದೇ ಮೊದಲೇನಲ್ಲ.
ವಾರದ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಾಹನಗಳು ತೆರಳುವುದಕ್ಕಾಗಿ ಅಂಬ್ಯುಲೆನ್ಸ್ ನನ್ನು ನಿಲ್ಲಿಸಲಾಗಿತ್ತು. ಅದು ತುಂಬ ವಾಹನ ದಟ್ಟಣೆಯ ಸಮಯ. ಅದರಿಂದ ಹಾಗಾಯಿತು ಎಂದು ಸಂಚಾರ ಪೊಲೀಸರು ತಿಪ್ಪೆ ಸಾರಿಸಿದರು. ಆ ನಂತರ ಸ್ವತಃ ಸಿದ್ದರಾಮಯ್ಯ ಸ್ಪಷ್ಟನೆ ನೀಡಿ, ಇನ್ನು ಮುಂದೆ ಹೀಗಾಗದಂತೆ ಎಚ್ಚರ ವಹಿಸುವುದಾಗಿ ತಿಳಿಸಿದರು.[ಗೂಟದ ಕಾರುಗಳಿಗೆ, ವಿಐಪಿ ಸಂಸ್ಕೃತಿಗೆ ಗುಡ್ ಬೈ!]
ಇಷ್ಟೆಲ್ಲ ಅವಸ್ಥೆಗಳನ್ನು ನೋಡಿದರೂ ಸಹ ಪೊಲೀಸರು ಸ್ವಲ್ಪ ಮಟ್ಟಿಗೆ ರಿಸ್ಕ್ ತೆಗೆದುಕೊಳ್ಳಲು ಸಹ ಸಿದ್ಧರಿಲ್ಲ. ಇನ್ನು ರಾಜಕಾರಣಿಗಳು ತಮ್ಮ ಗತ್ತು-ಗೈರತ್ತು ಬಿಡಲು ಒಪ್ಪುವುದಿಲ್ಲ.












Click it and Unblock the Notifications