ಬೆಂಗಳೂರಿನ ವಿವಿ ಪುರಂ ಹೈಟೆಕ್ ಫುಡ್‌ಸ್ಟ್ರೀಟ್ ಜುಲೈ 15ರೊಳಗೆ ಓಪನ್
ಬೆಂಗಳೂರು, ಜೂನ್ 18; ಬೆಂಗಳೂರಿನಲ್ಲಿ ವಾರಾಂತ್ಯದಲ್ಲಿ ಜನರು ವಿವಿ ಪುರಂ ಫುಡ್‌ಸ್ಟ್ರೀಟ್‌ಗೆ ಹೋಗಲು ಬಯಸುತ್ತಾರೆ. ನಗರದ ಆಹಾರ ಪ್ರಿಯರಿಗೆ ಸಿಹಿಸುದ್ದಿಯೊಂದಿದೆ. ಕೆಲವೇ ದಿನಗಳಲ್ಲಿ ಮತ್ತೆ ನೀವು ಫುಡ್‌ಸ್ಟ್ರೀಟ್‌ಗೆ ಹೋಗಿ ವಿವಿಧ ಖಾದ್ಯಗಳ ರುಚಿಯನ್ನು ಸವಿಯಬಹುದಾಗಿದೆ.
ಸುಮಾರು 6 ಕೋಟಿ ರೂಪಾಯಿ ವೆಚ್ಚದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಿವಿ ಪುರಂ ಫುಡ್‌ಸ್ಟ್ರೀಟ್ ಅಭಿವೃದ್ಧಿಗೊಳಿಸುತ್ತಿದೆ. ಈ ಕಾಮಗಾರಿಯು ಪೂರ್ಣಗೊಳ್ಳುತ್ತಾ ಬಂದಿದ್ದು, ಜುಲೈ 15ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಚಿಕ್ಕಪೇಟೆಯ ಬಿಜೆಪಿ ಶಾಸಕ ಡಾ. ಉದಯ್ ಗರುಡಾಚಾರ್ ವಿವಿ ಪುರಂ ಫುಡ್‌ಸ್ಟ್ರೀಟ್ (ತಿಂಡಿ ಬೀದಿ)ಗೆ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಿದರು. ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹೈಟೆಕ್ ಸ್ಪರ್ಶ; ಬಿಬಿಎಂಪಿ ಕಮರ್ಷಿಯಲ್ ಸ್ಟ್ರೀಟ್, ಚರ್ಚ್ ಸ್ಟ್ರೀಟ್ ಮಾದರಿಯಲ್ಲಿ ವಿವಿ ಪುರಂ ಫುಡ್‌ಸ್ಟ್ರೀಟ್ ಅಭಿವೃದ್ಧಿ ಮಾಡುತ್ತಿದೆ. ನವೀಕರಣಗೊಂಡ ವಿವಿ ಪುರಂ ಫುಡ್‌ಸ್ಟ್ರೀಟ್ ಯಾವಾಗ ಓಪನ್ ಆಗಲಿದೆ? ಎಂದು ಜನರು ಸಹ ಕಾದು ಕುಳಿತಿದ್ದಾರೆ.
2022ರಲ್ಲಿ ಬಿಬಿಎಂಪಿ ಈ ಕಾಮಗಾರಿ ಕೈಗೊಂಡಿದೆ. ಮೊದಲು ಅಂದಾಜಿಸಿದಂತೆ 4 ತಿಂಗಳಿನಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಬಿಬಿಎಂಪಿ ವಲಯ ಆಯುಕ್ತರ ಪ್ರಕಾರ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಕಾಮಗಾರಿ ವಿಳಂಬವಾಗಿದೆ. ಆದರೆ ಜುಲೈ 15ರೊಳಗೆ ಎಲ್ಲವೂ ಪೂರ್ಣಗೊಳ್ಳಲಿದೆ.
ಈಗ ನವೀಕರಣ ಕಾಮಗಾರಿಯ ಕಾರಣ ಸಂಜೆ 6 ಗಂಟೆಯ ನಂತರ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಈ ಹಿಂದೆ 4 ಗಂಟೆಗೆ ವಿವಿ ಪುರಂ ಫುಡ್‌ಸ್ಟ್ರೀಟ್ ಅಂಗಡಿಗಳು ಬಾಗಿಲು ತೆರೆಯುತ್ತಿದ್ದವು. ಸುಮಾರು 40 ಮಳಿಗೆಗಳು ಬಗೆ ಬಗೆಯ ಆಹಾರವನ್ನು ಜನರಿಗೆ ನೀಡುತ್ತಿದ್ದವು.
ಸಂಜೆಯಾದರೆ ಜನರು ಆಹಾರ ಸವಿಯಲು ಸೇರುವ ಜಾಗ ವಿವಿ ಪುರಂ ಫುಡ್‌ಸ್ಟ್ರೀಟ್. ನವೀಕರಣ ಕಾರ್ಯದ ಕಾರಣ ರಸ್ತೆ ಅಗೆದು, ಪೈಪ್ ಹಾಕಿ ರಸ್ತೆಯಲ್ಲಿ ಓಡಾಡುವುದೇ ಕಷ್ಟವಾಗಿದೆ. ಎಲ್ಲಾ ಕಾಮಗಾರಿಗಳು ಪೂರ್ಣಗೊಂಡರೆ ಜನರು ಸುಲಭವಾಗಿ ವಿವಿ ಪುರಂ ಫುಡ್‌ಸ್ಟ್ರೀಟ್ ಸುತ್ತಿ ತಮ್ಮಿಷ್ಟದ ಆಹಾರ ಸವಿಯಬಹುದಾಗಿದೆ.
ವಿವಿ ಪುರಂ ಫುಡ್‌ಸ್ಟ್ರೀಟ್‌ನಲ್ಲಿ ಹಲವಾರು ಸಮಸ್ಯೆಗಳಿತ್ತು. ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುತ್ತಿದ್ದರು. ಜನರು ಕುಳಿತುಕೊಂಡು ಆಹಾರ ಸೇವಿಸುವಷ್ಟು ಫುಟ್‌ಪಾತ್ ವಿಸ್ತಾರ ಇರಲಿಲ್ಲ. ಮೂಲ ಸೌಕರ್ಯಗಳ ಕೊರತೆ ಇತ್ತು. ಆದ್ದರಿಂದ ಬಿಬಿಎಂಪಿ ನಿತ್ಯ ಸಾವಿರಾರು ಜನರು ಭೇಟಿ ನೀಡುವ ಸ್ಥಳಕ್ಕೆ ಹೈಟೆಕ್ ಸ್ಪರ್ಶ ನೀಡುವ ಕಾಮಗಾರಿ ಕೈಗೊಂಡಿತ್ತು.
ಬೆಂಗಳೂರು ನಗರದ ಪುರಾತನ ಫುಡ್‌ಸ್ಟ್ರೀಟ್ ಸಜ್ಜನ್ ರಾವ್ ವೃತ್ತದಿಂದ ಮಿನರ್ವ ವೃತ್ತದ ತನಕ ಇದೆ. ಸುಮಾರು 40 ಅಂಡಿಗಳು ಹಲವು ತಳ್ಳುಗಾಡಿಗಳು ವಿವಿ ಪುರಂ ಫುಡ್‌ಸ್ಟ್ರೀಟ್‌ನಲ್ಲಿ ವ್ಯಾಪಾರ ವಹಿವಾಟು ನಡೆಸುತ್ತವೆ. ಸಂಜೆ ಆದರೆ ಸಾಕು ತಿಂಡಿ ಪ್ರಿಯರ ದಂಡು ವಿವಿ ಪುರಂ ಕಡೆ ಆಗಮಿಸುತ್ತದೆ.
7 ಮೀಟರ್ ಇದ್ದ ರಸ್ತೆಯನ್ನು 5 ಮೀಟರ್‌ಗೆ ಇಳಿಸಿ, ಪಾದಚಾರಿಗಳು, ಆಹಾರ ಪ್ರಿಯರನ್ನು ಗಮನದಲ್ಲಿಟ್ಟುಕೊಂಡು ಹಲವು ಮೂಲ ಸೌಕರ್ಯಗಳನ್ನು ಒದಗಿಸಿ ವಿವಿ ಪುರಂ ಫುಡ್‌ಸ್ಟ್ರೀಟ್‌ಗೆ ಹೈಟೆಕ್ ಸ್ಪರ್ಶ ನೀಡಲಾಗುತ್ತದೆ. ವಾಹನ ನಿಲುಗಡೆ ವ್ಯವಸ್ಥೆ, ಪ್ರತಿ ಮಳಿಗೆಗೆ ಕೈ ತೊಳೆಯಲು ವ್ಯವಸ್ಥೆ, ರಸ್ತೆ ಬದಿಯಲ್ಲಿಯೇ ಕುಳಿತು/ ನಿಂತು ಆಹಾರ ಸೇವಿಸಲು ವ್ಯವಸ್ಥೆ ಸೇರಿ ಹಲವು ಕಾಮಗಾರಿ ಕೈಗೊಳ್ಳಲಾಗಿದೆ.
ಫುಡ್‌ಸ್ಟ್ರೀಟ್‌ನ ವ್ಯಾಪಾರಿಗಳು, ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಮಗಾರಿ ಕೈಗೊಳ್ಳಲಾಗಿದೆ. ಫುಡ್‌ಸ್ಟ್ರೀಟ್‌ಗೆ ಬರುವ ಜನರಿಗೆ ಮನರಂಜನೆ ನೀಡಲು ರಸ್ತೆಯಲ್ಲಿ ವೇದಿಕೆ ನಿರ್ಮಿಸಲಾಗುತ್ತಿದೆ. ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆಗೆ ಸಹ ಇಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ.












Click it and Unblock the Notifications