ವೋಟರ್ ಐಡಿ ಮಿಸ್ಸಿಂಗ್ ಕೇಸ್: ಎಸ್‌ಐಟಿ ರಚನೆಗೆ ಹೈಕೋರ್ಟ್ ಸಿಜೆಗೆ ಮೊರೆ
ಬೆಂಗಳೂರು, ಡಿ.6: ರಾಜಕೀಯ ಪಕ್ಷಗಳ ಮೇಲಾಟಕ್ಕೆ ಕಾರಣವಾಗಿರುವ ಬೆಂಗಳೂರಿನ ಮತದಾರರ ಹೆಸರು ಕೈ ಬಿಟ್ಟ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.
ಈ ಮಧ್ಯೆ, ರಾಜಕೀಯ ಪಕ್ಷಗಳ ನಡುವೆ ಆರೋಪ- ಪ್ರತ್ಯಾರೋಪ ಮುಂದುವರಿದಿರುವಂತೆಯೇ ಬೆಂಗಳೂರಿನ ಸಿಟಿಜನ್ಸ್ ರೈಟ್ಸ್ ಫೌಂಡೇಶನ್ (ಸಿಆರ್‌ಎಫ್) ಪ್ರಕರಣದ ಬಗ್ಗೆ ವಿಶೇಷ ತನಿಖಾ ದಳ ರಚಿಸಿ, ಸಿಜೆ ಸುಪರ್ದಿನಲ್ಲಿ ತನಿಖೆ ನಡೆಸಬೇಕು ಎಂದು ಕೋರಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಲೆ ಅವರಿಗೆ ಪತ್ರ ಬರೆದಿದೆ.
ಸಿಆರ್‌ಎಫ್ ಅಧ್ಯಕ್ಷ ಕೆ ಎ ಪೌಲ್ ಅವರು ಸಹಿ ಮಾಡಿರುವ ಪತ್ರದಲ್ಲಿ, ಮತದಾರರ ಪಟ್ಟಿ ಪರಿಷ್ಕರಣೆ ಹಗರಣದ ಕುರಿತು ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆಗೆ ಆದೇಶಿಸಬೇಕು. ಎಸ್‌ಐಟಿ ಮೇಲ್ವಿಚಾರಣೆಯನ್ನು ಸಿಜೆಯೇ ವಹಿಸಬೇಕು, ಆ ಮೂಲಕ ಹಗರಣದಲ್ಲಿ ನೇರ ಮತ್ತು ಪರೋಕ್ಷವಾಗಿ ಭಾಗಿಯಾಗಿರುವ ರಾಜಕಾರಣಿಗಳು, ಅಧಿಕಾರಿಗಳನ್ನು ಬಯಲಿಗೆ ಎಳೆಯಬೇಕು ಎಂದು ಮನವಿ ಮಾಡಲಾಗಿದೆ.

ಬೆಂಗಳೂರು ವ್ಯಾಪ್ತಿಯಲ್ಲಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಸುವ ಜವಾಬ್ದಾರಿ ಹೊಂದಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತರು ಮತ್ತು ಜಿಲ್ಲಾ ಚುನಾವಣಾಧಿಕಾರಿಯು (ಡಿಇಒ) ಸರ್ಕಾರೇತರ ಸಂಸ್ಥೆಯಾದ ಚಿಲುಮೆ ಜೊತೆ ಕೈಜೋಡಿಸಿ, ಪಿತೂರಿ ನಡೆಸಿ ಲಕ್ಷಾಂತರ ಅರ್ಹ ಮತದಾರರರನ್ನು ಯಾದಿಯಿಂದ ಕೈಬಿಡಲಾಗಿದ್ದು, ಇದು ಚುನಾವಣಾ ಫಲಿತಾಂಶದಲ್ಲಿ ನೇರ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ.
*ಸಿಎಂ, ಅಶ್ವಥ್ ನಾರಾಯಣ ಭಾಗಿ*
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಚಿವ ಅಶ್ವತ್ಥನಾರಾಯಣ ಅವರೇ ಈ ಪ್ರಕರಣದ ರೂವಾರಿಗಳು, ಅವರ ಕೈವಾಡ ಇದೆ, ಅವರ ವಿರುದ್ಧ ಯಾವುದೇ ತೆರನಾದ ಎಫ್‌ಐಆರ್ ದಾಖಲಾಗಿಲ್ಲ. ಪೊಲೀಸ್ ಇಲಾಖೆಯು ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರಲಿದ್ದು, ಸರ್ಕಾರವು ಈ ಪ್ರಕರಣ ಮುಚ್ಚಿಹಾಕಲು ಯತ್ನಿಸುತ್ತಿದೆ, ನಿಸ್ಪಕ್ಷಪಾತ ತನಿಖೆ ನಡೆಸುವುದಿಲ್ಲ, ಹಾಗಾಗಿ ಎಸ್ ಐಟಿ ರಚಿಸಬೇಕೆಂದು ಕೋರಲಾಗಿದೆ.
ಸರ್ಕಾರಿ ಅಧಿಕಾರಿಗಳ ವೇಷದಲ್ಲಿ ಮತದಾರರ ದತ್ತಾಂಶ ಸಂಗ್ರಹಿಸುವ ಮೂಲಕ ಚಿಲುಮೆ ಸಂಸ್ಥೆಯು ಮಹಾನ್ ವಂಚನೆ ಕೃತ್ಯದಲ್ಲಿ ಭಾಗಿಯಾಗಿದ್ದು, ತನ್ನ ಸಿಬ್ಬಂದಿಗೆ ಬೂತ್ ಮಟ್ಟದ ಅಧಿಕಾರಿಗಳ (ಬಿಎಲ್‌ಒ) ಕಾರ್ಡ್ ಗಳನ್ನೂ ನೀಡಿದೆ. ಬಿಬಿಎಂಪಿಗೆ ತಿಳಿದೇ ಚಿಲುಮೆ ಸಂಸ್ಥೆಯು ಈ ಕೃತ್ಯ ನಡೆಸಿದೆ ಎಂಬುದು ಇಲ್ಲಿ ಸ್ಪಷ್ಟ ಎಂದು ಹೇಳಲಾಗಿದೆ.
ಚಿಲುಮೆ ಮತ್ತು ಲೋಕೇಶ್ ಎಂಬಾತನ ವಿರುದ್ಧ ಹಲಸೂರು ಠಾಣೆಯಲ್ಲಿ ನವೆಂಬರ್ 11 ರಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಎರಡು ಎಫ್‌ಐಆರ್ ದಾಖಲಿಸಲಾಗಿದ್ದು, ಕಾಡುಗೋಡಿ ಠಾಣೆಯಲ್ಲಿ ಪ್ರತ್ಯೇಕವಾಗಿ ಲೋಕೇಶ್ ವಿರುದ್ಧ ಮತ್ತೊಂದು ಪ್ರಕರಣ ದಾಖಲಿಸಲಾಗಿದೆ. ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ಅವರು ಚುನಾವಣಾ ಆಯೋಗಕ್ಕೂ ದೂರು ನೀಡಿದ್ದಾರೆ.












Click it and Unblock the Notifications