ಬೆಂಗಳೂರಿಗೆ ಬಂತು ಮಂಗಳ ಗ್ರಹದ ನಾಸಾ ‘ರೋವರ್’
ಬೆಂಗಳೂರು: ಅಮೆರಿಕದ ನಾಸಾ ಮಾಡದ ಸಾಧನೆಯೇ ಇಲ್ಲ, ಬಾಹ್ಯಾಕಾಶದಲ್ಲಿ ಸಂಶೋಧನೆ ಮಾಡದ ವಿಭಾಗವಿಲ್ಲ. ಇಂತಹ ಮಹಾನ್ ಸಂಸ್ಥೆ 20 ವರ್ಷಗಳ ಹಿಂದೆ ಮಂಗಳ ಗ್ರಹದಲ್ಲಿ ನೀರಿದೆ ಎಂದು ಅಧ್ಯಯನ ನಡೆಸಲು ಉಡಾಯಿಸಿದ್ದ 'ಆಪರ್ಚುನಿಟಿ ರೋವರ್' ಈಗ ಬೆಂಗಳೂರಿಗೆ ಬಂದಿಳಿದಿದೆ! ಅರೆರೆ ಅದು ಹೇಗೆ ಸಾಧ್ಯ? ಅಂದ್ರಾ, ಆ ಬಗ್ಗೆ ಮುಂದೆ ಓದಿ.
ಬೆಂಗಳೂರಿನ ವಿಶ್ವೇಶ್ವರಯ್ಯ ಕೈಗಾರಿಕಾ & ತಾಂತ್ರಿಕ ವಸ್ತು ಸಂಗ್ರಹಾಲಯದ ಸ್ಪೇಸ್ ಗ್ಯಾಲರಿಯಲ್ಲಿ ಇಂದು 'ಆಪರ್ಚುನಿಟಿ ರೋವರ್' ಪ್ರತಿಕೃತಿ ಅನಾವರಣ ಮಾಡಲಾಯಿತು. ಮುಂದಿನ ಪೀಳಿಗೆಯ ಬಾಹ್ಯಾಕಾಶ ಸಂಶೋಧಕರಿಗೆ ಪ್ರೇರಣೆ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಅಮೇರಿಕದ ಅಂತಾರಾಷ್ಟ್ರೀಯ ವ್ಯಾಪಾರ ವಿಭಾಗದ ಸೆಕ್ರೇಟರಿ ಮರಿಸಾ ಲಾಗೊ ಸೇರಿದಂತೆ ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು. ಇದೇ ವೇಳೆ ಮಾತನಾಡಿದ ಮರಿಸಾ ಲಾಗೊ ಭಾರತ ಮತ್ತು ಅಮೆರಿಕದ ಬಾಹ್ಯಾಕಾಶ ಸಹಭಾಗಿತ್ವ ಸ್ಮರಿಸಿಕೊಂಡರು.

ಭಾರತದ ಸ್ನೇಹಕ್ಕೆ ಅಮೆರಿಕದ ಶ್ಲಾಘನೆ
ಅಂದಹಾಗೆ ಭಾರತ ಮತ್ತು ಅಮೆರಿಕ ಬಾಹ್ಯಾಕಾಶ ಸಂಶೋಧನೆ ವಿಚಾರದಲ್ಲಿ ಹಲವು ಒಪ್ಪಂದ ಮಾಡಿಕೊಂಡಿವೆ. ಇದೇ ವಿಚಾರ ಪ್ರಸ್ತಾಪ ಮಾಡಿದ ಮರಿಸಾ ಲಾಗೊ, ಭಾರತ ಮತ್ತು ಅಮೆರಿಕದ ಅತ್ಯುತ್ತಮ ಸಹಭಾಗಿತ್ವಕ್ಕೆ ಬಾಹ್ಯಾಕಾಶ ವಲಯ ಮತ್ತೊಂದು ಉದಾಹರಣೆ. 'ಆಪರ್ಚುನಿಟಿ ರೋವರ್' ಕುರಿತಾದ ಕಾರ್ಯಕ್ರಮ ಎರಡೂ ದೇಶಗಳ ನಡುವಿನ ಬದ್ಧತೆಯ ಸಂಕೇತ ಎಂದರು. ಈ ಮೂಲಕ ಎರಡೂ ದೇಶಗಳು ಬಾಹ್ಯಾಕಾಶ ವಲಯದಲ್ಲಿ ಹೊಂದಿರುವ ಸಹಭಾಗಿತ್ವದ ನೆನಪು ಮಾಡಿಕೊಂಡರು ಮರಿಸಾ ಲಾಗೊ.
ಯುವಕರಲ್ಲಿ ಬಾಹ್ಯಾಕಾಶದ ಬಗ್ಗೆ ಜಾಗೃತಿ!
ಇದೀಗ ಬೆಂಗಳೂರಿಗೆ ಬಂದಿರುವ 'ಆಪರ್ಚುನಿಟಿ ರೋವರ್' ಪ್ರತಿಕೃತಿಯನ್ನ ಅಮೆರಿಕದ ಕಾರ್ನೆಲ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ರಚಿಸಿದ್ದರು. ಡಲ್ಲಾಸ್‌ನ ಸ್ಮಿತ್‌ಸೋನಿಯನ್ ಏರ್ & ಸ್ಪೇಸ್ ಮ್ಯೂಸಿಯಂ, 2020ರಲ್ಲಿ ದುಬೈನ ವರ್ಲ್ಡ್ ಎಕ್ಸ್‌ಪೊದಲ್ಲಿ ಸೇರಿದಂತೆ ಚೆನ್ನೈ ದೂತಾವಾಸ ಕಚೇರಿ ಅಮೆರಿಕನ್ ಸೆಂಟರ್‌ನಲ್ಲಿ ಕೂಡ ಈ ಪ್ರತಿಕೃತಿ ಪ್ರದರ್ಶಿಸಲಾಗಿತ್ತು. ಈಗ ರಾಜಧಾನಿ ಬೆಂಗಳೂರಲ್ಲೂ 'ಆಪರ್ಚುನಿಟಿ ರೋವರ್' ಪ್ರತಿಕೃತಿ ಪ್ರದರ್ಶನ ಕಾಣುತ್ತಿದೆ. ಈ ಮೂಲಕ ಭವಿಷ್ಯದಲ್ಲಿ ಯುವ ಸಮೂಹಕ್ಕೆ ಬಾಹ್ಯಾಕಾಶ ವಿಜ್ಞಾನದ ಬಗ್ಗೆ ಪರಿಕಲ್ಪನೆ ತುಂಬುವ ಪ್ರಯತ್ನ ಸಾಗಿದೆ.
ಬಾಹ್ಯಾಕಾಶ ಕ್ಷೇತ್ರದಲ್ಲಿ ದೊಡ್ಡ ಹೆಸರು!
ನಾಸಾ ಸಂಸ್ಥೆ ಮಂಗಳ ಗ್ರಹದ ಅಧ್ಯಯನ ನಡೆಸಲು ಹಾರಿಬಿಟ್ಟಿದ್ದ ರೋವರ್ ಆಗಿನ ಕಾಲಕ್ಕೆ ಸಾಕಷ್ಟು ಸದ್ದು ಮಾಡಿತ್ತು. 2004ರಿಂದ 2018 ರವರೆಗೆ ಮಂಗಳದಲ್ಲಿ ಸಕ್ರಿಯವಾಗಿ ಕೆಲಸ ಮಾಡಿ, ಮನುಷ್ಯರಿಗೂ ಮಂಗಳ ಗ್ರಹದ ಕುರಿತು ಸಾಕಷ್ಟು ಮಾಹಿತಿ ನೀಡಿದ್ದ ಕೀರ್ತಿ ಇದೇ ರೋವರ್‌ಗೆ ಸಲ್ಲುತ್ತದೆ. ಬಾಹ್ಯಾಕಾಶ ವಿಜ್ಞಾನದ ವಿಚಾರದಲ್ಲೂ ನಾಸಾ ಸಂಸ್ಥೆಯ ಕೀರ್ತಿ ಉತ್ತುಂಗಕ್ಕೆ ಏರಿದ್ದು ಇದೇ ರೋವರ್ ಲಾಂಚ್ ಆದ ನಂತರ. 'ಆಪರ್ಚುನಿಟಿ ರೋವರ್' ಅಂದಿನ ಕಾಲಕ್ಕೆ ಮಂಗಳ ಗ್ರಹದ ಮೇಲೆ ಹಲವು ಸಂಶೋಧನೆ ಮಾಡಿತ್ತು. ಅಲ್ಲದೆ ಅತ್ಯುತ್ತಮ ಕ್ವಾಲಿಟಿ ಫೋಟೋಗಳನ್ನ ಭೂಮಿಗೆ ರವಾನಿಸಿತ್ತು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಯು.ಆರ್.ರಾವ್ ಸ್ಯಾಟಲೈಟ್ ಸೆಂಟರ್ ಡೈರೆಕ್ಟರ್ ಡಾ.ಎಂ.ಶಂಕರನ್ ಸೇರಿದಂತೆ ಜೆಟ್ ಪ್ರೊಪಲ್ಶನ್ ಲ್ಯಾಬೊರೆಟರಿಯ ನಿಸಾರ್ ಮಿಷನ್ ಸಿಸ್ಟಂ ಮ್ಯಾನೇಜರ್ ಆನ ಮರಿಯ ಗುರ್ರೆರೊ, ಚೆನ್ನೈನ ಯು.ಎಸ್. ಕಾನ್ಸಲ್ ಜನರಲ್ ಜುಡಿತ್ ರೇವಿನ್, ಬೆಂಗಳೂರಿನ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯದ ನಿರ್ದೇಶಕಿ ಕೆ.ಎ.ಸಾಧನ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಹಾಗೂ ವಿಜ್ಞಾನ ವಿಭಾಗದ ಗಣ್ಯರು ಭಾಗಿಯಾಗಿದ್ದರು.
ಒಟ್ನಲ್ಲಿ ಮುಂದಿನ ಪೀಳಿಗೆಗೂ ನಾಸಾ ಸಂಸ್ಥೆಯ 'ಆಪರ್ಚುನಿಟಿ ರೋವರ್' ಕುರಿತು ಪರಿಚಯ ಮಾಡಿಕೊಡುವ ಪ್ರಯತ್ನ ಸಾಗಿದೆ. ಅದರಲ್ಲೂ ಮಂಗಳ ಗ್ರಹದ ಮೇಲೆ ನೀರಿನ ಮೂಲ ಹುಡುಕಲು ಹೊರಟಿದ್ದ ಮಾನವನ ಮೊದಲು ಕುರುಹು ಈ 'ಆಪರ್ಚುನಿಟಿ ರೋವರ್'. ಹೀಗಾಗಿ 20 ವರ್ಷವೇ ಕಳೆದರೂ ಆಪರ್ಚುನಿಟಿ ರೋವರ್ ಮಾನವನ ಇತಿಹಾಸದಲ್ಲಿ ಎಂದೂ ಅಜಾರಮರ. ಅದರಲ್ಲೂ ಬಾಹ್ಯಾಕಾಶ ವಿಜ್ಞಾನಿಗಳು 'ಆಪರ್ಚುನಿಟಿ ರೋವರ್' ಮೂಲಕ ಸಾಕಷ್ಟು ಹೊಸತನ್ನ ಕಲಿತು, ಮಂಗಳ ಗ್ರಹದ ಬಗ್ಗೆ ಹಲವು ವಾಸ್ತವ ಅಂಶಗಳನ್ನು ಕಂಡುಕೊಂಡಿದ್ದಾರೆ.












Click it and Unblock the Notifications