ವಿನೇಶ್ ಪೋಗಟ್: ಒಲಿಂಪಿಕ್ಸ್ ಕ್ರೀಡಾಕೂಟ ಕ್ಲೀನ್ ಅಂತೇನಿಲ್ಲ, ಅನರ್ಹ ನಿರ್ಧಾರ ಪರಿಶೀಲಿಸಿ: ಮಾಜಿ ಸಿಎಂ
ನವದೆಹಲಿ, ಆಗಸ್ಟ್ 07: ಅಂತಾರಾಷ್ಟ್ರೀಯ ಕುಸ್ತಿ ಪಟು ವಿನೇಶ್ ಪೋಗಟ್ ಅವರಿಗೆ ಒಲಿಪಿಂಕ್ಸ್ ಕುಸ್ತಿ ಫೈನಲ್ ಪಂದ್ಯದಿಂದ ಅನರ್ಹಗೊಂಡ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ, ಸಂಸದರು ಸೇರಿದಂತೆ ಅನೇಕ ನಾಯಕರು ಕಳವಳ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪುನರ್ ಪರಿಶೀಲನೆಗೆ ಒಲಿಂಪಿಕ್ಸ್ ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ. ಕೆಲವು ಅವರನ್ನು ಮರಳಿ ಫೈನಲ್ ಪಂದ್ಯದಲ್ಲಿ ಆಡಲು ಅವಕಾಶ ನೀಡುವಂತೆ ಆಗ್ರಹಿಸಿದ್ದಾರೆ.
ಸ್ಟಾರ್ ಕುಸ್ತಿಪಟು ವಿನೇಶ್ ಪೋಗಟ್ ಅವರಿಗೆ ಒಲಿಪಿಂಕ್ಸ್ ಕುಸ್ತಿ ಫೈನಲ್ ಪಂದ್ಯದ ಮೊದಲು ಅವರ ತೂಕ ಕೇವಲ 100 ಗ್ರಾಂ ಹೆಚ್ಚಳವಾಗಿದೆ ಎಂದು ಅವರನ್ನು ಸ್ಪರ್ಧೆಯಿಂದ ಅನರ್ಹಗೊಳಿಸಿರುವುದು ದೊಡ್ಡ ಅನ್ಯಾಯ. ಒಲಿಂಪಿಕ್ಸ್ ಗೇಮ್ ನ ಕಾನೂನು ಪುನರ್ ವಿಮರ್ಶೆ ಮಾಡುವುದು ಅಗತ್ಯವಿದೆ ಎಂದು ನವದೆಹಲಿಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಕುಸ್ತಿ ಪಟು ವಿನೇಶಾ ಪೋಗಟ್ ಅವರಿಗೆ ಒಲಿಂಪಿಕ್ ಫೈನಲ್ ನಲ್ಲಿ ಅವಕಾಶ ತಪ್ಪಿರುವ ಕುರಿತು ಅವರು ತೀವ್ರ ಬೇಸರ ವ್ಯಕ್ತಪಡಿಸಿದರು. ಸಾಮಾನ್ಯವಾಗಿ ಯಾವುದಾದರೂ ಆಟದ ಆರಂಭದಲ್ಲಿ ತೂಕ ಮತ್ತು ಇತರ ಅರ್ಹತೆಗಳನ್ನು ನೋಡುತ್ತಾರೆ. ಆದರೆ, ಪ್ರತಿಯೊಂದು ರೌಂಡ್ ನಲ್ಲಿಯೂ ತೂಕ ನೋಡುವುದು ಬೇರೆ ಯಾವುದೇ ಆಟದಲ್ಲಿ ನೋಡಿಲ್ಲ.
ತೂಕ ವ್ಯತ್ಯಾಸ ಸಹಜ, ನೈಸರ್ಗಿಕ
ಈ ಒಲಿಂಪಿಕ್ಸ್ ನಲ್ಲಿ ತೂಕ ನೋಡಿರುವುದು ಪ್ರಶ್ನಾರ್ಹವಾಗಿದೆ. ಪ್ರತಿದಿನ ವ್ಯಕ್ತಿಯ ತೂಕದಲ್ಲಿ ನೂರರಿಂದ ಮುನ್ನೂರು ಗ್ರಾಂ ವ್ಯತ್ಯಾಸವಾಗುತ್ತಿರುತ್ತದೆ. ಅವರ ತೂಕದಲ್ಲಿ ನೂರು ಗ್ರಾಂ ಹೆಚ್ಚಾಗಿದೆ ಎಂದು ಸ್ಪರ್ಧೆಯಿಂದ ಅಮಾನತು ಮಾಡುವುದು ಸಮಂಜಸ ಅಲ್ಲ. ಪ್ರತಿದಿನ ಮನುಷ್ಯನ ದೇಹದ ತೂಕದಲ್ಲಿ ಹೆಚ್ಚಾಗುವುದು ಕಡಿಮೆಯಾಗುವುದು ತನ್ನದೇ ಆದ ನೈಸರ್ಗಿಕ ಪ್ರಕ್ರಿಯೆ ಎಂದು ತಿಳಿಸಿದರು.
ದೇಹದ ಮೆಟಾಬಾಲಿಕ್ ಚಟುವಟಿಕೆಗಳು ಕಡಿಮೆ ಆದಾಗ ತೂಕ ಹೆಚ್ಚಾಗುತ್ತದೆ. ಮೆಟಾಬೆಲಿಕ್ ಚಟುವಟಿಕೆಗಳು ಹೆಚ್ಚಾದಾಗ ತೂಕ ಕಡಿಮೆ ಆಗುತ್ತದೆ. ಇದು ನೈಸರ್ಗಿಕ ಕ್ರಿಯೆ. ಹೀಗಾಗಿ ತೂಕ ಹೆಚ್ಚಳದ ಹಿನ್ನೆಲೆಯಲ್ಲಿ ಸ್ಪರ್ಧೆಗೆ ಅವಕಾಶ ನೀಡದಿರುವುದು ಕುಸ್ತಿಪಟು ಮಾಡಿದ ಬಹಳ ದೊಡ್ಡ ಅನ್ಯಾಯವಾದಂತಾಗುತ್ತದೆ.

ಒಲಿಂಪಿಕ್ಸ್ ಕ್ರೀಡಾ ಕೂಟ ಕ್ಲೀನ್ ಇಲ್ಲ?: ಆರೋಪ
ವಿನೇಶ್ ಪೋಗಟ್ ಅವರ ವಿಚಾರದಲ್ಲಿ ಒಲಿಂಪಿಕ್ಸ್ ಅಧಿಕಾರಿಗಳು ಅನರ್ಹತೆ ನೀರ್ಧಾರ ಪುನರ್ ಪರಿಶೀಲನೆ ಮಾಡುವುದು ಅಗತ್ಯ. ಒಲಿಂಪಿಕ್ಸ್ ಕ್ರೀಡಾ ಕೂಟ ಕ್ಲೀನ್ ಅಂತ ಏನಿಲ್ಲ. ಅಲ್ಲಿಯೂ ಕೂಡ ಕೆಲವು ಸಾರಿ ರಾಜಕೀಯ ನಡೆಯುತ್ತದೆ. ಕೆಲವರನ್ನು ಹೊರಗಿಡುವ ತಂತ್ರಗಾರಿಕೆ ನಡೆಯುತ್ತದೆ ಎಂದು ಅವರು ಬಹಿರಂಗವಾಗಿಯೇ ದೂರಿದರು.
ಆ ಹಿನ್ನೆಲೆಯಲ್ಲಿ ಕೆಲವರಿಗೆ ಶಿಕ್ಷೆ ಕೂಡ ಆಗಿದೆ. ಈ ಪ್ರಕರಣವನ್ನು ಕೇಂದ್ರ ಕ್ರೀಡಾ ಸಚಿವರು ಗಂಭೀರವಾಗಿ ತೆಗೆದುಕೊಂಡು ಒಲಿಂಪಿಕ್ಸ್ ಬೋರ್ಡ್ ಗೆ ತೆಗೆದುಕೊಂಡು ಹೋಗಬೇಕು. ಮತ್ತು ಯಾವುದೇ ಕಾರಣಕ್ಕೂ ವಿನೇಶಾ ಪೋಗಟ್ ಕುಸ್ತಿ ಫೈನಲ್ ಆಡುವುದರಿಂದ ವಂಚಿತರಾಗಬಾರದು. ಅವರಿಗೆ ಅವಕಾಶ ದೊರಕುವಂತೆ ನೋಡಿಕೊಳ್ಳಬೇಕು. ಇದು ಎಲ್ಲ ಭಾರತೀಯರ ಭಾವನೆಯಾಗಿದೆ ಎಂದರು.
ಕಳೆದ ಬಾರಿಯೂ ವಿನೇಶಾ ಪೋಗಟ್ ಸ್ಪರ್ಧೆಯಿಂದ ದೂರ ಉಳಿಯುವಂತಾಗಿತ್ತು. ಈ ಬಾರಿಯಂತೂ ದೊಡ್ಡ ಅನ್ಯಾಯವಾಗಿದ್ದು, ಈ ಅನ್ಯಾಯವನ್ನು ಸರಿಪಡಿಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಪ್ರಯತ್ನಗಳು ನಡೆಯಬೇಕು. ಅವರಿಗೆ ಅವಕಾಶ ದೊರೆಯಬೇಕು ಎಂದು ಆಗ್ರಹಿಸಿದರು.












Click it and Unblock the Notifications