Vinay Kulkarni: ಈ ಹೊಸ ತಂತ್ರಜ್ಞಾನದಿಂದ ಧಾರವಾಡದಲ್ಲಿ ಪ್ರಚಾರ ನಡೆಸುತ್ತಿರುವ ಮೊದಲ ರಾಜಕಾರಣಿ ವಿನಯ್ ಕುಲಕರ್ಣಿ
ಬೆಂಗಳೂರು, ಏಪ್ರಿಲ್ 28: ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಧಾರವಾಡ ಗ್ರಾಮೀಣ ಕ್ಷೇತ್ರದ ಪ್ರವೇಶ ನಿರಾಕರಿಸಲ್ಪಟ್ಟ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ನೂತನ ಎಆರ್ ತಂತ್ರಜ್ಞಾನ ಬಳಸುವ ಮೂಲಕ ಚುನಾವಣಾ ಪ್ರಚಾರದಲ್ಲಿ ತೊಡಗುತ್ತಿದ್ದಾರೆ.
ಯೋಗೇಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಮಾಜಿ ಸಚಿವ ಧಾರವಾಡ ಗ್ರಾಮೀಣ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿಗೆ ಧಾರವಾಡದ ಪ್ರವೇಶ ನಿಷೇಧಿಸಿದೆ. ಹೀಗಾಗಿ ಅವರು ಚುನಾವಣಾ ಪ್ರಚಾರದಲ್ಲಿ ಈ ಹೊಸ ಎಆರ್ (Augmented Reality) ಮೂಲಕ ಜನರನ್ನು ತಲುಪುತ್ತಿದ್ದಾರೆ. ವೆಬ್ ಆಪ್ಲಿಕೇಷನ್ ವೊಂದರ ಮೂಲಕ ಈ ತಂತ್ರಜ್ಞಾನದಡಿ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ.

2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಣದಲ್ಲಿರುವ ಅನೇಕ ಅಭ್ಯರ್ಥಿಗಳಲ್ಲಿ ಪೈಕಿ 56 ವರ್ಷ ವಯಸ್ಸಿನ ಅಭ್ಯರ್ಥಿಯೊಬ್ಬರು ತಮ್ಮ ಪ್ರಚಾರದಲ್ಲಿ ಇದೇ ಮೊದಲು ಇಂತಹ ತ್ರಂತ್ರಜ್ಞಾನ ಬಳಕೆ ಮಾಡುತ್ತಿದ್ದಾರೆ. ಬ್ರೌಸರ್ ಆಧಾರಿತ ಅಪ್ಲಿಕೇಶನ್‌ನಲ್ಲಿ ಎಆರ್ ಕಾರ್ಯ ನಿರ್ವಹಿಸುತ್ತದೆ. ಅಲ್ಲದೇ ಇದರಲ್ಲಿ ಮಾತನಾಡಿದ ವಿಡಿಯೋವನ್ನು ಸಮಾಜಿಕ ಜಾಲತಾಣ, ವಾಟ್ಸಪ್ ಗಳಲ್ಲಿ ಹರಿಬಿಟ್ಟು ಜನರಲ್ಲಿ ಮತಯಾಚನೆ ಮಾಡಬಹುದಾಗಿದೆ.
ಈ ತಂತ್ರಜ್ಞಾನದಡಿ ವಿನಯ್ ಕುಲಕರ್ಣಿ ಪ್ರತಿಯೊಬ್ಬರಿಗೂ ವೀಡಿಯೊಗಳು, ಫೋಟೊಗಳ ಮೂಲಕ ಡಿಜಿಟಲ್ ರೂಪದಲ್ಲಿ ತಲುಪುತ್ತಾರೆ. ವೀಕ್ಷಕರು ಸ್ಮಾರ್ಟ್‌ಫೋನ್ ಕ್ಯಾಮೆರಾ ಆನ್ ಮಾಡಿದರೆ ಸಾಕು ಕ್ಷೇತ್ರದಲ್ಲೇ ನಿಂತು ಅಭ್ಯರ್ಥಿ ಮಾತನಾಡಿದ್ದನ್ನು ನೋಡುತ್ತಿದ್ದೆವೆನೋ ಎಂಬಂತೆ ಭಾಸವಾಗುವಷ್ಟು ಈ ತಂತ್ರಜ್ಞಾನ ಪೂರಕವಾಗಿ ಕೆಲಸ ಮಾಡಲಿದೆ.
ಈ ತಂತ್ರಜ್ಞಾನ ಬಳಸಿದ ಮೊದಲ ರಾಜಕಾರಣಿ
ತಂತ್ರಜ್ಞಾನ ಬಳಸಿ ಚುನಾವಣೆಯಲ್ಲಿ ಪಾಲ್ಗೊಳ್ಳುವ ಬಗ್ಗೆ ಎರಡು ವಾರಗಳ ಹಿಂದೆ ಪ್ರಾಯೋಗಿಕವಾಗಿ ಪರಿಶೀಲಿಸಲಾಗಿದೆ. ಮತದಾರರು ಪ್ರಚಾರದಲ್ಲಿನ ಈ ನವೀನತೆಯನ್ನು ಇಷ್ಟಪಟ್ಟಿದ್ದಾರೆ ಎಂಬುದು ತಿಳಿದು ಬಂದಿದೆ. ಪ್ರಯೋಗದ ಯಶಸ್ಸಿನ ನಂತರ ಬೇರೆ ಬೇರೆ ಅಭ್ಯರ್ಥಿಗಳು ಸಹ ಪ್ರಚಾರಕ್ಕಾಗಿ ಈ ವ್ಯವಸ್ಥೆಯನ್ನು ಕೇಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಎರಡು ಬಾರಿ ಶಾಸಕರಾದ ವಿನಯ್ ಕುಲಕರ್ಣಿ ವಿಭಿನ್ನ ಮಾಧ್ಯಮದ ಮೂಲಕ ದೂರದಿಂದಲೇ ಕ್ಷೇತ್ರದ ಜನರನ್ನು ತಲುಪುತ್ತಿರುವ ಮೊದಲ ರಾಜಕಾರಣಿಯಾಗಿದ್ದಾರೆ. ಕೋರ್ಟ್ ಆದೇಶ ಪಾಲನೆಗಾಗಿ ಕುಲಕರ್ಣಿ ನೆರೆಯ ಕಿತ್ತೂರಿನಲ್ಲಿ ವಾಸಿಸುತ್ತಿದ್ದಾರೆ. ಅವರ ಕುಟುಂಬಸ್ಥರು ಪ್ರಚಾರ ನಡೆಸುತ್ತಿದ್ದಾರೆ. ಈ ವೇಳೆ ಕುಲಕರ್ಣಿ ಮಾತನಾಡಿದ ವಿಡಿಯೋ ಜನರನ್ನು ತಲುಪುತ್ತಿದೆ ಎನ್ನಲಾಗಿದೆ.












Click it and Unblock the Notifications