ಹಿಂದೂ ಸಮಾಜೋತ್ಸವದಲ್ಲಿ ತೊಗಾಡಿಯಾ ವಿಡಿಯೋ ಭಾಷಣ
ಹಲವು ವಿವಾದಗಳಿಗೆ ಎಡೆ ಮಾಡಿಕೊಟ್ಟಿದ್ದ ವಿರಾಟ್ ಹಿಂದೂ ಸಮಾಜೋತ್ಸವ ನಗರದ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಭಾನುವಾರ (ಫೆ 8) ವಿವಾದದೊಂದಿಗೆಯೇ ಮುಕ್ತಾಯಗೊಂಡಿದೆ.
ಸರಕಾರದ ಎಚ್ಚರಿಕೆಯ ನಡುವೆಯೂ ವಿಶ್ವ ಹಿಂದೂ ಪರಿಷದ್ ಅಂತರಾಷ್ಟ್ರೀಯ ಕಾರ್ಯಾಧ್ಯಕ್ಷ ಡಾ.ಪ್ರವೀಣ್ ಭಾಯ್ ತೊಗಾಡಿಯಾ ಅವರ ಸುಮಾರು ಹದಿನೈದು ನಿಮಿಷಗಳ ವಿಡಿಯೋ ಮುದ್ರಿತ ಭಾಷಣ ಪ್ರಸಾರವಾಗಿದೆ. (ವಿಡಿಯೋ: ಬಸವನಗುಡಿಯ ಹಿಂದೂ ಸಮಾಜೋತ್ಸವ)
ಉಡುಪಿ ಪೇಜಾವರ ಶ್ರೀಗಳ ಭಾಷಣ ಮುಗಿಯುತ್ತಿದಂತೇ, ತೊಗಾಡಿಯಾ ಅವರ ಭಾಷಣ ಪ್ರಸಾರವಾಗಿದೆ. ಭಾಷಣಕ್ಕೆ ಆಕ್ಷೇಪ ವ್ಯಕ್ತ ಪಡಿಸಿದ ಪೊಲೀಸರು ವೇದಿಕೆಯ ಮೆಟ್ಟಲೇರಿ ಸಂಘಟಕರಲ್ಲಿ ಭಾಷಣ ನಿಲ್ಲಿಸುವಂತೆ ಸೂಚಿಸಿದ್ದಾರೆ.
ಸಂಘಟಕರು ಇದಕ್ಕೆ ಒಪ್ಪದೇ ಇದ್ದಾಗ, ಸಂಘಟಕರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ. ಆದರೂ, ತೊಗಾಡಿಯಾ ಭಾಷಣ ನಿರಾಂತಕವಾಗಿ ಸಾಗಿ ಮುಕ್ತಾಯಗೊಂಡಿದೆ. ತಮ್ಮ ಭಾಷಣದುದ್ದಕ್ಕೂ ಪ್ರಚೋದನಕಾರಿ ಹೇಳಿಕೆ 'ನೀಡದ' ತೊಗಾಡಿಯಾ, ಹಿಂದೂಗಳಲ್ಲಿ ಒಗ್ಗಟ್ಟಾಗಿರುವುಂತೆ ಮನವಿ ಮಾಡಿದ್ದಾರೆ.
ತೊಗಾಡಿಯಾ ವಿಡಿಯೋ ಭಾಷಣದ ವೇಳೆ ಭಾರೀ ಸಂಖ್ಯೆಯಲ್ಲಿ ಸೇರಿದ್ದ ಜನರು ಪಿನ್ ಡ್ರಾಪ್ ಸೈಲೆನ್ಸಿನ ಮೂಲಕ ಭಾಷಣ ಆಲಿಸುತ್ತಿದ್ದರು. ಘರ್ ವಾಪಸಿ ನಡೆಸೇ ತೀರುತ್ತೇವೆ ಎಂದು ತೊಗಾಡಿಯಾ ಭಾಷಣದ ವೇಳೆ ಪುನರುಚ್ಚಿಸಿದ್ದಾರೆ. (ಕುತೂಹಲ ಘಟ್ಟ ತಲುಪಿದ ತೊಗಾಡಿಯಾ ಭಾಷಣ ವಿವಾದ)
ಶಿಸ್ತಿನ ಸಮಾವೇಶದಲ್ಲಿ ಸ್ವಲ್ಪ ಹೊತ್ತು ಗೊಂದಲ, ಸರಕಾರಕ್ಕೆ ಪೇಜಾವರ ಶ್ರೀಗಳ ಪ್ರಶ್ನೆ. ಮುಂದೆ ಓದಿ (ಚಿತ್ರಕೃಪೆ: http://samvada.org)

ಕೆಲಹೊತ್ತು ಗೊಂದಲ
ಅಮೆರಿಕಾ ಅಧ್ಯಕ್ಷ ಒಬಾಮ ಅವರನ್ನು ಎಚ್ಚರಿಸುವ ಮತ್ತು ತೊಗಾಡಿಯಾ ಪ್ರವೇಶ ನಿಷಿದ್ದದ ವಿರುದ್ದದ ಬ್ಯಾನರುಗಳು ಸಮಾವೇಶದಲ್ಲಿ ಪ್ರತ್ಯಕ್ಷವಾಗಿ, ಸಮಾವೇಶದಲ್ಲಿ ಕೆಲಹೊತ್ತು ಗೊಂದಲಕ್ಕೆ ಕಾರಣವಾಯಿತು. ಪೊಲೀಸರ ಮಧ್ಯಪ್ರವೇಶದ ನಂತರ ಗೊಂದಲ ಮಾಯವಾಯಿತು.

ಪೇಜಾವರ ಶ್ರೀಗಳು
ಹಿಂದೂ ಸಮಾಜ ಎನ್ನುವುದು ಒನ್ ವೇ ಟ್ರಾಫಿಕ್ ನಂತಾಗಿದೆ. ಹಿಂದೂ ಸಮಾಜವನ್ನು ಹೊರಗೆ ಹೋಗಲು ಮಾತ್ರ ಅವಕಾಶವಿದೆ, ಒಳಗೆ ಬರಲು ಅವಕಾಶವಿಲ್ಲ. ಇದೊಂದು ಒನ್ ವೇ ಟ್ರಾಫಿಕ್ ನಂತಾಗಿದೆ, ಇದು ಬದಲಾಗಬೇಕು. ಮತಾಂತರದ ವಿಚಾರದಲ್ಲಿ ಸುಮ್ಮನಿರುವ ಸರಕಾರ ಮರುಮತಾಂತರದ ವಿಚಾರದಲ್ಲಿ ಮಾತ್ರ ಅಡ್ಡಬಾಯಿ ಹಾಕುತ್ತಿರುವುದು ಏಕೆ? ನಮ್ಮ ಹೋರಾಟದಲ್ಲಿ ಸಂತರಾದ ನಾವೆಲ್ಲಾ ಕೃಷ್ಣರು, ನೀವೆಲ್ಲಾ ಅರ್ಜುನರು ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ.

ವಿಎಚ್ಪಿ ಸುವರ್ಣ ಮಹೋತ್ಸವ ಸಮಾರಂಭ
ವಿಎಚ್ಪಿ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ, ವಿವಿಧ ಮಠಾಧೀಶರು, ಧಾರ್ಮಿಕ ಮುಖಂಡರು, ಬಿಜೆಪಿ ಮುಖಂಡರು ಭಾಗವಹಿಸಿದ್ದರು. ಆದರೆ ವೇದಿಕೆಯ ಮೇಲೆ ರಾಜಕೀಯ ಮುಖಂಡರಿಗೆ ಆಸೀನರಾಗಿರಲಿಲ್ಲ.

ಡಾ. ವೀರೇಂದ್ರ ಹೆಗ್ಗಡೆ
ನಾನು ಧರ್ಮಸ್ಥಳದ ಧರ್ಮಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ದಿನದಿಂದ ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ನನ್ನನ್ನು ತೊಡಗಿಸಿಕೊಳ್ಳುವಲ್ಲಿ ಉಡುಪಿ ಪೇಜಾವರ ಶ್ರೀಗಳು ನನಗೆ ಮಾರ್ಗದರ್ಶನ ನೀಡಿದ್ದಾರೆ. ವಿಶ್ವ ಹಿಂದೂ ಪರಿಷದ್ ಹಿಂದೂ ಸಮಾಜವನ್ನು ಒಗ್ಗೂಡಿಸುವತ್ತ ಮಹತ್ತರ ಪಾತ್ರ ವಹಿಸುತ್ತಿದೆ.

ಸಮಾವೇಶದಲ್ಲಿ ಸಂಚಲನ ಮೂಡಿಸಿದ ಗೋಪಾಲ್ ಜಿ
ವಿಎಚ್ಪಿಯ ದಕ್ಷಿಣ ಭಾರತದ ಸಂಘಟನಾ ಕಾರ್ಯದರ್ಶಿ ಗೋಪಾಲ್ ಜಿ ಅವರ ಭಾಷಣ ಸಮಾವೇಶದಲ್ಲಿ ಹೊಸ ಸಂಚಲನವನ್ನು ಮೂಡಿಸಿತು. ಸರಕಾರ, ತೊಗಾಡಿಯಾ ಅವರನ್ನು ನಿಷೇಧಿಸಿ ಸರಿಯಾದ ಕ್ರಮ ತೆಗೆದುಕೊಂಡಿಲ್ಲ. ಸರಕಾರದ ದ್ವಂದ್ವ ನೀತಿ ಸ್ಪಷ್ಟವಾಗುತ್ತದೆ ಎಂದು ಹೇಳಿದ್ದಾರೆ. ತಮ್ಮ ಹತ್ತು ನಿಮಿಷದ ಕನ್ನಡ ಭಾಷಣದಲ್ಲಿ ಗೋಪಾಲ್ ಆಕ್ರಮಣಕಾರಿ ಭಾಷಣವನ್ನಾಡಿದ್ದಾರೆ.

ಮಾದಾರ ಚನ್ನಯ್ಯ ಸ್ವಾಮೀಜಿ
ತೊಗಾಡಿಯಾ ನಿಷೇಧಿಸಿದ ಕ್ರಮಕ್ಕೆ ಬೇಸರ ವ್ಯಕ್ತ ಪಡಿಸಿ ಮಾತನಾಡಿದ ಮಾದಾರ ಶ್ರೀಗಳು, ಘರ್ ವಾಪಸಿ ಅಭಿಯಾನದ ಮೂಲಕ ಹಿಂದೂ ಸಮಾಜಕ್ಕೆ ಮರುಮತಾಂತರ ಗೊಳ್ಳುವವರಿಗೆ ಸೂಕ್ತ ವೇದಿಕೆ ಸಿಗಬೇಕು. ದಲಿತರು ಗೋಮಾಂಸ ತಿನ್ನುತ್ತಾರೆ, ಆದರೆ ಗೋವುಗಳನ್ನು ಕಸಾಯಿಖಾನೆಗೆ ತೆಗೆದುಕೊಂಡು ಹೋಗುವವರು ಯಾರು ಎಂದು ಪ್ರಶ್ನಿಸಿದ್ದಾರೆ.

ಬೇಲಿ ಮಠದ ಶ್ರೀಗಳು
ಬೇಲಿ ಮಠದ ಶಿವರುದ್ರ ಸ್ವಾಮೀಜಿಗಳು ಮಾತನಾಡಿ, ಐವತ್ತು ವರ್ಷಗಳಲ್ಲಿ ವಿಎಚ್ಪಿ ಸಾಧನೆ ಪ್ರಶಂನಾರ್ಹ. ಹಿಂದೂಗಳ ಮೇಲೆ ನಡೆಯುತ್ತಿರುವ ಆಕ್ರಮಣಕ್ಕೆ ಹಲವು ಉದಾಹರಣೆಗಳನ್ನು ನೀಡಬಹುದು. ಘೋಷಣೆ ಕೂಗಿದ ಮಾತ್ರಕ್ಕೆ ನಮ್ಮ ಕೆಲಸ ಮುಗಿಯುವುದಿಲ್ಲ, ಅದನ್ನು ಕಾರ್ಯರೂಪಕ್ಕೆ ತರುವ ಮೂಲಕ ನಮ್ಮ ಸಮಾಜದ ಪರವಾಗಿ ನಿಲ್ಲಬೇಕೆಂದು ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ.

ಸಭೆಯಲ್ಲಿ ಭಾಗವಹಿಸಿದ್ದ ಪ್ರಮುಖರು
ವಿವಿಧ ಮಠಾಧೀಶರು, ಆರ್ ಎಸ್ ಎಸ್ ಮುಖಂಡ ಭಯ್ಯಾಜಿ ಸುರೇಶ್ ಜೋಷಿ, ಕೇಂದ್ರ ಸಚಿವ ಅನಂತ್ ಕುಮಾರ್, ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ರವಿ ಸುಬ್ರಮಣ್ಯ, ಅಶೋಕ್, ವಿಶ್ವನಾಥ್, ಸತೀಶ್ ರೆಡ್ಡಿ, ರಾಮಚಂದ್ರ ಗೌಡ, ಹಾಲಿ ಮತ್ತು ಮಾಜಿ ಶಾಸಕ, ಕಾರ್ಪೋರೇಟರ್ ಗಳು, ಚಿತ್ರನಟ ಅವಿನಾಶ್, ಮಾಳವಿಕ, ದೂರದರ್ಶನದ ಹೆಚ್ಚುವರಿ ನಿರ್ದೇಶಕ ಮಹೇಶ್ ಜೋಷಿ ಮುಂತಾದವರು ಸಮಾಜೋತ್ಸವದಲ್ಲಿ ಭಾಗವಹಿಸಿದ್ದರು.












Click it and Unblock the Notifications