Bengaluru: ಬೆಂಗಳೂರಿನ ಬನಶಂಕರಿ ರಸ್ತೆ ಮಾರ್ಗದಲ್ಲಿ ವಾಹನ ಸಂಚಾರ ಬಂದ್: ಪರ್ಯಾಯ ಮಾರ್ಗ ಇಲ್ಲಿದೆ
ಬೆಂಗಳೂರು ಜನವರಿ 12: ಕನಕಪುರ ಮುಖ್ಯ ರಸ್ತೆಯಲ್ಲಿರುವ ಬನಶಂಕರಿ ಅಮ್ಮನವರ ದೇವಾಲಯದಲ್ಲಿ ಸೋಮವಾರ (ಜನವರಿ 13) 109ನೇ ಬ್ರಹ್ಮರಥೋತ್ಸವ ನಡೆಯಲಿದೆ. ಇದರಲ್ಲಿ ಸಾವಿರಾರು ಭಕ್ತರು ಭಾಗಿಯಾಗಲಿದ್ದು ಬೆಂಗಳೂರು ಸಂಚಾರ ಪೊಲೀಸರು ಸಂಚಾರ ಸಲಹೆಗಳನ್ನು ನೀಡಿದ್ದಾರೆ. ರಥೋತ್ಸವ ನಡೆಯುವ ಹಿನ್ನೆಲೆಯಲ್ಲಿ ಬನಶಂಕರಿ ದೇವಸ್ಥಾನದಿಂದ ಸಾರಕ್ಕಿ ಮಾರುಕಟ್ಟೆ ಜಂಕ್ಷನ್‌ವರೆಗಿನ ಕನಕಪುರ ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ರಸ್ತೆ ನಿರ್ಬಂಧಿಸಲಾಗಿದೆ. ಹೀಗಾಗಿ ವಾಹನ ಸವಾರರು ಈ ಸಂಚಾರ ಮಾರ್ಗಗಳನ್ನು ಅನುಸರಿಸಲು ಸಂಚಾರ ಪೊಲೀಸರು ಸೂಚಿಸಿದ್ದಾರೆ.
ದೇವಿಯನ್ನು ಹೊತ್ತೊಯ್ಯುವ ರಥಕ್ಕೆ ಬಾಳೆಹಣ್ಣು, ಧವನ, ಮರುಗ, ಪತ್ರೆಗಳನ್ನು ಎಸೆದು ಭಕ್ತರು ಭಕ್ತಿ ಸಮರ್ಪಸಿತ್ತಾರೆ. ಬೆಳಿಗ್ಗೆಯಿಂದಲೇ ನವಗ್ರಹಶಾಂತಿ, ದೇವಿ ಮೂಲಮಂತ್ರ ಹೋಮ, ರಥಾಂಗ ಹೋಮ, ರಥಬಲಿ ನಡೆಯಲಿದೆ. ಇದಕ್ಕಾಗಿ ರಥವನ್ನು ಹೂವಿನಿಂದ ಅಲಂಕಾರ ಮಾಡಲಾಗಿದೆ. ಹರಕೆ ಹೊತ್ತ ಭಕ್ತರು ಈ ಉತ್ಸವದಲ್ಲಿ ಭಾಗಿಯಾಗಿ ನಿಂಬೆಹಣ್ಣಿನ ದೀಪ ಬೆಳಗಿಸಿ ಇಷ್ಟಾರ್ಥ ಸಿದ್ಧಿಗಾಗಿ ಬೇಡಿಕೊಳ್ಳುತ್ತಾರೆ.

ಬಳಿಕ ವಾದ್ಯಗೋಷ್ಠಿ ಹಾಗೂ ಕಲಾ ಮೇಳಗಳೊಂದಿಗೆ ತೇರು ರಸ್ತೆ ಮೂಲಕ ಸಾಗಲಿದೆ. ಈ ವೇಳೆ ಸಾವಿರಾರು ಭಕ್ತರು ಸೇರುತ್ತಾರೆ. ಹೀಗಾಗಿ ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ. ಜೊತೆಗೆ ಈ ರಸ್ತೆಗಳ ಬದಲಿ ಮಾರ್ಗವನ್ನು ಸಂಚಾರ ಪೊಲೀಸರು ಸೂಚಿಸಿದ್ದಾರೆ. ಹಾಗಾದರೆ ಪಾರ್ಯಾಯ ಮಾರ್ಗಗಳು ಯಾವುವು?
ಪರ್ಯಾಯ ಮಾರ್ಗಗಳು
ಕನಕಪುರ ಮುಖ್ಯ ರಸ್ತೆಯ ಕೋಣನಕುಂಟೆ ಕಡೆಯಿಂದ ಬನಶಂಕರಿ ಬಸ್ ನಿಲ್ದಾಣದ ಕಡೆಗೆ ಬರುವ ವಾಹನಗಳು ಜೆಪಿ ನಗರ ಮೆಟ್ರೋ ಜಂಕ್ಷನ್ (ಸಾರಕ್ಕಿ ಸಿಗ್ನಲ್) ಬಳಿ ಬಲ ತಿರುವು ಪಡೆದು, ಸಿಂಧೂರ್ ವೃತ್ತದ ಮೂಲಕ ರಾಜಲಕ್ಷ್ಮಿ ಮಾರ್ಗವನ್ನು ಅನುಸರಿಸಿ, ಅಗತ್ಯ ಮಾರ್ಗಗಳಲ್ಲಿ ಮುಂದುವರಿಯಬಹುದು. ಅಥವಾ ಸಾರಕ್ಕಿ ಮಾರುಕಟ್ಟೆ ಜಂಕ್ಷನ್ ಬಳಿ ಬಲ ತಿರುವು ಪಡೆದು, ಇಂದಿರಾ ಗಾಂಧಿ ವೃತ್ತದ ಬಳಿ ಎಡ ತಿರುವು ಪಡೆದು ಆರ್‌ವಿ ಆಸ್ಟರ್‌ಗೆ ಹೋಗಿ, ನಂತರ ಅಗತ್ಯ ಮಾರ್ಗಗಳಲ್ಲಿ ಮುಂದುವರಿಯಬಹುದು.
ಬನಶಂಕರಿ ಬಸ್ ನಿಲ್ದಾಣದಿಂದ ಸಾರಕ್ಕಿ ಸಿಗ್ನಲ್ ಕಡೆಗೆ ಬರುವ ವಾಹನಗಳು ಬನಶಂಕರಿ ಬಸ್ ನಿಲ್ದಾಣದ ಬಳಿ ಬಲ ತಿರುವು ಪಡೆದು, ಯಾರಬ್ ನಗರ ಮೂಲಕ ಕೆಎಸ್‌ಗೆ ಹೋಗಿ, ಲೇಔಟ್ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು, ಇಲಿಯಾಸನಗರ-ಸಾರಕ್ಕಿ ಸಿಗ್ನಲ್ ತಲುಪಿ, ನಂತರ ಅಗತ್ಯ ಮಾರ್ಗಗಳನ್ನು ಅನುಸರಿಸಬೇಕು.

ಬನಶಂಕರಿ ಅಮ್ಮನವರ ಜಾತ್ರೆ
ಸೋಮವಾರ ಕನಕಪುರ ಮುಖ್ಯ ರಸ್ತೆಯಲ್ಲಿರುವ ಬನಶಂಕರಿ ಅಮ್ಮನವರ ದೇವಾಲಯದಲ್ಲಿ ಬ್ರಹ್ಮರಥೋತ್ಸವ ನಡೆಯಲಿದೆ. ಬೆಳಗ್ಗೆಯಿಂದಲೇ ವಿಶೇಷ ಪೂಜೆಗಳು ಇಲ್ಲಿ ನಡೆಯಲಿದ್ದು ಅಘಾದವಾದ ಭಕ್ತಿಭಾವ ತರುವ ಉತ್ಸವ ನಡೆಯಲಿದೆ. ಇದು ತುಂಬಾ ವಿಜೃಂಭಣೆಯಿಂದ ಹಿಂದಿನಿಂದಲೂ ಆಚರಿಸಿಕೊಂಡು ಬರಲಾದ ಬ್ರಹ್ಮರಥೋತ್ಸವವಾಗಿದ್ದು ಈ ಜಾತ್ರೆ ಮನಸ್ಸಿಗೆ ಹಬ್ಬವಾಗಿದೆ. ಹೀಗಾಗಿ ಎಲ್ಲಾ ಕಡೆಯಿಂದ ಭಕ್ತರು ಈ ಜಾತ್ರೆಯಲ್ಲಿ ಭಾಗವಹಿಸಿ ಪೂಜೆ ಕೂಡ ಸಲ್ಲಿಸುತ್ತಾರೆ. ಇಲ್ಲಿನ ಅಮ್ಮನವರ ಮೇಲಿನ ಅಚಲವಾದ ನಂಬಿಕೆಗೆಗೆ ಆ ದೇವಿ ಒಳ್ಳೆಯದನ್ನು ಮಾಡಿರುವುದೇ ಕಾರಣವಾಗಿದೆ.
ಈ ದೇವಸ್ಥಾನ ಬೆಂಗಳೂರಿನ ಬನಶಂಕರಿಯಲ್ಲಿರುವ ಬನಶಂಕರಿ ಅಮ್ಮನ ದೇವಸ್ಥಾನ. ಈಗಿನ ಮೆಟ್ರೋ ನಿಲ್ದಾಣದ ಪಕ್ಕದಲ್ಲೇ ಇದೆ. ಈ ಹಿಂದೆ ಜಾತ್ರೆಗೆ ಜನ ಬರುವುದು ಕಷ್ಟವಾದರೂ ಈಗ ಮೆಟ್ರೋ ಇರುವುದರಿಂದ ಎಲ್ಲಿಂದಲಾದರೂ ಜನ ಬರುವಂತಹ ವ್ಯವಸ್ಥೆ ಇದೆ. ಇದು ಕೇವಲ ಜಾತ್ರೆ ಆಗಿರದೆ ಸಂಸ್ಕೃತಿಯನ್ನು ಎತ್ತಿ ತೋರಿಸುವ ಹಬ್ಬ ಕೂಡ ಆಗಿದೆ. ಇಲ್ಲಿ ಕಲೆಗೆ ತುಂಬಾ ಬೆಲೆ ಕೊಡುತ್ತಾರೆ. ಹಾಗೇ ಭಕ್ತಾಧಿಗಳು ಸಹ ಸಾಗರೋಪಾದಿಯಲ್ಲಿ ಬಂದು ಭಕ್ತಿಯನ್ನು ನೃತ್ಯದ ಮೂಲಕ ವ್ಯಕ್ತಪಡಿಸುತ್ತಾರೆ.












Click it and Unblock the Notifications