ಅಗಲಿದ ಗೆಳೆಯನ ಮಗನಿಂದ ಹಣ ಪಡೆಯಲು ನಿರಾಕರಿಸಿದ ತರಕಾರಿ ವ್ಯಾಪಾರಿ: ಈ ಕಥೆ ಕೇಳಿದ್ರೆ ಕಣ್ಣೀರು ಬರುತ್ತೆ!

ಸೋಶಿಯಲ್‌ ಮೀಡಿಯಾದಲ್ಲಿ ಪ್ರತಿದಿನ ಸಾವಿರಾರು ವಿಡಿಯೋಗಳು ವೈರಲ್ ಆಗುತ್ತವೆ. ಅವುಗಳಲ್ಲಿ ಕೆಲವು ನಗು ತರಿಸಿದರೆ, ಇನ್ನು ಕೆಲವು ನಮ್ಮ ಮನಸ್ಸಿಗೆ ನಾಟುತ್ತವೆ ಮತ್ತು ಕಣ್ಣಂಚಿನಲ್ಲಿ ನೀರು ತರಿಸುತ್ತವೆ. ಅಂತಹದ್ದೇ ಒಂದು ಘಟನೆ ಇನ್‌ಸ್ಟಾಗ್ರಾಮ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ.

ಅಗಲಿದ ತನ್ನ ಆಪ್ತ ಸ್ನೇಹಿತನ ಮಗನಿಂದ ತರಕಾರಿಗೆ ಹಣ ಪಡೆಯಲು ನಿರಾಕರಿಸಿದ ತರಕಾರಿ ವ್ಯಾಪಾರಿಯ ವಿಡಿಯೋವೊಂದು ವೈರಲ್ ಆಗಿದ್ದು, ಪ್ರಸ್ತುತ ಲಕ್ಷಾಂತರ ಜನರ ಹೃದಯ ಗೆದ್ದಿದೆ. ಭಾವೇಶ್ ಎಂಬ ಯುವಕ ಹಂಚಿಕೊಂಡಿರುವ ಈ ವಿಡಿಯೋ, ನಿಜವಾದ ಸ್ನೇಹಕ್ಕೆ ಎಂದು ಸಾವಿಲ್ಲ ಎಂಬುದನ್ನ ಜಗತ್ತಿಗೆ ಸಾರಿ ಹೇಳಿದೆ.

Vegetable Vendor Refuses Payment From Late Friend s Son Viral Video Wins Hearts on the Internet

35 ವರ್ಷಗಳ ನಿಜವಾದ ಸ್ನೇಹ

ಈ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ತರಕಾರಿ ವ್ಯಾಪಾರಿ ಮತ್ತು ಭಾವೇಶ್ ಅವರ ತಂದೆಯ ನಡುವೆ ಸುಮಾರು 35 ವರ್ಷಗಳ ಗಾಢವಾದ ನಿಸ್ವಾರ್ಥ ಸ್ನೇಹವಿತ್ತು. ದುರದೃಷ್ಟವಶಾತ್, ಭಾವೇಶ್ ಅವರ ತಂದೆ 2013ರಲ್ಲಿ ಇಹಲೋಕ ತ್ಯಜಿಸಿದರು.

ಸ್ನೇಹಿತನ ಸಾವಿನ ನಂತರವೂ ಆ ತರಕಾರಿ ವ್ಯಾಪಾರಿ ತಮ್ಮ ಸ್ನೇಹಿತನ ಕುಟುಂಬದ ಮೇಲಿನ ಪ್ರೀತಿ ಮತ್ತು ಕಾಳಜಿಯನ್ನ ಕಿಂಚಿತ್ತೂ ಕಡಿಮೆ ಮಾಡಿಲ್ಲ. ಇಂದಿಗೂ ಆ ವ್ಯಾಪಾರಿ ಭಾವೇಶ್ ಅವರಿಂದ ತರಕಾರಿಗೆ ಬಿಡಿಗಾಸನ್ನೂ ಪಡೆಯುವುದಿಲ್ಲ. ಈ ಬಗ್ಗೆ ವಿಡಿಯೋದಲ್ಲಿ ಮಾತನಾಡಿರುವ ವ್ಯಾಪಾರಿ, "ಅರೆ, ತರಕಾರಿ ನಮ್ಮ ಮನೆಗೇ ಹೋಗುತ್ತಿದೆ ಅಲ್ವಾ. ಮನೆಯವರಿಂದ ಯಾರಾದರೂ ಹಣ ಪಡೆಯುತ್ತಾರೆಯೇ?" ಎಂದು ಅತ್ಯಂತ ಪ್ರೀತಿಯಿಂದ ಹೇಳಿದ್ದಾರೆ.

ಈ ಮಾತುಗಳು ಎಂತಹ ಕಲ್ಲೆದೆಯ ಮನುಷ್ಯನ ಮನಸ್ಸನ್ನೂ ಕರಗಿಸುವಂತಿವೆ. ವ್ಯಾಪಾರಿಯ ಈ ನಡೆ ಕೇವಲ ಬ್ಯುಸಿನೆಸ್ ಅಲ್ಲ, ಬದಲಾಗಿ ಇದು ಇಂದಿನ ಜಗತ್ತಿಗೆ ಮಾದರಿಯಾಗಿರುವ ನಿಜವಾದ ಸ್ನೇಹದ ಸಂಕೇತವಾಗಿದೆ.

ಕಣ್ಣೀರು ತರಿಸುವ ಕ್ಷಣ

ಕ್ಯಾಮೆರಾ ಮುಂದೆ ಮಾತನಾಡುತ್ತಾ ತನ್ನ ಸ್ನೇಹಿತನನ್ನ ನೆನಪಿಸಿಕೊಂಡ ತರಕಾರಿ ವ್ಯಾಪಾರಿಯ ಮುಖದಲ್ಲಿ ನಗು ಇತ್ತಾದರೂ, ಆತನ ಕಣ್ಣುಗಳಲ್ಲಿ ಆಪ್ತ ಸ್ನೇಹಿತನನ್ನ ಕಳೆದುಕೊಂಡ ಅಗಾಧವಾದ ನೋವು ಎದ್ದು ಕಾಣುತ್ತಿತ್ತು. ತನ್ನ ಕಣ್ಣೀರು ಮತ್ತು ಭಾವನೆಗಳನ್ನ ಮುಚ್ಚಿಡಲು ಆತ ಬೇರೆಡೆ ಮುಖ ತಿರುಗಿಸುವ ದೃಶ್ಯ ನೋಡುಗರಲ್ಲಿ ಒಂದು ಭಾವನಾತ್ಮಕ ಕ್ಷಣವನ್ನು ಸೃಷ್ಟಿಸುತ್ತದೆ.

ಕೇವಲ ತರಕಾರಿ ದುಡ್ಡು ಬೇಡ ಎನ್ನುವುದು ಆತನ ಉದ್ದೇಶವಾಗಿರಲಿಲ್ಲ, ಬದಲಾಗಿ ಆತನ ಅಗಲಿದ ಸ್ನೇಹಿತನ ಮೇಲಿನ ಗೌರವ ಮತ್ತು ಪ್ರೀತಿಯ ಸಂಕೇತವಾಗಿತ್ತು. ವಿಡಿಯೋದ ಕೊನೆಯಲ್ಲಿ ಭಾವೇಶ್ ಆ ವ್ಯಾಪಾರಿಯನ್ನ ಪ್ರೀತಿಯಿಂದ ತಬ್ಬಿಕೊಳ್ಳುತ್ತಾರೆ. ಈ ದೃಶ್ಯವು ದಶಕಗಳ ಕಾಲ ಉಳಿದುಕೊಂಡಿರುವ ಅಪ್ಪಟ ಬಾಂಧವ್ಯವನ್ನ ಎತ್ತಿ ತೋರಿಸುತ್ತದೆ. ಸದ್ಯ ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಬರೋಬ್ಬರಿ 27 ಮಿಲಿಯನ್‌ಗಿಂತಲೂ (2.7 ಕೋಟಿ) ಹೆಚ್ಚು ಜನರು ವೀಕ್ಷಿಸಿದ್ದಾರೆ.

ಅದ್ಭುತ ವಿಡಿಯೋಗೆ ನೆಟ್ಟಿಗರ ಪ್ರತಿಕ್ರಿಯೆ

ಈ ವಿಡಿಯೋ ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಿದ್ದಂತೆ, ಕಾಮೆಂಟ್ ವಿಭಾಗದಲ್ಲಿ ಅನೇಕ ಬಳಕೆದಾರರು ತಮ್ಮ ಅನಿಸಿಕೆಗಳನ್ನ ಹಂಚಿಕೊಂಡಿದ್ದಾರೆ. "ನಿಜವಾದ ಸ್ನೇಹಕ್ಕೆ ಎಂದಿಗೂ ಸಾವಿಲ್ಲ. ಒಬ್ಬ ವ್ಯಕ್ತಿ ನಮ್ಮನ್ನು ಅಗಲಿದರೂ, ಆತನ ನೆನಪುಗಳು ಮತ್ತು ಆತ ಗಳಿಸಿದ ಸ್ನೇಹ ಸದಾ ಜೀವಂತವಾಗಿರುತ್ತದೆ" ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.

ಮತ್ತೊಬ್ಬ ಬಳಕೆದಾರರು, "ವ್ಯಾಪಾರಿಯ ಕಣ್ಣುಗಳೇ ಆತನ ಸ್ನೇಹದ ಆಳವನ್ನ ಹೇಳುತ್ತಿವೆ. ಇಂತಹ ಸ್ನೇಹಿತರನ್ನ ಪಡೆಯಲು ನಿಮ್ಮ ತಂದೆ ಹಾಗೂ ಅವರ ನಿಧನದ ಬಳಿಕವೂ ಇಂತಹ ಪ್ರೀತಿ ಪಡೆಯಲು ನೀವು ಪುಣ್ಯ ಮಾಡಿದ್ದೀರಿ. ದಯವಿಟ್ಟು ಈ ಬಾಂಧವ್ಯವನ್ನ ಹೀಗೆಯೇ ಕೊನೆಯವರೆಗೂ ಉಳಿಸಿಕೊಳ್ಳಿ. ಇಂತಹ ಮನುಷ್ಯರು ಸಿಗುವುದು ಬಹಳ ಅಪರೂಪ" ಎಂದು ಹಾರೈಸಿದ್ದಾರೆ.

ಹಣವೇ ಮುಖ್ಯವಾಗಿರುವ, ಸಂಬಂಧಗಳು ಕೇವಲ ವ್ಯವಹಾರವಾಗಿರುವ ಇಂದಿನ ಆಧುನಿಕ ಯುಗದಲ್ಲಿ, ಈ ತರಕಾರಿ ವ್ಯಾಪಾರಿಯ ನಡೆ ಮಾನವೀಯತೆ ಹಾಗೂ ನಿಸ್ವಾರ್ಥ ಸ್ನೇಹದ ಸುಂದರ ಮುಖವನ್ನು ಸಮಾಜಕ್ಕೆ ಪರಿಚಯಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+