• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಾಟಾಳ್ ಸಂಗಡಿಗ ಗೋಪಿ ಇಡೀ ಕುಟುಂಬ ನೇಣಿಗೆ

By Prasad
|

ಬೆಂಗಳೂರು, ಡಿ. 12 : ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರ ಬಲಗೈ ಬಂಟನಂತಿದ್ದ, ವಾಟಾಳ್ ಹೋರಾಟಕ್ಕೆ ಸ್ಫೂರ್ತಿ ತುಂಬುತ್ತಿದ್ದ, ಅವರಿಗೆ ಕುರಿ, ಕೋಣ, ಕತ್ತೆ ಮುಂತಾದ ಪ್ರಾಣಿಗಳನ್ನು ಪೂರೈಸುತ್ತಿದ್ದ ಅವರ ಪಕ್ಷದ ಕಾರ್ಯಕರ್ತ ಗೋಪಿ ಅವರು ಕುಟುಂಬ ಸಮೇತರಾಗಿ ನೇಣಿಗೆ ಶರಣಾಗಿರುವ ದಾರುಣ ಘಟನೆ ಗುರುವಾರ ನಡೆದಿದೆ.

ಬೆಂಗಳೂರಿನ ಬೈಯಪ್ಪನಹಳ್ಳಿಯ ನಾಗವಾರಪಾಳ್ಯದಲ್ಲಿರುವ ತಮ್ಮ ನಿವಾಸದಲ್ಲಿ ನಾ. ಗೋಪಿ, ಅವರ ಪತ್ನಿ ಜಯಶ್ರೀ, ಮಗ ದಿಲೀಪ್ ಮತ್ತು ಮಗಳು ಸಂಚಿತಾ (ಪಿಕ್ಕು ಎಂಬುದು ಪ್ರೀತಿಯ ಹೆಸರು) ಸಾಮೂಹಿಕವಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಗೋಪಿ ಅವರು ಕುಟುಂಬ ಸಮೇತರಾಗಿ ಆತ್ಮಹತ್ಯೆ ಮಾಡಿಕೊಂಡಿದ್ದು ಗುರುವಾರ ಸಂಜೆ 5.30ರ ಹೊತ್ತಿಗೆ ತಿಳಿದುಬಂದಿದೆ.

ಇಂಥ ಕ್ರಮಕ್ಕೆ ಗೋಪಿ ಕುಟುಂಬ ಮುಂದಾಗಿದ್ದಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಆದರೆ, ಸಾಲಗಾರರ ಬಾಧೆ ಮತ್ತು ಆರ್ಥಿಕ ಮುಗ್ಗಟ್ಟು ಅವರನ್ನು ಆತ್ಮಹತ್ಯೆಗೆ ಪ್ರೇರೇಪಿಸಿರಬಹುದು ಎಂದು ನೆರೆಹೊರೆಯವರು ಮಾತನಾಡುತ್ತಿದ್ದಾರೆ. ಅಕ್ಕಪಕ್ಕದ ಮನೆಯವರಿಂದ ಗೋಪಿ ಕುಟುಂಬ ನೇಣು ಹಾಕಿಕೊಂಡಿರುವುದು ತಿಳಿದುಬಂದಿದೆ.

ಡೆತ್ ನೋಟ್ ಬರೆದಿಟ್ಟು ಗೋಪಿ ಮತ್ತು ಅವರ ಪತ್ನಿ ಮೊದಲ ಮಹಡಿಯಲ್ಲಿರುವ ಮನೆಯ ಮಲಗುವ ಕೋಣೆಯಲ್ಲಿ ನೇಣು ಹಾಕಿಕೊಂಡಿದ್ದರೆ, ಎರಡನೇ ಪಿಯುಸಿ ಓದುತ್ತಿದ್ದ ಮಗ ಮತ್ತು ಎಸ್ಸೆಸ್ಸೆಲ್ಸಿ ಓದುತ್ತಿದ್ದ ಮಗಳು ಮುಂದಿನ ಕೋಣೆಯಲ್ಲಿ ನೇಣು ಬಿಗಿದುಕೊಂಡಿದ್ದಾರೆ. ಈ ಘಟನೆ ನೆರೆಹೊರೆಯವರನ್ನು ಮಾತ್ರವಲ್ಲ ಪೊಲೀಸರನ್ನು ಕೂಡ ದಿಗ್ಭ್ರಮೆಗೊಳಿಸಿದೆ.

ಹಿಂದಿನ ನಡೆದ ಹುಟ್ಟುಹಬ್ಬದ ಪಾರ್ಟಿಯೊಂದರಲ್ಲಿ ಭಾಗಿಯಾಗಿದ್ದ ಗೋಪಿ ಅವರು, ಇಂದಿಗೆ ಹೋರಾಟಕ್ಕಿಳಿದು 20 ವರ್ಷ ಪೂರೈಸಿದ್ದೇನೆ. ಇನ್ನು ಸಾಕಾಗಿದೆ, ಯಾವುದೇ ಹೋರಾಟದಲ್ಲಿ ಭಾಗವಹಿಸುವುದಿಲ್ಲ, ಇನ್ನು ಮುಂದೆ ಮಾಂಸಾಹಾರ, ಮದ್ಯವನ್ನು ಕೂಡ ಮುಟ್ಟುವುದಿಲ್ಲ ಎಂದು ಮಾರ್ಮಿಕವಾಗಿ ಹೇಳಿದ್ದರಂತೆ. ಆತ್ಮಹತ್ಯೆಯ ಸೂಚನೆ ಮೊದಲೇ ಗೋಪಿ ನೀಡಿದ್ದರೆ ಎಂಬುದು ಸ್ನೇಹಿತರನ್ನು ಕಾಡುತ್ತಿದೆ.

ವಿಶಿಷ್ಟ ವ್ಯಕ್ತಿತ್ವ : ಪುಟ್ಟಪರ್ತಿ ಸಾಯಿಬಾಬಾರಂತೆ ದಟ್ಟವಾಗಿ ಕೂದಲು ಬಿಟ್ಟು, ಹಣೆಗೆ ವಿಭೂತಿ ಮತ್ತು ಕುಂಕುಮ ಬೊಟ್ಟು ಇಟ್ಟುಕೊಂಡ ಕುಳ್ಳನೆ ದೇಹದ ಗೋಪಿ ಅವರದು ವಿಶಿಷ್ಟ ವ್ಯಕ್ತಿತ್ವ. ಯಾವಾಗಲೂ ವಾಟಾಳ್ ನಾಗರಾಜ್ ಅವರೊಂದಿಗೇ ಇರುತ್ತಿದ್ದ ಗೋಪಿ, ನಾಗರಾಜ್ ಅವರ ಎಲ್ಲ ಹೋರಾಟಕ್ಕೆ ಸರ್ವರೀತಿಯ ಸಹಕಾರ ನೀಡುತ್ತಿದ್ದರು.

ತಮ್ಮಟೆ, ಪೊರಕೆ, ಹಾಸಿಗೆ, ಕಮೋಡು ಸೇರಿದಂತೆ ಪೆಟ್ರೋಲ್ ಬೆಲೆ ಏರಿಕೆ ವಿರುದ್ಧ ಪ್ರತಿಭಟಿಸಲು ಕೋಣ, ಎಮ್ಮೆ, ಕತ್ತೆ, ನಾಯಿ ಮುಂತಾದ ಪ್ರಾಣಿಗಳನ್ನು ಕೂಡ ಪೂರೈಸುತ್ತಿದುದೇ ಗೋಪಿ ಅವರು. ಡಿಸೆಂಬರ್ 6ರಂದು ಮುಕ್ತಾಯವಾದ ಬೆಳಗಾವಿ ಅಧಿವೇಶನದ ಸಮಯದಲ್ಲಿ ಕೋಣದ ಮೇಲೆ ನೀರು ಸುರಿದು 'ಬೆಳಗಾವಿ ಅಧಿವೇಶನ ಸಂಪೂರ್ಣ ವಿಫಲ' ಎಂದು ಘೋಷಿಸುತ್ತ ಗೋಪಿ ಅವರು ಪ್ರತಿಭಟಿಸಿದ್ದರು.

ಅವರು ತಮ್ಮ ದುಃಖವನ್ನು ಯಾರೊಂದಿಗೂ ತೋಡಿಕೊಳ್ಳುತ್ತಿರಲಿಲ್ಲ ಎಂದು ಗೋಪಿಯ ಸ್ನೇಹಿತ ಮಂಜುನಾಥ್ ಅವರು ಹೇಳಿದ್ದಾರೆ. ಅವರು ಸಾಕಷ್ಟು ಸಾಲ ಮಾಡಿದ್ದರು ಮತ್ತು ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿದ್ದರೂ ಯಾರೊಂದಿಗೂ ಹಂಚಿಕೊಳ್ಳುತ್ತಿರಲಿಲ್ಲ. ಸಾಲಬಾಧೆಯೇ ಅವರ ಸಾವಿಗೆ ಕಾರಣವಾಗಿರಬಹುದು ಎಂದು ಜನರು ಮಾತನಾಡುತ್ತಿದ್ದಾರೆ.

ಅಪಾರ ಕನ್ನಡ ಪ್ರೇಮ : ಮತ್ತೊಂದು ಅಚ್ಚರಿಯ ಸಂಗತಿಯೆಂದರೆ, ಗೋಪಿ ಅವರ ಅಪಾರ ಕನ್ನಡ ಪ್ರೇಮ. ಹೆಂಡತಿ ಮಕ್ಕಳನ್ನು ಇಂಗ್ಲಿಷ್ ಮೀಡಿಯಂ ಶಾಲೆಗೆ ಸೇರಿಸೆಂದು ದುಂಬಾಲು ಬಿದ್ದಿದ್ದರೂ ಗೋಪಿ ಅವರು ಮಕ್ಕಳನ್ನು ಕನ್ನಡ ಶಾಲೆಗೇ ಸೇರಿಸಿದ್ದರು. ಇದೇ ಕಾರಣಕ್ಕಾಗಿ ಅವರಿಬ್ಬರ ನಡುವೆ ಸಾಕಷ್ಟು ಬಾರಿ ಜಗಳಗಳೂ ನಡೆದಿದ್ದವು. ಆದರೆ ಗೋಪಿ ಅವರು ತಲೆಕೆಡಿಸಿಕೊಳ್ಳದೆ ಮಕ್ಕಳನ್ನು ಕನ್ನಡ ಶಾಲೆಗೆ ಸೇರಿಸಿದ್ದರು.

ಸುಮಾರು 20 ವರ್ಷಗಳಿಂದ ಗೋಪಿ ಅವರು ವಾಟಾಳ್ ನಾಗರಾಜ್ ಅವರ ಹೆಗಲಿಗೆ ಹೆಗಲಾಗಿ, ಮಾತಿಗೆ ಮಾತಾಗಿ ಬೆಂಬಲ ನೀಡುತ್ತ ಬಂದಿದ್ದರು. ಯಾವತ್ತೂ ನಗುತ್ತಲೇ ಇರುತ್ತಿದ್ದ ಅವರು ಇತರರಿಗೂ ಸ್ಫೂರ್ತಿಯ ಚಿಲುಮೆಯಂತಿದ್ದರು ಅಂತಾರೆ ಅವರ ಸ್ನೇಹಿತರು. ತಮಗೆ ಎಷ್ಟೇ ಕಷ್ಟವಿದ್ದರೂ ವಾಟಾಳ್ ಅವರ ಹೋರಾಟಕ್ಕೆ ಅವರು ಯಾವತ್ತೂ ಮುಂದೆ ಬರುತ್ತಿದ್ದರು ಮತ್ತು ಜನರನ್ನು ಸೇರಿಸುತ್ತಿದ್ದರು. ವಾಟಾಳ್ ಅವರಿಗೆ ಗೋಪಿಯನ್ನು ಪರಿಚಯಿಸಿದ್ದು ಅವರ ಚಿಕ್ಕಪ್ಪ ವೆಂಕಟೇಶ್ ಎಂಬುವವರು.

English summary
Former MLA Vatal Nagaraj's associate and party worker Na Gopi has committed suide with his entire family on 12th December at his residence in Byappanahalli, Bangalore. Gopi, his wife, son and daughter have taken extreme step due to financial problem.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X