ಹೊರ ರಾಜ್ಯದಲ್ಲಿ ಕನ್ನಡ ಸಿನಿಮಾ ಪ್ರದರ್ಶನಕ್ಕೆ ಒತ್ತಾಯಿಸುವೆ: ವಾಟಾಳ್
ಬೆಂಗಳೂರು, ನವೆಂಬರ್, 06 : ಹೊರ ರಾಜ್ಯಗಳಲ್ಲಿ ಕನ್ನಡ ಚಲನಚಿತ್ರಗಳನ್ನು ಪ್ರದರ್ಶಿಸಲು ಅನುವು ಮಾಡಿಕೊಡಬೇಕೆಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮೂಲಕ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದ್ದಾರೆ.
ನಗರದ ಮಲ್ಲೇಶ್ವರದಲ್ಲಿ ಬೆಂಗಳೂರು ಜಲಮಂಡಳಿ ನೌಕರರ ಸಂಘ ಆಯೋಜಿಸಿದ್ದ 60ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ವಾಟಾಳ್ ನಾಗರಾಜ್ ಅವರು, 'ಕನ್ನಡ ನಾಡಿನ ನೆಲ, ಜಲ, ಭಾಷೆ ಅಭಿವೃದ್ಧಿಗಾಗಿ ನಾನಾ ಕಾರ್ಯಕ್ರಮಗಳು ಜರುಗಬೇಕಿದೆ. ಹಲವು ಸಂಘಟನೆಗಳು ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾದರೂ ಕನ್ನಡದ ಬೆಳವಣಿಗೆ ಸಾಧ್ಯವಾಗುತ್ತಿಲ್ಲ. ಕನ್ನಡ ನುಡಿ ಮತ್ತಷ್ಟು ಪ್ರಚುರಗೊಳಬೇಕಾದರೆ ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ಕಾರ್ಯಕ್ರಮಗಳು ಉತ್ತಮ ರೀತಿಯಲ್ಲಿ ಅನುಷ್ಠಾನಗೊಳ್ಳಬೇಕು' ಎಂದರು.[ಬಯಲು ಸೀಮೆಗೆ ಕರ್ನಾಟಕ ರಾಜ್ಯೋತ್ಸವ ಪ್ರಸ್ತುತವೇ?]

ಕರ್ನಾಟಕ ಚಲನಚಿತ್ರ ಮಂಡಳಿ ಅಧ್ಯಕ್ಷರಾದ ಸಾ ರಾ ಗೋವಿಂದು ಮಾತನಾಡಿ, 'ಮಹಾದಾಯಿ ಯೋಜನೆಯಲ್ಲಿ ತೋರಿಸಿದ ಸಂಘಟಿತ ಹೋರಾಟ ಕನ್ನಡ ನುಡಿ ಉಳಿಸಿಕೊಳ್ಳಲು ಬೇಕಾಗಿದೆ. ಮುಖ್ಯವಾಗಿ ಬೆಂಗಳೂರಲ್ಲಿ ಕನ್ನಡ ಪ್ರಚುರಗೊಳಿಸುವ ಕಾರ್ಯ ಆಗಬೇಕಾಗಿದೆ. ಮುಂಬರುವ ದಿನಗಳಲ್ಲಿ ಕನ್ನಡ ಭಾಷೆಯ ಚಲನ ಚಿತ್ರಗಳು ಪ್ರಾಮುಖ್ಯತೆ ಪಡೆದುಕೊಳ್ಳುವಂತೆ ಪರಿಸ್ಥಿತಿಯನ್ನು ನಿರ್ಮಾಣ ಮಾಡಬೇಕಾಗಿದೆ' ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಯಾಗಿದ್ದ ಬೆಂಗಳೂರು ಜಲಮಂಡಳಿ ಅಧ್ಯಕ್ಷ ವಿಜಯ ಭಾಸ್ಕರ್ ಮಾತನಾಡಿ, 'ಉತ್ತಮ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ನೀರಿನ ಸೋರುವಿಕೆ ತಡೆಗಟ್ಟಲಿದ್ದೇವೆ. ನೀರನ್ನು ಸಾಕಷ್ಟು ಉಳಿತಾಯ ಮಾಡಲಿದ್ದು, ಸಮರ್ಪಕ ನೀರು ಸರಬರಾಜು ನಮ್ಮ ಮುಖ್ಯ ಗುರಿಯಾಗಿದೆ' ಎಂದರು.[ಬೆಂಗಳೂರಿಗರಿಗೆ ದರ ಏರಿಕೆ ಬಿಸಿ ಮುಟ್ಟಿಸಲಿದೆ ಜಲ ಮಂಡಳಿ]
ಈ ಸಂದರ್ಭದಲ್ಲಿ ಬೆಂಗಳೂರು ಜಲಮಂಡಳಿಗೆ ಶ್ರಮಿಸಿದ ಸಾಧಕರುಗಳಾದ ಬೆಂಗಳೂರು ಜಲಮಂಡಳಿ ನಿವೃತ್ತ ಅಧ್ಯಕ್ಷ ಬಿ.ಎನ್ ತ್ಯಾಗರಾಜನ್, ನಿವೃತ್ತ ಮುಖ್ಯ ಅಭಿಯಂತರ ಸಿ.ವಿಶ್ವನಾಥ್ ಹಾಗೂ ಕೆ. ರಮೇಶ್, ಕನ್ನಡಪರ ಹೋರಾಟಗಾರ ಎಚ್.ವಿ ಗಿರೀಶ್ ಗೌಡ, ಕನ್ನಡ ಕೃಷ್ಣ ಅವರನ್ನು ಸನ್ಮಾನಿಸಲಾಯಿತು.
ಈ ರಾಜ್ಯೋತ್ಸವದಲ್ಲಿ ಕನ್ನಡ ನಾಡು ನುಡಿಗೆ ಶ್ರಮಿಸುತ್ತಿರುವ ಪ್ರೊ. ಚಂದ್ರಶೇಖರ್ ಪಾಟೀಲ (ಚಂಪಾ) ಸೇರಿದಂತೆ ನಾನಾ ದಿಗ್ಗಜರುಗಳು ಜಲಮಂಡಳಿಯ ನಾನಾ ಪದಾಧಿಕಾರಿಗಳು ಭಾಗವಹಿಸಿದ್ದರು. ಜೀ ಕನ್ನಡ ವಾಹಿನಿಯ ಸರಿಗಮಪ ಲಿಟಲ್ ಚಾಂಪ್ ನ ಖ್ಯಾತ ಗಾಯಕರುಗಳಾದ ಮಲ್ಲೇಶ್ ಹೂಗಾರ ಹಾಗೂ ಪುಟ್ಟರಾಜ್ ಹೂಗಾರ್ ಅವರಿಂದ ಕನ್ನಡ ಗೀತೆಗಳ ಸುಮಧುರ ಗಾಯನ ಕಾರ್ಯಕ್ರಮ ನಡೆಯಿತು.












Click it and Unblock the Notifications