ʼವಂದೇ ಭಾರತ್ʼ ಸ್ಲೀಪರ್ ಕೋಚ್ ನೋಡಿದ್ರೆ ಶಾಕ್ ಆಗ್ತೀರ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು ವಂದೇ ಭಾರತ್ ಸ್ಲೀಪರ್ ಕೋಚ್ ರೈಲಿನ ಮಾದರಿಯನ್ನು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಅನಾವರಣಗೊಳಿಸಿದರು. ಇದನ್ನು ಭಾರತದ ಮೊದಲ ವಂದೇ ಭಾರತ್ ಮಾದರಿಯ ಸ್ಲೀಪರ್ ರೈಲು ಎಂದು ಕರೆಯಲಾಗಿದೆ. ರೈಲಿನ ವಿನ್ಯಾಸ ಮತ್ತು ಒಳಗಿರುವ ವ್ಯವಸ್ಥೆಗಳು ಪ್ರಯಾಣಿಕರಲ್ಲಿ ಅಚ್ಚರಿ ಮೂಡಿಸುವಂತಿದೆ.
ಈ ರೈಲನ್ನು ಅನಾವರಣಗೊಳಿಸಿ ಮಾತನಾಡಿದ ಸಚಿವ ಅಶ್ವಿನಿ ವೈಷ್ಣವ್, ಈ ವಂದೇ ಭಾರತ್ ಸ್ಲೀಪರ್ ಕೋಚ್ ರೈಲುಗಳನ್ನು ಹಳಿಗೆ ಬಿಡುವ ಮುನ್ನ 10 ದಿನಗಳು ಪರೀಕ್ಷಾರ್ಥ ಸಂಚಾರ ನಡೆಸಲಿವೆ. ಮೂರು ತಿಂಗಳಲ್ಲಿ ಈ ರೈಲುಗಳು ಪ್ರಯಾಣಿಕರ ಬಳಕೆಗೆ ಸಿಗುವ ಸಾಧ್ಯತೆ ಇದೆ ಎಂದು ಹೇಳಿದರು.

ಈ ರೈಲಿನಲ್ಲಿ ಸಣ್ಣ ಸಣ್ಣ ವಿಷಯಗಳಿಗೂ ಹೆಚ್ಚಿನ ಒತ್ತು ನೀಡಿ ಎಚ್ಚರಿಕೆಯಿಂದ ಡಿಸೈನ್ ಮಾಡಲಾಗಿದೆ ಎನ್ನಲಾಗಿದೆ. ಲೊಕೊ ಪೈಲಟ್‌ಗಳು, ನಿರ್ವಹಣಾ ಸಿಬ್ಬಂದಿ ಅಥವಾ ಹಾಸಿಗೆ ಮತ್ತು ಆಹಾರ ವಿತರಿಸುವ ಸ್ಟಾಫ್‌ನ ಅಗತ್ಯತೆಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ರೈಲಿನಲ್ಲಿರುವ ಪ್ರತಿ ಶೌಚಾಲಯವನ್ನು ವಿಶೇಷವಾಗಿ ಡಿಸೈನ್ ಮಾಡಲಾಗಿದೆ.
ವಂದೇ ಭಾರತ್ ರೈಲಿನ ಟಿಕೆಟ್‌ಗಳು ಪ್ರಯಾಣಿಕರಿಗೆ ಕೈಗೆಟುಕುವ ದರದಲ್ಲಿದ್ದು, ಮಧ್ಯಮ ವರ್ಗದ ಜನರೂ ಕೂಡ ಆರಾಮದಾಯಕವಾಗಿ ಪ್ರಯಾಣಿಸಬಹುದು. ಈ ರೈಲಿನಲ್ಲಿ ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಅನುಷ್ಠಾನಗೊಳಿಸಿರುವುದರಿಂದ ಈ ರೈಲನ್ನು ಜಗತ್ತಿನ ಅತ್ಯುತ್ತಮ ರೈಲುಗಳೊಂದಿಗೆ ಹೋಲಿಸಬಹುದು ಎಂದು ಸಚಿವ ಅಶ್ವಿನಿ ವೈಷ್ಣವ್ ಹೇಳಿದರು.
ಖುದ್ದು ರೈಲಿನ ಒಳಭಾಗವನ್ನೆಲ್ಲ ಪರಿಶೀಲಿಸಿದ ಅವರು, ಬಳಿಕ ಪರೀಕ್ಷಾರ್ಥ ಸಂಚಾರವೂ ನಡೆಸಿದರು. ಇದೇ ಸಂದರ್ಭದಲ್ಲಿ ರೈಲ್ವೆ ಖಾತೆಯ ರಾಜ್ಯ ಸಚಿವ ವಿ.ಸೋಮಣ್ಣ ಕೂಡ ಅಶ್ವಿನಿ ವೈಷ್ಣವ್ ಅವರಿಗೆ ಸಾಥ್ ನೀಡಿದರು. ವಂದೇ ಭಾರತ್ ಸ್ಲೀಪರ್ ಕೋಚ್‌ಗಳು ನಮ್ಮ ಬೆಂಗಳೂರಿನಲ್ಲಿರುವ ಬಿಇಎಂಎಲ್ ಉತ್ಪಾದನಾ ಘಟಕದಲ್ಲಿ ತಯಾರಾಗುತ್ತಿವೆ. ಈ ವರ್ಷಾಂತ್ಯದ ವೇಳೆಗೆ ಈ ರೈಲುಗಳು ಹಳಿ ಮೇಲೆ ಸದ್ದು ಮಾಡಲಿವೆ.

ಏನೆಲ್ಲ ಇರಲಿದೆ?: ಇನ್ನು ಈ ವಂದೇ ಭಾರತ್ ಸ್ಲೀಪರ್ ಕೋಚ್‌ನಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಮೊಬೈಲ್ ಹೋಲ್ಡರ್, ಚಾರ್ಜ್ ಪಾಯಿಂಟ್, ಸ್ನ್ಯಾಕ್ಸ್ ಟೇಬಲ್, ಅಪಘಾತ ನಿಯಂತ್ರಕ ಕವಚ ವ್ಯವಸ್ಥೆ, ಉಕ್ಕಿನಿಂದ ನಿರ್ಮಿಸಲಾದ ಕೋಚ್‌ಗಳು, ಜಿಎಫ್‌ಆರ್‌ಪಿ ಬಳಸಿ ನಿರ್ಮಿಸಿದ ಆಂತರಿಕ ಫಲಕ, ಯಾವುದೇ ಬೆಂಕಿ ಅವಘಡ ನಿಯಂತ್ರಣಕ್ಕೆ ಪ್ರತ್ಯೇಕ ವ್ಯವಸ್ಥೆ, ಸ್ವಯಂ ಚಾಲಿತ ಡೋರ್‌ಗಳು ಇರಲಿವೆ. ಗಂಟೆಗೆ 160 ಕಿ.ಮೀ. ವೇಗದಲ್ಲಿ ಈ ರೈಲು ಚಲಿಸಲಿದೆ.
ಮೂಲಗಳ ಪ್ರಕಾರ 16 ಬೋಗಿಗಳು ಹಾಗೂ 823 ಆಸನಗಳು ಇರಲಿವೆ. 611 ಆಸನವುಳ್ಳ 3ಎಸಿ ದರ್ಜೆಯ 11 ಬೋಗಿ, 188 ಆಸನವುಳ್ಳ 2ಎಸಿ ದರ್ಜೆಯ 4 ಬೋಗಿಗಳು ಹಾಗೂ 24 ಆಸನವುಳ್ಳ ಒಂದು 1ಎಸಿ ದರ್ಜೆಯ ಕೋಚ್ ಇರಲಿವೆ ಎಂದು ಹೇಳಲಾಗಿದೆ. ಈ ರೈಲಿನಲ್ಲಿ ಪ್ರಯಾಣಿಸಲು ಪ್ರಯಾಣಿಕರು ಕುತೂಹಲದಿಂದ ಕಾದಿದ್ದಾರೆ.












Click it and Unblock the Notifications