Bengaluru Suburban Rail: ಕೇಂದ್ರ ಬಜೆಟ್‌ನಲ್ಲಿ ಉಪನಗರ ರೈಲ್ವೆ ಸಿಕ್ತು ಬಂಪರ್ ನೆರವು: ಸಂಸದ ಹರ್ಷ
ಬೆಂಗಳೂರು, ಫೆಬ್ರವರಿ 02: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ಪ್ರಸಕ್ತ 2025-26ನೇ ಸಾಲಿನ ಬಜೆಟ್ ಮಂಡಿಸಿದೆ. ಇದರಲ್ಲಿ ಕರ್ನಾಟಕದ ರೈಲ್ವೆ ಯೋಜನೆಗಳಿಗೆ ಒಂದಷ್ಟು ಹಣ ಮೀಸಲಿಟ್ಟಿದೆ. ಒಟ್ಟು ₹7,564 ಕೋಟಿ ಮೀಸಲಿಟ್ಟಿದ್ದು, ಬೆಂಗಳೂರು ಉಪನಗರ ರೈಲು ಯೋಜನೆಗೆ ₹350 ಕೋಟಿ ರೂಪಾಯಿ ಹಂಚಿಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿರುವ ಸಂಸದ ಪಿ.ಸಿ. ಮೋಹನ್ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಬಜೆಟ್‌ನಲ್ಲಿ ಉದಾರವಾಗಿ ಕರ್ನಾಟಕದ ವಿವಿಧ ರೈಲ್ವೆ ಯೋಜನೆಗಳಿಗೆ ಅನುದಾನ ನೀಡಲಾಗಿದೆ. ರೂ. 7,564 ಕೋಟಿ ಮೀಸಲಿಟ್ಟ ಹಣದಿಂದ ರಾಜ್ಯದೊಳಗಿನ ವಿವಿಧ ರೈಲ್ವೆ ಯೋಜನೆಗಳು, ಕಾಮಗಾರಿಗಳಿಗೆ ವೇಗ ಸಿಗಲಿದೆ. ಇನ್ನೂ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಸಹಕಾರಿಯಾಗುವ ಬೆಂಗಳೂರು ಉಪನಗರ ರೈಲು ಯೋಜನೆಗಳು ಒಟ್ಟು ರೂ.350 ಕೋಟಿ ಪಡೆದಿವೆ.

15 ಪ್ರಮುಖ ಅಂತರ-ರಾಜ್ಯ ಮತ್ತು ಅಂತರ-ರಾಜ್ಯ ಯೋಜನೆಗಳಿಗೆ ಹಣಕಾಸು ಒದಗಿಸಲಾಗಿದೆ. ಕರ್ನಾಟಕದ ಬೆಳವಣಿಗೆಗೆ ಅನುದಾನ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರ ಬದ್ಧತೆಗೆ ಕೃತಜ್ಞತೆಗಳು ಎಂದು ಸಂಸದ ಪಿ.ಸಿ.ಮೋಹನ್ ಅವರು ತಿಳಿಸಿದ್ದಾರೆ.
ಬೆಂಗಳೂರು ಉಪನಗರ ರೈಲು ಯೋಜನೆಯು ಒಟ್ಟು 148 ಕಿಲೋ ಮೀಟರ್ ಜಾಲ ಇದಾಗಿದೆ. ಕನಕ, ಸಂಪಿಗೆ, ಪಾರಿಜಾತ ಮತ್ತು ಮಲ್ಲಿಗೆ ಎಂದು ನಾಲ್ಕು ಹಂತಗಳಲ್ಲಿ ಯೋಜನೆ ಸಾಕಾರಗೊಳಿಸಲಾಗುತ್ತಿದೆ. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನ ಹಂಚಿಕೆಯಲ್ಲಿ ನಿರ್ಮಾಣವಾಗುತ್ತಿದೆ. ನಿಧಾನಗತಿಯಲ್ಲಿ ಉಪನಗರ ರೈಲ್ವೆ ಯೋಜನೆಗಳು ನಡೆಯುತ್ತಿರುವುದುಕ್ಕೆ ಬೇಸರ ಇದೆ.
ಇತ್ತೀಚೆಗೆ ಕೈಗಾರಿಕೆ ಮತ್ತು ಮೂಲ ಸೌಕರ್ಯಾಭಿವೃದ್ಧಿ ಸಚಿವ ಎಂಬಿ ಪಾಟೀಲ್ ಅವರು ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಯೋಜನೆ ಪ್ರಗತಿ ಪರಿಶೀಲಿಸಿದ್ದಾರೆ. ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಕಂಪನಿಗೆ (K-RIDE) ಅಧಿಕಾರಿಗಳಿಗೆ, ಗುತ್ತಿಗೆದಾರರಿಗೆ ಸಚಿವರು ತಿಳಿಸಿದ್ದಾರೆ. ಈಗಾಗಲೇ ಕೆಲ ಮಾರ್ಗಗಳಲ್ಲಿ ಭೂಸ್ವಾಧಿನ ಕಾರ್ಯ ಪ್ರಕ್ರಿಯೆ ಮುಂದುವರಿದಿದೆ. ಸರ್ಕಾರ ಕೆರೈಡ್‌ಗೆ ಅಗತ್ಯ ಭೂಮಿ ನೀಡಿದೆ.
ಇದೆಲ್ಲದರ ನಡುವೆ ಉಪನಗರ ರೈಲ್ವೆ ಯೋಜನೆಗೆಂದೆ ಕೇಂದ್ರ ಬಜೆಟ್‌ನಲ್ಲಿ ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಅವರು ಒಟ್ಟು 350 ಕೋಟಿ ರೂಪಾಯಿ ಮೀಸಲಿಡುವ ಮೂಲಕ ಯೋಜನೆಗೆ ಮತ್ತಷ್ಟು ವೇಗ ನೀಡಲಾಗುತ್ತಿದೆ. ಸದ್ಯ ಈ ಬಗ್ಗೆ ಬಿಜೆಪಿ ನಾಯಕರು, ರಾಜ್ಯ ರೈಲ್ವೆ ಸಚಿವ ವಿ.ಸೋಮಣ್ಣ ಅವರು ಕೇಂದ್ರಕ್ಕೆ ಅಭಿನಂದನೆ ತಿಳಿಸಿದ್ದಾರೆ.
ಕೇಂದ್ರ ಬಜೆಟ್ ಮಂಡನೆ ಬಳಿಕ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ವಿ.ಸೋಮಣ್ಣ ಅವರು ರೂ. 7,564 ಬಿಡುಗಡೆ ಅಧಿಕೃತ ಮಾಹಿತಿ ನೀಡಿದರು. ಈ ಅನುದಾನ ಯಾವೆಲ್ಲ ಯೋಜನೆಗಳಿಗೆ, ಹೊಸ ಮಾರ್ಗಗಳು, ಯೋಜನೆಗಳ ಕಾಮಗಾರಿಗೆ ಬಳಕೆ ಕುರಿತು ವಿವರಿಸಿದರು.












Click it and Unblock the Notifications