ಮಹಿಳಾ ದಿನ ಆಚರಣೆಗೆ ಬೈಕ್ ರೈಡ್: ರಸ್ತೆಯಲ್ಲಿ ನಿಲ್ಲಬೇಡಿ ಎಂದು ಯುವತಿಯರಿಗೆ ಕಿರುಕುಳ, ದೂರು ದಾಖಲು
ಘಟನೆ ಸಂಬಂಧ ಕೋಣನಕುಂಟೆ ಪೊಲೀಸರು ದೂರು, ಪ್ರತಿದೂರು ದಾಖಲಿಸಿಕೊಂಡಿದ್ದಾರೆ.
ಬೆಂಗಳೂರು, ಮಾರ್ಚ್ 06: ಮಹಿಳಾ ದಿನ ಆಚರಣೆ ಗೆ ಹಲವು ಕಾರ್ಯಕ್ರಮಗಳು ನಡೆಯುತ್ತಿವೆ. ಇಂತಹದ್ದೆ ಕಾರ್ಯಕ್ರಮದಲ್ಲಿ ಬೈಕ್ ರೈಡ್ ಮಾಡಿದ್ದ ಯುವತಿಯರ ತಂಡವೊಂದು ಕಿರುಕುಳಕ್ಕೆ ಒಳಗಾಗಿದೆ. ದೂರದಿಂದ ಬೈಕ್ ಸವಾರಿ ಮಾಡಿಕೊಂಡು ಬಂದ ತಂಡ ನೀರು ಕುಡಿಯಲು ರಸ್ತೆಯಲ್ಲಿ ನಿಂತಿದ್ದಕ್ಕೆ ಕಿರುಕುಳಕ್ಕೆ ಒಳಗಾಗಬೇಕಾದ ಘಟನೆ ನೈಸ್ ರಸ್ತೆಯಲ್ಲಿ ನಡೆದಿದೆ.
ಭಾನುವಾರ ನೈಸ್ ರಸ್ತೆಯಲ್ಲಿ ಬರುತ್ತಿದ್ದ ಮಹಿಳಾ ಬೈಕ್ ಸವಾರರ ಮೇಲೆ ಕ್ಷುಲ್ಲಕ ವಿಚಾರವಾಗಿ ಕಿರುಕುಳ ನೀಡಿದ ಆರೋಪದ ಮೇಲೆ ಬೆಂಗಳೂರು ಮೂಲದ ವಕೀಲ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬರ ವಿರುದ್ಧ ಕೋಣನಕುಂಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಹಿಳಾ ಬೈಕ್ ಸವಾರರು ಸವಾರಿ ಮುಗಿಸಿ ಹಿಂತಿರುಗಿ ನೀರು ಕುಡಿಯಲು ರಸ್ತೆ ಬದಿ ಬೈಕ್ ನಿಲ್ಲಿಸಿದ್ದರು. ರಸ್ತೆ ಪಕ್ಕದಲ್ಲಿ ವಾಸಿಸುತ್ತಿರುವ ವೃದ್ಧರೊಬ್ಬರು ತಮ್ಮನ್ನು ಕೆಟ್ಟದಾಗಿ ಕೂಗುವುದನ್ನು ಅವರು ಗಮನಿಸಿದ್ದಾರೆ. ಏನಾಗುತ್ತಿದೆ ಎಂದು ಅವರು ತಿಳಿದುಕೊಳ್ಳುವ ವೇಳೆ, ಆ ವ್ಯಕ್ತಿಯ ಮಗ ಅವರ ಬಳಿಗೆ ಬಂದು ಕೂಗಾಡಲು ಪ್ರಾರಂಭಿಸಿದ್ದಾರೆ. ತಕ್ಷಣ ಇಲ್ಲಿಂದ ಬೈಕ್‌ಗಳನ್ನು ತೆಗೆಯುವಂತೆ ಹೇಳಿದ್ದು, ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ.
ಬೈಕ್ ಸವಾರರು ಇದು ರಸ್ತೆ, ಖಾಸಗಿ ಆಸ್ತಿಯಲ್ಲ ಎಂದು ಹೇಳಲು ಪ್ರಯತ್ನಿಸಿದರು ಆದರೆ ವ್ಯಕ್ತಿ ಅಸಭ್ಯವಾಗಿ ವರ್ತಿಸಿ, ಬೈಕ್ ಸವಾರರೊಬ್ಬರಿಂದ ಗಾಡಿಯ ಕೀಯನ್ನೂ ಕಿತ್ತುಕೊಳ್ಳೂತ್ತಿರುವುದು ವಿಡಿಯೋದಲ್ಲಿ ಕಾಣಬಹುದು. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬೈಕ್ ಸವಾರರಾದ ಶರೋನ್ ಸ್ಯಾಮ್ಯುಯೆಲ್ ಮತ್ತು ಪ್ರಿಯಾಂಕಾ ಪ್ರಸಾದ್ ಅವರು ಮಾರ್ಚ್ 5 ರಂದು ಭಾನುವಾರ ಬೈಕ್ ರ್ಯಾಲಿ ಮುಗಿಸಿ ಮನೆಗೆ ಹೋಗುತ್ತಿದ್ದಾಗ ಘಟನೆ ಸಂಭವಿಸಿದೆ.
ಮಂಜುನಾಥ್ ಎಂಬುವವರು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಮಹಿಳೆಯರು ನೀಡಿದ ದೂರಿನ ಮೇರೆಗೆ ಕೋಣನಕುಂಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಿಯಾಂಕಾ ಪ್ರಸಾದ್ ಅವರು ಪೋಸ್ಟ್ ಮಾಡಿದ ವೀಡಿಯೊದಲ್ಲಿ, ವ್ಯಕ್ತಿ ತಾನು ವಕೀಲ ಎಂದು ಹೇಳುವುದನ್ನು ಕೇಳಿಸಿಕೊಳ್ಳಬಹುದು. ನೀವು ನನ್ನ ಆಸ್ತಿ ಬಳಿಯ ಗೇಟ್ ಹತ್ತಿರ ಗಾಡಿ ನಿಲ್ಲಿಸಿದ್ದಿರ ಎಂದು ಕೂಗಾಡುವುದನ್ನು ನೋಡಬಹುದು.

"45 ನಿಮಿಷಗಳ ಕಾಲ ನಾವು ಬಿಸಿಲಿನಲ್ಲಿ ನಿಂತಿದ್ದೇವು. ಆ ವ್ಯಕ್ತಿ ಮನೆಗೆ ಹಿಂತಿರುಗಿ, ಕೈಯಲ್ಲಿ ದೊಡ್ಡ ಕೋಲಿನೊಂದಿಗೆ ತಿರುಗಾಡುತ್ತಿದ್ದರು. ನಾವು ತುಂಬಾ ಹೆದರಿಕೆ ಮತ್ತು ಅಸಹಾಯಕತೆಯನ್ನು ಅನುಭವಿಸಿದ್ದೇವೆ. ಪೊಲೀಸ್ ನಿಯಂತ್ರಣ ಕೊಠಡಿಯನ್ನು ಹಲವು ಬಾರಿ ಕರೆ ಮಾಡಿದ ನಂತರ, ಹೊಯ್ಸಳ ಕಾರು ಸಹಾಯಕ್ಕೆ ಬಂದಿತು" ಎಂದು ಪ್ರಿಯಾಂಕಾ ವಿಡಿಯೋದಲ್ಲಿ ಹೇಳಿದ್ದಾರೆ. ಮತ್ತೊಂದು ವಿಡಿಯೋದಲ್ಲಿ, ಪೊಲೀಸರು ಎಫ್‌ಐಆರ್ ದಾಖಲಿಸುವ ಮೊದಲು ಏಳು ಗಂಟೆಗಳ ಕಾಲ ಪೊಳಿಸ್ ಠಾಣೆಯಲ್ಲಿ ಕಾಯುವಂತೆ ಮಾಡಿದ್ದಾರೆ ಎಂದು ಪ್ರಿಯಾಂಕಾ ಹೇಳಿದ್ದಾರೆ.
ಮಹಿಳೆಯ ದೂರಿನ ಆಧಾರದ ಮೇಲೆ ಕೋಣನಕುಂಟೆ ಪೊಲೀಸರು ಮಂಜುನಾಥ್ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆ), 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು), ಮತ್ತು 354 (ಹೆಣ್ಣಿನ ಘನತೆಯನ್ನು ಹಾಳು ಮಾಡುವ ಉದ್ದೇಶದಿಂದ ಆಕೆಯ ಮೇಲೆ ಹಲ್ಲೆ ಅಥವಾ ಬಲವಂತ) ಅಡಿಯಲ್ಲಿ ದೂರು ದಾಖಳಿಸಲಾಗಿದೆ.
ಇತ್ತ, ದೂರು ದಾಖಲಾದ ಬೆನ್ನಲ್ಲೇ ವ್ಯಕ್ತಿ ಕೂಡ ಪ್ರತಿದೂರು ದಾಖಲಿಸಿದ್ದಾರೆ. ರಸ್ತೆಯ ಪಕ್ಕದಲ್ಲೇ ತನಗೆ ಸೇರಿದ ಜಾಗವಿದೆ. ಈ ಹಿನ್ನಲೆ ಯುವತಿಯರಿಗೆ ತೆರಳಲು ಸೂಚಿಸಿದ್ದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸದ್ಯ ಎರಡು ದೂರುಗಳನ್ನು ಪಡೆದ ಕೋಣನಕುಂಟೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.











Click it and Unblock the Notifications