ಕರ್ನಾಟಕ ಹೈಕೋರ್ಟ್‌ಗೆ ಇಬ್ಬರು ನೂತನ ನ್ಯಾಯಮೂರ್ತಿಗಳ ನೇಮಕ
ವಕೀಲರಾದ ವಿಜಯಕುಮಾರ್ ಅಡಗೌಡ ಪಾಟೀಲ್ ಮತ್ತು ರಾಜೇಶ್ ರೈ ಕಲ್ಲಂಗ್ಲ ಅವರನ್ನು ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಗಳನ್ನಾಗಿ ನೇಮಕ ಕೇಂದ್ರ ಕಾನೂನು ಮತ್ತು ನ್ಯಾಯ ಇಲಾಖೆ ಆದೇಶ ಹೊರಡಿಸಿದೆ.
ಬೆಂಗಳೂರು ಫೆಬ್ರವರಿ 6: ಕರ್ನಾಟಕ ಹೈಕೋರ್ಟ್‌ಗೆ ಮತ್ತೆ ಇಬ್ಬರು ವಕೀಲರನ್ನು ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ವಕೀಲರಾದ ವಿಜಯಕುಮಾರ್ ಅಡಗೌಡ ಪಾಟೀಲ್ ಮತ್ತು ರಾಜೇಶ್ ರೈ ಕಲ್ಲಂಗ್ಲ ಅವರನ್ನು ಹೆಚ್ಚುವರಿ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಿ ರಾಷ್ಟ್ರಪತಿಗಳ ಅನುಮತಿ ಮೇರೆಗೆ ಕೇಂದ್ರ ಕಾನೂನು ಮತ್ತು ನ್ಯಾಯ ಇಲಾಖೆ ಆದೇಶ ಹೊರಡಿಸಿದೆ.
ಸಿಜೆಐ ಡಿ.ವೈ.ಚಂದ್ರಚೂಡ್ ನೇತೃತ್ವದ ಸುಪ್ರೀಂಕೋರ್ಟ್ ಕೊಲಿಜಿಯಂ ಇವರನ್ನು ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಲು ಶಿಫಾರಸು ಮಾಡಿತ್ತು. ಕೊಲಜಿಯಂ ವಿಜಯಕುಮಾರ್ ಪಾಟೀಲ್, ರಾಜೇಶ್ ರೈ ಅವರಲ್ಲದೆ, ವಕೀಲ ತಜಲಿ ಮೌಲಾಸಾಬ್ ನದಾಫ್ ಅವರ ಹೆಸರನ್ನೂ ಸಹ ಕೇಂದ್ರಕ್ಕೆ ಶಿಫಾರಸು ಮಾಡಿತ್ತು. ಆದರೆ ಆ ಹೆಸರನ್ನು ಕೇಂದ್ರ ಸರ್ಕಾರ ಅನುಮೋದಿಸಿಲ್ಲ.

ವಿಜಯಕುಮಾರ್ ಪಾಟೀಲ್ ಅವರು ಮೂಲತಃ ಉತ್ತರ ಕರ್ನಾಟಕ ಭಾಗವರಾಗಿದ್ದು, ಸುಮಾರು 10 ವರ್ಷಗಳಿಂದಲೂ ಸರ್ಕಾರಿ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಲವು ಮಹತ್ವದ ಪ್ರಕರಣದಲ್ಲಿ ಸರ್ಕಾರದ ಪರ ಸಮರ್ಥ ವಾದವನ್ನು ಮಂಡಿಸಿ ಸೈ ಎನಿಸಿಕೊಂಡಿದ್ದಾರೆ. ಎಲ್ಲಾ ರೀತಿಯ ಕೇಸುಗಳನ್ನು ನಿಭಾಯಿಸಿದ ಅನುಭವ ಹೊಂದಿದ್ದಾರೆ.
ರಾಜೇಶ್ ರೈ ಅವರು ಕರಾವಳಿ ಮೂಲದವರಾಗಿದ್ದು, ಸಿವಿಲ್ ಹಾಗೂ ಕ್ರಿಮಿನಲ್ ಕೇಸುಗಳನ್ನು ನಡೆಸುವುದರಲ್ಲಿ ಪ್ರಸಿದ್ಧರಾಗಿದ್ದಾರೆ.
ಬೆಂಗಳೂರಿನ ಪ್ರಧಾನಪೀಠ ಸೇರಿ ಧಾರವಾಡ ಮತ್ತು ಕುಲಬುರಗಿ ಪೀಠಗಳಿಗೆ ಒಟ್ಟು 62 ನ್ಯಾಯಮೂರ್ತಿಗಳ ಹುದ್ದೆ ಮಂಜೂರಾಗಿದ್ದು, ಸದ್ಯ 54 ನ್ಯಾಯಮೂರ್ತಿಗಳು ಕಾರ್ಯನಿರ್ವಹಿಸುತ್ತಿದ್ದು, ಇನ್ನೂ 8 ಹುದ್ದೆ ಖಾಲಿ ಇದ್ದವು, ಇದೀಗ ಇಬ್ಬರು ನೇಮಕ ಗೊಂಡಿರುವುದರಿಂದ ಆ ಸಂಖ್ಯೆ 56ಕ್ಕೆ ಎರಿಕೆಯಾಗಲಿದ್ದು, ಇನ್ನೂ ಆರು ಹುದ್ದೆ ಖಾಲಿ ಇರಲಿವೆ.
ಕಳೆದ ವಾರವಷ್ಟೇ ಐವರು ಜಿಲ್ಲಾ ನ್ಯಾಯಾಧೀಶರಿಗೆ ಬಡ್ತಿ ನೀಡಿ ಹೆಚ್ಚುವರಿ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಲಾಗಿದೆ.












Click it and Unblock the Notifications