ಕಡಬಗೆರೆ ಶ್ರೀನಿವಾಸ್ ಶೂಟೌಟ್ ಕೇಸ್‌ಗೆ ತಿರುವು, ಬಿಜೆಪಿ ಶಾಸಕರ ಕೈವಾಡ?
ಬೆಂಗಳೂರು, ಫೆಬ್ರವರಿ 03 : ಭಾರಿ ಚರ್ಚೆಗೆ ಕಾರಣವಾಗಿದ್ದ ಕಡಬಗೆರೆ ಶ್ರೀನಿವಾಸ್ ಶೂಟೌಟ್ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಹೌದು, ಈ ಪ್ರಕರಣದಲ್ಲಿ ಬಿಜೆಪಿ ಶಾಸಕರ ಕೈವಾಡ ಇರುವ ಕುರಿತು ಸಿಸಿಬಿ ಪೊಲೀಸರಿಗೆ ಮಾಹಿತಿ ಸಿಕ್ಕಿದೆ.
ಕಡಬಗೆರೆ ಶ್ರೀನಿವಾಸ್ ಮೇಲೆ ಹಾಡಹಗಲೇ ನಡೆದ ಶೂಟೌಟ್ ಪ್ರಕರಣದ ಬಗ್ಗೆ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬೆಂಗಳೂರಿನ ಹಾಲಿ ಬಿಜೆಪಿ ಶಾಸಕರೊಬ್ಬರ ಕೈವಾಡ ಇರುವ ಬಗ್ಗೆ ಮಾಹಿತಿ ಸಿಕ್ಕಿದ್ದು, ತನಿಖೆ ತೀವ್ರಗೊಂಡಿದೆ.
ಎಸಿಪಿ ಬಾಲರಾಜ್ ನೇತೃತ್ವದಲ್ಲಿ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಶೂಟೌಟ್ ನಡೆದ ಜಾಗವನ್ನು ಪುನಃ ಪರಿಶೀಲನೆ ನಡೆಸಿರುವ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ಕಡಬಗೆರೆ ಶ್ರೀನಿವಾಸ್ ಅವರ ಮೇಲೆ ನಡೆದ ಗುಂಡಿನ ದಾಳಿ ಬಗ್ಗೆ 70ಕ್ಕೂ ಅಧಿಕ ಜನರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಇವರಲ್ಲಿ ಮಾದನಾಯಕನಹಳ್ಳಿ, ನೆಲಮಂಗಲ, ಬಸವೇಶ್ವರ ನಗರ ಸುತ್ತಮುತ್ತಲಿನ ಹಳೇ ರೌಡಿ ಶೀಟರ್‌ಗಳು ಸೇರಿದ್ದಾರೆ.
ಬೆಂಗಳೂರು ನಗರದ ಬಿಜೆಪಿ ಶಾಸಕರಿಗೆ ಆಪ್ತರಾದ ಮೂವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಗುಂಡೇಟಿನಿಂದ ಗಾಯಗೊಂಡು ಆಸ್ಪತ್ರೆ ಸೇರಿದ್ದ ಕಡಬಗೆರೆ ಶ್ರೀನಿವಾಸ್ ಈ ಮೂವರ ಹೆಸರನ್ನು ಹೇಳಿದ್ದರು.
ಪ್ರಕರಣವೇನು? : 2017ರ ಫೆಬ್ರವರಿ 3ರಂದು ಕಡಬಗೆರೆ ಶ್ರೀನಿವಾಸ್ ಮೇಲೆ ಯಲಹಂಕದ ಕೋಗಿಲು ಕ್ರಾಸ್ ಬಳಿ ಗುಂಡಿನ ದಾಳಿ ನಡೆದಿತ್ತು. ಒಟ್ಟು ಮೂರು ಗುಂಡುಗಳು ಅವರ ದೇಹಕ್ಕೆ ಹೊಕ್ಕಿದ್ದವು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಅವರು ಪ್ರಾಣಾಪಾಯದಿಂದ ಪಾರಾಗಿದ್ದರು.
ಮೊದಲು ಸ್ಥಳೀಯ ಪೊಲೀಸರು ತನಿಖೆ ಆರಂಭಿಸಿದ್ದರು. ಬಳಿಕ ಸಿಸಿಬಿ ಪೊಲೀಸರಿಗೆ ತನಿಖೆ ಹಸ್ತಾಂತರವಾಗಿದೆ. ಅಗತ್ಯವಿದ್ದರೆ ಬಿಜೆಪಿ ಶಾಸಕರನ್ನು ವಿಚಾರಣೆ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ.












Click it and Unblock the Notifications