ಟಿವಿ ವಾಹಿನಿಗಳು ಕನ್ನಡದ ಕೊಲೆ ಮಾಡಬಾರದು ಎಂದ ನಾಗಾಭರಣ
ಬೆಂಗಳೂರು, ಏಪ್ರಿಲ್ 28: ಕೊರೊನಾ ಸಂದರ್ಭದಲ್ಲಿ ಕನ್ನಡ ಟಿವಿ ವಾಹಿನಿಗಳು ಹೆಚ್ಚು ಕನ್ನಡ ಪದಗಳನ್ನು ಬಳಸದೇ, ಅನವಶ್ಯಕವಾಗಿ ಆಂಗ್ಲ ಪದಗಳನ್ನು ಬಳಸಿ, ಕನ್ನಡ ಭಾಷಾ ಬೆಳವಣಿಗೆಗೆ ಕುಂದುಂಟು ಮಾಡುತ್ತಿದ್ದಾರೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ ಎಸ್ ನಾಗಾಭರಣ ಆರೋಪಿಸಿದ್ದಾರೆ.
Recommended Video
ಅವರು ಮಾಧ್ಯಮ ಸಂಸ್ಥೆಗಳಿಗೆ ಕನ್ನಡ ಭಾಷೆ ಬಳಕೆಯ ನಿಘಂಟನ್ನು ನೀಡಿ, ಕನ್ನಡ ಪದಗಳನ್ನೇ ಕಡ್ಡಾಯವಾಗಿ ಬಳಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತು ಮಂಗಳವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪ್ರಸ್ತುತ ರಾಜ್ಯ ಎದುರಿಸುತ್ತಿರುವ ಕೊರೊನಾ ಸಾಂಕ್ರಾಮಿಕ ರೋಗದ ಸನ್ನಿವೇಶದಲ್ಲಿ ಮಾಧ್ಯಮಗಳು ಅದರಲ್ಲೂ ವಿಶೇಷವಾಗಿ ವಿದ್ಯುನ್ಮಾನ ಮಾಧ್ಯಮಗಳು ಸಾರ್ವಜನಿಕರಿಗೆ ಮಾಹಿತಿ ತಲುಪಿಸುವಲ್ಲಿ ಅರ್ಥಪೂರ್ಣ ಕೆಲಸ ಮಾಡುತ್ತಿರುವುದು ಅಭಿನಂದನೀಯ. ಆದರೆ, ಇದೇ ಹೊತ್ತಿನಲ್ಲಿ ಪ್ರಸಾರ / ಮುದ್ರಣದಲ್ಲಿ ಬಳಸುವ ಕನ್ನಡ ಭಾಷೆಯ ಬಗ್ಗೆಯೂ ಅಷ್ಟೇ ಕಾಳಜಿ ವಹಿಸಿದರೆ ತಾವು ಇನ್ನೂ ಹೆಚ್ಚಿನ ಜನರನ್ನು ತಲುಪುವಂತಾಗುತ್ತಿತ್ತು ಎಂದಿದ್ದಾರೆ.

ಅನಗತ್ಯವಾಗಿ ಆಂಗ್ಲ ಪದಗಳನ್ನು ಬಳಸುವುದು ಕನ್ನಡ ಭಾಷಾ ಬೆಳವಣಿಗೆಗೆ ಮಾರಕವಾಗುತ್ತದೆ. ಸಮೂಹ ಮಾಧ್ಯಮವನ್ನೇ ಹೆಚ್ಚಾಗಿ ನಂಬಿರುವ ಜನರು ಮಾಹಿತಿಯ ಜೊತೆಗೆ ಭಾಷೆಯನ್ನು ಕಲಿಯುತ್ತಾರೆ ಎನ್ನುವುದನ್ನು ತಾವು ಅರ್ಥಮಾಡಿಕೊಳ್ಳುವಿರಾಗಿ ಭಾವಿಸುತ್ತೇನೆ ಎಂದಿದ್ದಾರೆ.
ವಿದ್ಯುನ್ಮಾನ ಮಾಧ್ಯಮಗಳು ಬಳಸುವ ಭಾಷೆಯ ಬಗ್ಗೆ ಬಳಸುವ ಪದಪುಂಜಗಳ ಬಗ್ಗೆ ಸಾರ್ವಜನಿಕರಿಂದ ಬಹಳಷ್ಟು ಸಲಹೆಗಳನ್ನು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಧ್ಯಮಗಳ ಪರವಾಗಿ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿಯೇ ಗ್ರಾಹಕರನ್ನು ಕೇಳಿ ಮಾಧ್ಯಮಗಳಲ್ಲಿ ಬಳಸಬಹುದಾದ ಕನ್ನಡ ಸದಭಿರುಚಿಯ ಪದಗಳನ್ನು ಸಂಗ್ರಹಿಸಲಾಗಿದ್ದು ತಮಗೆ ಕಳುಹಿಸಿ ಕೊಡಲಾಗುತ್ತಿದ್ದು ಈ ಪದಗಳನ್ನು ಮುದ್ರಣ / ವಿದ್ಯುನ್ಮಾನ ಮಾಧ್ಯಮಗಳಲ್ಲಿ ಬಳಸುವ ಮೂಲಕ ಕನ್ನಡ ಭಾಷಾ ಬೆಳವಣಿಗೆ, ಕನ್ನಡದ ಅಸ್ಮಿತೆ ಉಳಿಸಿಕೊಳ್ಳಲು ಸಹಕಾರ ನೀಡಬೇಕು ಎಂದು ನಾಗಾಭರಣ ಮನವಿ ಮಾಡಿಕೊಂಡಿದ್ದಾರೆ.












Click it and Unblock the Notifications