Bengaluru Rain: ಸುಡುವ ಸೂರ್ಯ ಉರುಳಿಸುವ ವರುಣ- ಪ್ರಾಣಕ್ಕೆ ಕುತ್ತು ತಂದ ಬೆಂಗಳೂರು ಮರಗಳು
ಬೆಂಗಳೂರು ಮೇ 6: ಬೆಂಗಳೂರಿನಲ್ಲಿ ಮರಗಳು ಮಳೆ ಬಂದರೆ ಸಾಕು ನೆಲಕ್ಕಚ್ಚುತ್ತಿವೆ. ಮಳೆ ಸಂದರ್ಭದಲ್ಲಿ ಏಕಾಏಕಿ ಬೀಸುವ ಗಾಳಿಗೆ ಮರಗಳು ಧರೆಗುರುಳುತ್ತಿವೆ. ಇದರಿಂದ ಸಾಕಷ್ಟು ಹಾನಿಯನ್ನು ಎದುರಿಸುವಂತಾಗುತ್ತಿದೆ. ಪಾಲಿಕೆ ನಿರ್ಲಕ್ಷ್ಯಕ್ಕೆ ಜನ ಹಿಡಿ ಶಾಪ ಹಾಕುತ್ತಿದ್ದಾರೆ.
ಬಿಬಿಎಂಪಿ ಕಾಲ ಕಾಲಕ್ಕೆ ಮರಗಳ ಪರಿಸ್ಥಿತಿ ನೋಡಿ ಅವುಗಳನ್ನು ಕತ್ತರಿಸಬೇಕು. ಆದರೆ ಪಾಲಿಕೆ ನಿರ್ಲಕ್ಷ್ಯ ಜನರನ್ನು ಆತಂಕಕ್ಕೆ ದೂಡಿದೆ. ಹೌದು... ಪಾಲಿಕೆ ನಿರ್ಲಕ್ಷ್ಯ ಜನಸಾಮಾನ್ಯರ ಪ್ರಾಣಕ್ಕೆ ಕುತ್ತು ತಂದಿದೆ. ಕಳೆದ ಹದಿನೈದು ದಿನಗಳಲ್ಲಿ ಬೃಹತ್ ಮರಗಳು ಉರುಳುವ ಎರಡನೇ ಘಟನೆ ನಡೆದಿದ್ದು, ಪ್ರಾಣ ಹೋಗುವವರೆಗೂ ಅಧಿಕಾರಿಗಳು ಅಲರ್ಟ್ ಆಗುವ ಲಕ್ಷಣವೇ ಕಾಣಿಸುತ್ತಿಲ್ಲ.

ಮೊನ್ನೆ ಮಧ್ಯಾಹ್ನದ ಹೊತ್ತು ಮಳೆ ಸುರಿದಾಗ ಹೋಂಡಾ ಕಾರಿನ ಮೇಲೆ ಬೃಹತ್ ಮರವೊಂದು ಬಿದ್ದಿತ್ತು. ಕಾರು ಸಂಪೂರ್ಣ ಜಖಂ ಆಗಿತ್ತು. ಅದೃಷ್ಟವಶಾತ್ ಕಾರಿನಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬೆಂಗಳೂರಿನಲ್ಲಿ ಜೀವನ್‌ಭೀಮನಗರದಲ್ಲಿ ನಿಂತಿದ್ದ ಕಾರಿನ ಮೇಲೆ ಒಣಗಿದ ಗಿಡವೊಂದು ಬಿದ್ದಿದೆ. ಒಂದು ವೇಳೆ ಇದೇ ಮರ ಕಾರು ಚಲಿಸುತ್ತಿದ್ದಾಗ ಬಿದ್ದಿದ್ದರೆ ದೊಡ್ಡ ಅಪಾಯವೇ ಎದುರಿಸಬೇಕಾಗುತ್ತಿತ್ತು.
ಮಳೆ ಗಾಳಿಯಿಂದ ಮರಗಳು ಧರಗೆ ಉರುಳಿ ಬೀಳುವ ಮುನ್ನ ರೆಂಬೆ ಕೊಂಬೆಗಳನ್ನು ಪಾಲಿಕೆ ಪರಿಶೀಲನೆ ಮಾಡಿ ಕತ್ತರಿಸಬೇಕು. ಆದರೆ ಇದಕ್ಕೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸುತ್ತಾರೆ. ಬಿಸಿಲಿನಿಂದ ರಕ್ಷಣೆಗೆ ಇರುವ ಮರಗಳನ್ನು ಕತ್ತರಿಸಲು ಜನ ಅನುಮತಿಸುವುದಿಲ್ಲ. ಅದಾಗ್ಯೂ ನಾವು ಕೆಲ ಅಪಾಯಕಾರಿ ಮರಗಳ ರೆಂಬೆ ಕೊಂಬೆಗಳನ್ನು ಕತ್ತರಿಸುತ್ತೇವೆ ಎನ್ನುತ್ತಾರೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್.
ಈ ಬಗ್ಗೆ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಅಮರೇಶ್, 'ಏಪ್ರಿಲ್, ಮೇ ಬಂದರೆ, ಒಣಗಿದ ಮರಗಳ ಬಗ್ಗೆ ಪರಿಶೀಲನೆ ಮಾಡಬೇಕು. ಆದರೆ ಇದನ್ನು ಮಾಡುವುದಿಲ್ಲ. ಜನಪ್ರಾಣಗಳಿಗೆ ಬೆಲೆ ಇಲ್ಲ. ತುಂಬಾ ಕೆಟ್ಟ ವ್ಯವಸ್ಥೆ ಬಿಬಿಎಂಪಿಯಲ್ಲಿ ಇದೆ' ಎಂದು ದೂರಿದರು.

ನಗರದ ಪ್ರಮುಖ ರಸ್ತೆಗಳಲ್ಲಿ ಮರಗಳು ಸೊರಗಿ ಧರೆಗೆ ಉರುಳುವ ಹಂತವನ್ನು ತಲುಪಿವೆ. ಶೀಘ್ರವೇ ಪಾಲಿಕೆ ಎಚ್ಚೆತ್ತುಕೊಂಡು ಅವುಗಳನ್ನು ತೆರವುಗೊಳಿಸುವ ಕೆಲಸ ಮಾಡಬೇಕಿದೆ. ಇಲ್ಲವಾದಲ್ಲಿ ಮಳೆಗಾಲದಲ್ಲಿ ಅಪಾಯ ಮಾತ್ರ ಕಟ್ಟಿಟ್ಟ ಬುತ್ತಿ.
ಕರ್ನಾಟಕದಲ್ಲಿ ಇಂದು ಮತ್ತು ನಾಳೆಯಾಗುವ ಮುನ್ಸೂಚನೆ
ಹಲವು ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೇಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಮೇ 7 ರಿಂದ 2 ವಾರ ಕಾಲ ಅಂದರೆ ಮೇ 19ರ ವರೆಗೆ ಸಾಧಾರಣದಿಂದ ಭಾರೀ ಮಳೆಯನ್ನು ನಿರೀಕ್ಷಿಸಬಹುದಾಗಿದೆ. ಕೆಲವೆಡೆ ಇಂದು ಮಳೆಯಾಗಲಿದೆ. ಶುಕ್ರವಾರ ಸುರಿದ ಮಳೆ ಬೆಂಗಳೂರಿನಲ್ಲಿ ಹೊಸ ವಾತಾವರಣ ಮೂಡುವಂತೆ ಮಾಡಿದೆ.

ಉಷ್ಣಾಂಶ 2 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗಿದೆ. ರಾಜಧಾನಿ ಅಷ್ಟೇ ಅಲ್ಲ, ದಕ್ಷಿಣ ಒಳನಾಡು ಹಾಗೂ ಕರಾವಳಿಯ ಹಲವೆಡೆ ಮುಂದಿನ 2 ದಿನಗಳ ಕಾಲ ಮಳೆ ಸುರಿಯುವ ಸಾಧ್ಯತೆ ಇದೆ.ಈಗಾಗಲೇ ದಕ್ಷಿಣ ಒಳನಾಡು ಜಿಲ್ಲೆಯ ಹಲವೆಡೆ ಸಾಧಾರಣ ಮಳೆಯಾಗಿದೆ. ಆದರೆ, ಕರಾವಳಿಯ ಬಹುತೇಕ ಕಡೆಗಳಲ್ಲಿ ಮಳೆಯಾಗಿಲ್ಲ.ಮೇ 6 ರಂದು ಚಾಮರಾಜನಗರ, ಮೈಸೂರು ಜಿಲ್ಲೆಗಳ ಕೆಲವೆಡೆ ಮಳೆಯಾಗುವ ಸಾಧ್ಯತೆಯಿದೆ.












Click it and Unblock the Notifications