ನಿಮ್ಮನೆ ಹೆಣ್ಮಕ್ಕಳಿಗೆ ಇದೇ ರೀತಿ ಭಾಷೆ ಬಳಸುತ್ತೀರಿ?: ಬಿಜೆಪಿ ನಾಯಕರಿಗೆ ರಾಮಲಿಂಗಾ ರೆಡ್ಡಿ ಪ್ರಶ್ನೆ
ಬೆಂಗಳೂರು, ಜುಲೈ 03: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂಬ ಆರೋಪ ಬಿಜೆಪಿ ಎನ್.ರವಿಕುಮಾರ್ ಎದುರಿಸುತ್ತಿದ್ದಾರೆ. ಈ ಬಗ್ಗೆ ಅವರು ಸ್ಪಷ್ಟನೆ ನೀಡಿದ ಬೆನ್ನಲ್ಲೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ FIR ದಾಖಲಾಗಿದೆ. ಇತ್ತ ಸಭಾಪತಿಗೆ ಲಿಖಿತ ದೂರು ನೀಡಿ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ. ಇದರ ಬೆನ್ನಲ್ಲೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಬಿಜೆಪಿ ನಾಯಕರ ವರ್ತನೆಗೆ ಕೆಂಡಾಮಂಡಲವಾಗಿದ್ದಾರೆ.
ಬಿಜೆಪಿ ನಾಯಕರ ಅಸಂಸ್ಕೃತಿ ಮತ್ತು ಅನಾಚಾರದ ಹೇಳಿಕೆಗಳಿಗೆ ಮತ್ತೊಂದು ಸೇರ್ಪಡೆಯಾಗಿದೆ. ನಾಚಿಕೆಗೇಡಿನ ವರ್ತನೆ, ಕೊಳಕು ಭಾಷಾ ಬಳಕೆಯ ಪುನರಾವರ್ತನೆ ಯಾಗಿದೆ ಎಂದು ವಿಧಾನಪರಿಷತ್ ಸದಸ್ಯರಾದ ರವಿಕುಮಾರ್ ವಿರುದ್ಧ ಕಿಡಿ ಕಾರಿದ್ದಾರೆ. ರವಿಕುಮಾರ್ ಕಲಬುರಗಿ ಜಿಲ್ಲಾಧಿಕಾರಿಗಳ ಕುರಿತು ಕೆಲವು ತಿಂಗಳುಗಳ ಹಿಂದೆಯಷ್ಟೇ ಅವಹೇಳನಕಾರಿಯಾಗಿ ಮಾತನಾಡಿದ್ದರು. ಮಾನ್ಯ ನ್ಯಾಯಾಲಯವು ಛೀಮಾರಿ ಹಾಕಿದ ನಂತರ ಬೇಷರತ್ ಕ್ಷಮೆ ಕೇಳಿದ್ದರು ಎಂಬುದನ್ನು ಈ ವೇಳೆ ಅವರು ನೆನಪಿಸದಿರು.

ನಿಮ್ಮನೆ ಹೆಣ್ಮಕ್ಕಳಿಗೆ ಈ ರೀತಿ ಭಾಷೆ ಬಳಸುತ್ತೀರಿಯೇ?
ಮತ್ತೊಂದು ಪ್ರಕರಣದಲ್ಲಿ ಸಿ.ಟಿ.ರವಿ ಅವರು ಸದನದಲ್ಲಿ ಮಹಿಳಾ ಮಂತ್ರಿಯವರನ್ನು ಕುರಿತು ಆಡಿದ ಮಾತು ಅಸಹನೀಯ, ಸಂವೇದನಾರಹಿತ, ಸಮಾಜಕ್ಕೆ ಆಘಾತಕಾರಿಯಾದ ನಡವಳಿಕೆಯಾಗಿತ್ತು ಎಂದು ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು. ಈಗ ಮತ್ತೊಮ್ಮೆ ರವಿಕುಮಾರ್ ಅವರು ರಾಜ್ಯದ ಮುಖ್ಯ ಕಾರ್ಯದರ್ಶಿಗಳ ಕುರಿತ ಹೇಳಿಕೆ? ಸರ್ಕಾರವನ್ನು ನಡೆಸಲು ಶ್ರಮಿಸುವ ಮಹಿಳಾ ಅಧಿಕಾರಿ ಅದರಲ್ಲೂ ಅತ್ಯುನ್ನತ ಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುವವರ ಬಗ್ಗೆ ಮಾತನಾಡಿದ್ದಾರೆ. ಮಹಿಳಾ ಅಧಿಕಾರಿ ಬಗ್ಗೆ ಮಾತನಾಡುವಾಗ ಕನಿಷ್ಠ ಸೌಜನ್ಯವೂ ತೋರದೆ, ತಮ್ಮ ಮನೆಯ ಹೆಣ್ಣುಮಕ್ಕಳಿಗಾದರೆ ಈ ರೀತಿ ಭಾಷೆ ಬಳಸುತ್ತೇವೆಯೇ ಎಂದು ಯೋಚಿಸುವ ಔದಾರ್ಯವೂ ಇಲ್ಲದ ಕೊಳಕು ಮನಸ್ಸಿನ ಮನುಷ್ಯ ಇವರು.
ಹುಟ್ಟು ಗುಣ ಸುಟ್ಟರು ಹೋಗಲ್ಲ ಎಂಬ ಗಾದೆ ಬಿ.ಜೆ.ಪಿ ನಾಯಕರಿಗೆ ಅನ್ವರ್ಥ ಅನ್ನಿಸುತ್ತದೆ. ಬಿ.ಜೆ.ಪಿ, ಆರ್ ಎಸ್ ಎಸ್ , ವಿಶ್ವ ಹಿಂದೂ ಪರಿಷತ್ ನವರು ಅವರ ಪಕ್ಷದ ಪದಾಧಿಕಾರಿಗಳಿಗೆ/ ನಾಯಕರುಗಳಿಗೆ ನಾಲಿಗೆ ಬಿಗಿ ಹಿಡಿದು ಮಾತನಾಡುವುದಕ್ಮೆ ತರಬೇತಿ ನೀಡಲು ಮರೆತಿರಬೇಕು. ಅದರಲ್ಲೂ ಮಹಿಳೆಯರ ಕುರಿತು ಮಾತನಾಡುವಾಗ ಸೌಜನ್ಯ, ಸಂಸ್ಕೃತಿ, ಆಚಾರ ವಿಚಾರ ಯಾವುದೂ ಇಲ್ಲದೆ ಅನಾಗರೀಕ, ಅಪಾರ್ಥ ಕಲ್ಪಿಸುವ ಭಾಷೆ ಬಳಸುವುದನ್ನು ಕಲಿಸಿರಬೇಕು ಎಂದು ಟೀಕಿಸಿದರು.
ಮಾತು ಮಾತಿಗೆ ಭಾರತ ಮಾತೆಗೆ ಜೈಕಾರ ಹಾಕುವ ಇವರು ಬೂಟಾಟಿಕೆಯವರು, ನಮ್ಮೊಡನೆ ಇರುವ ಹೆಣ್ಣುಮಕ್ಕಳನ್ನು ಗೌರವಿಸುವುದೇ ಭಾರತ ಮಾತೆಗೆ ನಾವು ಸಲ್ಲಿಸುವ ನಿಜವಾದ ಗೌರವ. ಆದರೆ ಇದನ್ನು ಬಿ.ಜೆ.ಪಿ ಅವರಿಂದ ನಿರೀಕ್ಷಿಸಬೇಡಿ, ನಾವು ಭಾಷಣಕ್ಕೆ ಮಾತ್ರ ಸೀಮಿತ ಎಂಬುದನ್ನು ಜಗತ್ತಿಗೆ ಸಾರಲು ಹೊರಟಿರುವ ಇಂತಹ ಮನಸ್ಥಿತಿಯ ನಾಯಕರುಗಳಿಗೆ ನನ್ನ ಧಿಕ್ಕಾರ ಎಂದು ಅವರು ವಾಗ್ದಾಲಿ ನಡೆಸಿದರು.

ಎನ್.ರವಿಕುಮಾರ್ ಹೇಳಿದ್ದೇನು?
ಸರ್ಕಾರದ ಸಿಎಸ್ ಶಾಲಿನಿ ರಜನೀಶ್ ಅವರು ರಾತ್ರಿಯಿಡಿ ಮತ್ತು ರಾಜ್ಯ ಸರ್ಕಾಕ್ಕಾಗಿ ಹಾಗೂ ಇಡೀ ದಿನ ಮುಖ್ಯಮಂತ್ರಿಗಾಗಿ ಕೆಲಸ ಮಾಡುತ್ತಾರೆ ಎಂದು ಹೇಳಿದ್ದಾರೆ ಎನ್ನಲಾಗಿದೆ. ಇದರ ವಿರುದ್ಧ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಕಾಂಗ್ರೆಸ್ ಅನೇಕ ನಾಯಕರು ಕಂಡವಾಗಿದ್ದಾರೆ.
ಮೈಸೂರಿನ ಒಡನಾಡಿ ಸಂಸ್ಥೆಯ ಪರಶುರಾಮ್ ಎಂ.ಎಲ್ ಮತ್ತು ಸ್ಟ್ಯಾನ್ಲಿ ಕೆ.ವಿ. ಅವರು ಪೊಲೀಸ್ ಮಹಾನಿರ್ದೇಶಕರಿಗೆ ಹಾಗೂ ರಾಜ್ಯ ಮಹಿಳಾ ಆಯೋಗಕ್ಕೆ ಪತ್ರ ಬರೆದು ರವಿಕುಮಾರ್ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ. ಇದರ ಬೆನ್ನಲ್ಲೆ ಅವರ ರವಿಕುಮಾರ್ ಅವರ ಮೇಲೆ ಎಫ್‌ಆರ್ ದಾಖಲಾಗಿದೆ.
ನಾನು ಆ ರೀತಿ ಹೇಳಿಕೆ ನೀಡಿಲ್ಲ: ರವಿಕುಮಾರ್ ಸ್ಪಷ್ಟನೆ
ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಬಿಜೆಪಿ ನಾಯಕ ಎನ್ ರವಿಕುಮಾರ್ ಅವರು,
ಸಿಎಸ್ ವಿರುದ್ಧ ನಾನು ಯಾವುದೇ ಅವಹೇಳಕಾರಿ ಹೇಳಿಕೆ ನೀಡಿಲ್ಲ. ಮಾಧ್ಯಮಗಳು ಹಾಗೂ ಸಾಮಾಜಿಕ ಮಾಧ್ಯಮದಲ್ಲಿ ನಾನು ಶಾಲಿನಿ ರಜನೀಶ್ ಅವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದೇನೆ ಎಂದು ಹೇಳಿರುವುದು ಆಘಾತವುಂಟು ಮಾಡಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.












Click it and Unblock the Notifications