ಪ್ರಯಾಣಿಕರೇ ಗಮನಿಸಿ; ಬೆಂಗಳೂರಿಗೆ ಬರುವ ವಂದೇ ಭಾರತ್ ರೈಲುಗಳ ವೇಗ ಹೆಚ್ಚಳ
ಬೆಂಗಳೂರು, ಜನವರಿ 29: ಉದ್ಯಾನ ನಗರಿ ಬೆಂಗಳೂರಿಗೆ ರೈಲುಗಳ ಮೂಲಕ ಆಗಮಿಸುವ ಪ್ರಯಾಣಿಕರಿಗೆ ಪ್ರಮುಖ ಮಾಹಿತಿಯೊಂದಿದೆ. ನೈಋತ್ಯ ರೈಲ್ವೆ ಬೆಂಗಳೂರು ವಿಭಾಗ ನಡೆಸಿದ ಪರೀಕ್ಷೆ ಯಶಸ್ವಿಯಾಗಿದ್ದು, ರೈಲ್ವೆ ಸುರಕ್ಷತಾ ಆಯುಕ್ತರು ನಗರದಿಂದ ಹೊರಡುವ ರೈಲುಗಳ ವೇಗವನ್ನು ಹೆಚ್ಚಿಸಲು ಒಪ್ಪಿಗೆ ನೀಡಿದ್ದಾರೆ. ಇದರಿಂದಾಗಿ ಸಂಚಾರದ ಅವಧಿ ಕಡಿಮೆಯಾಗಲಿದೆ.
ಬೆಂಗಳೂರು-ಜೋಲಾರ್‌ಪಟ್ಟಿ ನಡುವೆ ರೈಲುಗಳು ಗಂಟೆಗೆ 130 ಕಿ. ಮೀ. ವೇಗದಲ್ಲಿ ಸಂಚಾರವನ್ನು ನಡೆಸಲು ರೈಲ್ವೆ ಸುರಕ್ಷತಾ ಆಯುಕ್ತರು ಒಪ್ಪಿಗೆ ನೀಡಿದ್ದಾರೆ. ಇದರಿಂದಾಗಿ ಸಂಪೂರ್ಣ ನೈಋತ್ಯ ರೈಲ್ವೆ ವಲಯದಲ್ಲಿ ಈ 144 ಕಿ. ಮೀ. ಮಾರ್ಗ ಅತ್ಯಂತ ವೇಗವಾದ ಮಾರ್ಗ ಎಂದು ಹೆಗ್ಗಳಿಕೆ ಪಡೆದಿದೆ.

ಸದ್ಯ ಈ ಮಾರ್ಗದಲ್ಲಿ ಗಂಟೆಗೆ 110 ಕಿ. ಮೀ. ವೇಗದಲ್ಲಿ ರೈಲುಗಳು ಸಂಚಾರ ನಡೆಸುತ್ತಿವೆ. ಗಂಟೆಗೆ 130 ಕಿ. ಮೀ. ವೇಗದಲ್ಲಿ ರೈಲುಗಳು ಸಂಚಾರ ನಡೆಸುವಂತೆ ಡಿಸೆಂಬರ್ 5, 2024ರಲ್ಲಿ ನಡೆಸಿದ ಪರೀಕ್ಷೆ ಯಶಸ್ವಿಯಾಗಿದೆ. ಶೀಘ್ರವೇ ಈ ಮಾರ್ಗದಲ್ಲಿ ರೈಲುಗಳು ಈ ವೇಗದಲ್ಲಿ ಸಂಚಾರ ನಡೆಸಲಿವೆ.
ಅತಿ ದಟ್ಟಣೆಯ ಮಾರ್ಗವಾಗಿದೆ: ಬೆಂಗಳೂರು-ಜೋಲಾರ್‌ಪಟ್ಟಿ ಕರ್ನಾಟಕದ ಅತಿ ಹೆಚ್ಚು ಸಂಚಾರ ದಟ್ಟಣೆಯ ಮಾರ್ಗದಲ್ಲಿ ಒಂದು. 50 ಜೋಡಿ ಎಕ್ಸ್‌ಪ್ರೆಸ್ ರೈಲು, 20 ಜೋಡಿ ಪ್ಯಾಸೆಂಜರ್ ರೈಲು, ಮೂರು ಜೋಡಿ ವಂದೇ ಭಾರತ್ ರೈಲು ಮತ್ತು 1 ಶತಾಬ್ದಿ ರೈಲು ಈ ಮಾರ್ಗದಲ್ಲಿ ಸಂಚಾರವನ್ನು ನಡೆಸುತ್ತದೆ.
ಅಧಿಕಾರಿಗಳ ಪ್ರಕಾರ ರೈಲ್ವೆ ಸುರಕ್ಷತಾ ಆಯುಕ್ತರು ಬೆಂಗಳೂರು-ಜೋಲಾರ್‌ಪಟ್ಟಿ ಮಾರ್ಗದಲ್ಲಿ ಗಂಟೆಗೆ 130 ಕಿ. ಮೀ. ವೇಗದಲ್ಲಿ ರೈಲು ಓಡಿಸಲು ಹಸಿರು ನಿಶಾನೆಯನ್ನು ತೋರಿಸಿದ್ದಾರೆ. ರೈಲು ಓಡಿಸಲು ಹುಬ್ಬಳ್ಳಿಯಲ್ಲಿರುವ ನೈಋತ್ಯ ರೈಲ್ವೆ ಕೇಂದ್ರ ಕಛೇರಿ ಒಪ್ಪಿಗೆ ನೀಡುವುದು ಬಾಕಿ ಇದೆ.
ಒಂದು ವಾರದಲ್ಲಿ ಈ ಮಾರ್ಗದಲ್ಲಿ ಗಂಟೆಗೆ 130 ಕಿ. ಮೀ. ವೇಗದಲ್ಲಿ ರೈಲುಗಳ ಸಂಚಾರ ಆರಂಭವಾಗಲಿದೆ. ಇದರಿಂದಾಗಿ ಪ್ರತಿ ರೈಲಿನ ಸಂಚಾರದ ಅವಧಿಯಲ್ಲಿ 8 ನಿಮಿಷ ಉಳಿತಾಯವಾಗಲಿದೆ. ಮೊದಲ ಹಂತದಲ್ಲಿ ಬೆಂಗಳೂರು-ಚೆನ್ನೈ, ಮಧುರೈ-ಬೆಂಗಳೂರು ಕಂಟೋನ್ಮೆಂಟ್ ನಡುವಿನ ವಂದೇ ಭಾರತ್ ರೈಲುಗಳ ವೇಗವನ್ನು ಹೆಚ್ಚಳ ಮಾಡಲಾಗುತ್ತದೆ.
ಅಲ್ಲದೇ ಕೆಎಸ್ಆರ್ ಬೆಂಗಳೂರು-ಎಂಜಿಆರ್ ಚೆನ್ನೈ ನಡುವೆ ಸಂಚಾರ ನಡೆಸುವ ಶತಾಬ್ದಿ ರೈಲಿನ ವೇಗವನ್ನು ಸಹ ಹೆಚ್ಚಳ ಮಾಡಲಾಗುತ್ತದೆ. ಮುಂದಿನ ಹಂತದಲ್ಲಿ ಎಲ್‌ಹೆಚ್‌ಬಿ ಕೋಚ್‌ಗಳನ್ನು ಹೊಂದಿರುವ ಇತರ ರೈಲುಗಳ ವೇಗವನ್ನು ಹೆಚ್ಚಿಸಲಾಗುತ್ತದೆ. ಇದರಿಂದಾಗಿ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ರೈಲು ಗಂಟೆಗೆ 130 ಕಿ. ಮೀ. ವೇಗದಲ್ಲಿ ಸಂಚಾರ ನಡೆಸಿದರೂ ಸಹ ತಡೆದುಕೊಳ್ಳುವ ಸಾಮರ್ಥ್ಯವನ್ನು ಹಳಿಗಳು ಪಡೆದಿವೆ. ಆದರೆ ಎಲ್ಲಾ ರೈಲುಗಳನ್ನು ಈ ಮಾದರಿಯ ವೇಗದಲ್ಲಿ ಓಡಿಸಲು ಸಾಧ್ಯವಿಲ್ಲ. ಬೋಗಿಗಳ ಸಂಯೋಜನೆ ನೋಡಿಕೊಂಡು ರೈಲುಗಳನ್ನು ಓಡಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಧಿಕಾರಿಗಳ ಮಾಹಿತಿ ಪ್ರಕಾರ ಬೆಂಗಳೂರು-ಜೋಲಾರ್‌ಪಟ್ಟಿ ಮಾರ್ಗದಲ್ಲಿ ರೈಲುಗಳ ವೇಗ ಹೆಚ್ಚಳವಾದರೆ ಬೆಂಗಳೂರು-ಚೆನ್ನೈ ನಡುವಿನ ವಂದೇ ಭಾರತ್ ರೈಲುಗಳ ಸಂಚಾರದ ಅವಧಿ 25 ನಿಮಿಷ ಕಡಿಮೆಯಾಗಿ, 4 ಗಂಟೆಗೆ ಇಳಿಕೆಯಾಗಲಿದೆ. ಇದೇ ಮಾದರಿಯಲ್ಲಿ ಈ ಮಾರ್ಗದ ಶತಾಬ್ದಿ ರೈಲಿನ ಸಂಚಾರದ ಅವಧಿ ಸುಮಾರು 20 ನಿಮಿಷ ಕಡಿಮೆಯಾಗಲಿದೆ.
2023ರಲ್ಲಿ ಜೋಲಾರ್‌ಪಟ್ಟಿ-ಚೆನ್ನೈ ನಡುವಿನ ಮಾರ್ಗದಲ್ಲಿ ರೈಲನ್ನು ಗಂಟೆಗೆ 130 ಕಿ. ಮೀ. ವೇಗದಲ್ಲಿ ಓಡಿಸುವ ಕಾಮಗಾರಿ ಪೂರ್ಣಗೊಳಿಸಲಾಗಿತ್ತು. ಈ ಮಾರ್ಗದಲ್ಲಿ ರೈಲು ಸಂಚಾರವೂ ಆರಂಭವಾಗಿತ್ತು. ಈಗ ಬೆಂಗಳೂರು-ಜೋಲಾರ್‌ಪಟ್ಟಿ ಮಾರ್ಗದಲ್ಲಿ ರೈಲುಗಳ ವೇಗ ಹೆಚ್ಚಿಸುವ ಕಾಮಗಾರಿ ಪೂರ್ಣಗೊಂಡು ಪ್ರಾಯೋಗಿಕ ಪರೀಕ್ಷೆ ನಡೆಸಿ, ವಾಣಿಜ್ಯ ಸಂಚಾರಕ್ಕೆ ಹಸಿರು ನಿಶಾನೆ ಸಿಕ್ಕಿದೆ.












Click it and Unblock the Notifications