ಬೆಂಗಳೂರಿಗೆ ಉಪರಾಷ್ಟ್ರಪತಿ ಭೇಟಿ: ವಾಹನ ಸವಾರರೇ ಈ ರಸ್ತೆಗಿಳಿಯುವ ಮುನ್ನ ಗಮನಿಸಿ
ಓಲ್ಡ್ ಏರ್ ಪೋರ್ಟ್ ರಸ್ತೆ, ರಾಜಭವನ ರಸ್ತೆ, ಇನ್‌ಫೆಂಟ್ರಿ ರಸ್ತೆ, ಕಬ್ಬನ್ ರಸ್ತೆ, ಕ್ವೀನ್ಸ್ ರಸ್ತೆ ಮತ್ತು ಎಂಜಿ ರಸ್ತೆಗಳಲ್ಲಿ ವಾಹನ ನಿರ್ಬಂಧ ವಿಧಿಸಲಾಗಿದೆ
ಬೆಂಗಳೂರು, ಫೆಬ್ರವರಿ. 28: ಉಪರಾಷ್ಟ್ರಪತಿ ಜಗದೀಪ್ ಧನಕರ್ ಮಂಗಳವಾರ ಸಂಜೆ ಬೆಂಗಳೂರಿಗೆ ಬರುತ್ತಿದ್ದು, ಈ ನಿಟ್ಟಿನಲ್ಲಿ ನಗರ ಸಂಚಾರ ಪೊಲೀಸ್ ಇಲಾಖೆ ವಾಹನ ಸವಾರರಿಗೆ ಸುಗಮ ವಾಹನ ಸಂಚಾರಕ್ಕೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಸಿಲಿಕಾನ್ ಸಿಟಿಯ ಬೆಂಗಳೂರಿನ ಹಲವು ರಸ್ತೆಗಳಲ್ಲಿ ಸಂಚಾರ ನಿರ್ಬಂಧ ವಿಧಿಸಲಾಗಿದೆ.
ಸಂಚಾರಿ ಪೊಲಿಸರು ಹೊರಡಿಸಿರುವ ಮಾರ್ಗಸೂಚಿಯಲ್ಲಿ ಓಲ್ಡ್ ಏರ್ ಪೋರ್ಟ್ ರಸ್ತೆ, ರಾಜಭವನ ರಸ್ತೆ, ಇನ್‌ಫೆಂಟ್ರಿ ರಸ್ತೆ, ಕಬ್ಬನ್ ರಸ್ತೆ, ಕ್ವೀನ್ಸ್ ರಸ್ತೆ ಮತ್ತು ಎಂಜಿ ರಸ್ತೆಗಳಲ್ಲಿ ವಾಹನ ನಿರ್ಬಂಧ ವಿಧಿಸಲಾಗಿದೆ. ಮಂಗಳವಾರ ಸಂಜೆ 4 ರಿಂದ ಸಂಜೆ 6 ಗಂಟೆಯವರೆಗೆ ವಾಹನ ಸವಾರರು, ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸುವಂತೆ ಸಂಚಾರಿ ಇಲಾಖೆಯು ತಮ್ಮ ಸಂಚಾರ ಸಲಹೆಯಲ್ಲಿ ಮನವಿ ಮಾಡಿದೆ.

ಗೋಕುಲ ಶಿಕ್ಷಣ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ದಿವಂಗತ ಡಾ. ಎಂ.ಎಸ್. ರಾಮಯ್ಯ ಅವರ ಜನ್ಮ ಶತಮಾನೋತ್ಸವ ಮಾರ್ಚ್ 1ರಂದು (ಬುಧವಾರ) ನ್ಯೂ ಬಿಇಎಲ್ ರಸ್ತೆಯ ಎಂ.ಎಸ್. ರಾಮಯ್ಯ ನಗರದ ಕಾಲೇಜಿನ ಜ್ಞಾನಗಂಗೋತ್ರಿ ಕ್ಯಾಂಪಸ್‌ನಲ್ಲಿ ನಡೆಯಲಿದೆ. ಶತಮಾನೋತ್ಸವ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ಸೇರಿ ಹಲವರು ನಾಯಕರು ಭಾಗಿಯಾಗಲಿದ್ದಾರೆ.
ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ತಮ್ಮ ಪತ್ನಿ ಸುದೇಶ್ ಧನಕರ್ ಅವರೊಂದಿಗೆ ಸೋಮವಾರ ಡೆನ್ಮಾರ್ಕ್‌ನ ಕ್ರೌನ್ ಪ್ರಿನ್ಸ್ ಫ್ರೆಡ್ರಿಕ್ ಆಂಡ್ರೆ ಹೆನ್ರಿಕ್ ಕ್ರಿಶ್ಚಿಯನ್ ಮತ್ತು ಕ್ರೌನ್ ಪ್ರಿನ್ಸೆಸ್ ಮೇರಿ ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಿದ್ದರು. ಈ ವೇಳೆ "ಹಂಚಿಕೊಂಡ ಪ್ರಜಾಪ್ರಭುತ್ವ ಸಂಪ್ರದಾಯಗಳು ಮತ್ತು ರಾಷ್ಟ್ರಗಳ ನಡುವಿನ ಸ್ನೇಹ ಸಂಬಂಧ" ಕುರಿತು ಚರ್ಚೆ ನಡೆಸಿದ್ದರು.

ಇನ್ನು, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ) ಈ ಪ್ರದೇಶದಲ್ಲಿ ಕೆಲವು ಕಾಮಗಾರಿಗಳನ್ನು ನಡೆಸುತ್ತಿರುವುದರಿಂದ ಸಿದ್ಧಾಪುರ - ತೂಬರಹಳ್ಳಿ ಸುತ್ತಮುತ್ತ ಸಂಚಾರ ಅಡಚಣೆ ಉಮಟಾಗಲಿದೆ. ಈ ಪ್ರದೇಶದಲ್ಲಿ ನಿಧಾನಗತಿಯ ಸಂಚಾರ ವ್ಯವಸ್ಥೆ ಇರಲಿದೆ ಎಂದು ವೈಟ್‌ಫೀಲ್ಡ್ ಸಂಚಾರ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ವಾಹನ ಸವಾರರು ಮತ್ತು ಪ್ರಯಾಣಿಕರು ಸುಚನೆಗೆ ಅದಕ್ಕೆ ತಕ್ಕಂತೆ ಯೋಜನೆ ರೂಪಿಸುವಂತೆ ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ.












Click it and Unblock the Notifications