Breaking; ಬಿಬಿಎಂಪಿ ಕಸದ ಲಾರಿಗಳ ಮೇಲೆ ದಂಡ ಪ್ರಯೋಗಿಸಿದ ಪೊಲೀಸರು
ಬೆಂಗಳೂರು, ಏಪ್ರಿಲ್ 20; ಬೆಂಗಳೂರು ನಗರದ ಸಂಚಾರಿ ಪೊಲೀಸರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಸ ಸಾಗಣೆ ಲಾರಿಗಳ ಮೇಲೆ ದಂಡ ಪ್ರಯೋಗ ಮಾಡುತ್ತಿದ್ದಾರೆ. ಇದಕ್ಕಾಗಿಯೇ ವಿಶೇಷ ಕಾರ್ಯಾಚರಣೆ ಆರಂಭಿಸಿದ್ದಾರೆ.
ಬುಧವಾರ ಪೂರ್ವ ವಲಯದ ಸಂಚಾರಿ ಪೊಲೀಸರು ಬಿಬಿಎಂಪಿ ಕಸ ವಿಲೇವಾರಿ ಮಾಡುವ ಲಾರಿಗಳ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡರು. ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡುವ ಚಾಲಕರಿಗೆ ದಂಡವನ್ನು ವಿಧಿಸಿದರು.
ಲಾರಿಗಳ ಚಾಲಕರು ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಸೂಚನೆ ನೀಡಿದರು. ಸುರಕ್ಷಿತ ಚಾಲನೆ ಮಾಡುವ ಸಂಬಂಧ ಅರಿವು ಮೂಡಿಸುವ ಕಾರ್ಯಕ್ರಮವನ್ನು ಪೊಲೀಸರು ಹಮ್ಮಿಕೊಂಡಿದ್ದಾರೆ.

ಬೆಂಗಳೂರು ನಗರದಲ್ಲಿ ಕಸ ಸಾಗಣೆ ಮಾಡುವ ಲಾರಿಗಳಿಂದ ಸರಣಿ ಅಪಘಾತವಾಗುತ್ತಿದೆ. ಈ ಲಾರಿಗಳ ಫಿಟ್ನೆಸ್ ಪ್ರಮಾಣ ಪತ್ರವಿಲ್ಲ. ಚಾಲಕರು ಸಂಚಾರಿ ನಿಯಮ ಪಾಲನೆ ಮಾಡುವುದಿಲ್ಲ ಎಂದು ಜನರು ಸಹ ದೂರು ನೀಡುತ್ತಿದ್ದಾರೆ.
ಮಂಗಳವಾರ ಬಿಬಿಎಂಪಿಯ ಮುಖ್ಯ ಆಯುಕ್ತ ಗೌರವ್ ಗುಪ್ತ ಬಿಬಿಎಂಪಿ ಕಸದ ಲಾರಿಗಳ ಕುರಿತು ತನಿಖೆ ನಡೆಸಲು ಆದೇಶ ಹೊರಡಿಸಿದ್ದರು. ಕಸ ಸಾಗಣೆ ಮಾಡುವ ಲಾರಿಗಳ ಫಿಟ್ನೆಸ್ ಸೇರಿದಂತೆ ವಿವಿಧ ವಿಚಾರಗಳ ಕುರಿತು ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ತಿಳಿಸಿದ್ದರು.
ಲಾರಿಗಳ ಫಿಟ್ನೆಸ್, ಸ್ಪೀಡ್ ಬ್ರೇಕರ್ ಅಳವಡಿಕೆ ಮಾಡಲಾಗಿದೆಯೇ?, ಲಾರಿಗಳು ಸಂಚಾರಕ್ಕೆ ಯೋಗ್ಯವೇ? ಮುಂತಾದ ವಿಚಾರಗಳ ಕುರಿತು ವಿವರವಾದ ತನಿಖೆ ನಡೆಯಲಿದೆ. ಈ ತನಿಖಾ ವರದಿ ಬಂದ ಬಳಿಕ ಮುಂದಿನ ಕ್ರಮಗಳನ್ನು ಬಿಬಿಎಂಪಿ ಕೈಗೊಳ್ಳಲಿದೆ.
ಈ ದಿನ ಬಿ.ಬಿ.ಎಂ.ಪಿ. ಕಸ ವಿಲೇವಾರಿ ಮಾಡುವ ವಾಹನಗಳ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡು ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡುವ ಚಾಲಕರುಗಳಿಗೆ ದಂಡವನ್ನು ವಿದಿಸುವ ಜೊತೆಗೆ ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವ ಹಾಗೂ ಸುರಕ್ಷಿತ ಚಾಲನೆ ಮಾಡುವ ಸಂಬಂಧ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. pic.twitter.com/ESiaWPxXmf
— DCP Traffic East (@DCPTrEastBCP) April 20, 2022
ಬಿಬಿಎಂಪಿ ಕಸದ ಲಾರಿಗೆ ಬಲಿಯಾಗುವವ ಸಂಖ್ಯೆ ನಗರದಲ್ಲಿ ಹೆಚ್ಚಾಗುತ್ತಿದೆ. ಸೋಮವಾರ ರಾತ್ರಿ ನಾಯಂಡಹಳ್ಳಿ ಬಳಿ ಎಸ್‌ಬಿಐ ಬ್ಯಾಂಕ್ ಉದ್ಯೋಗಿಯೊಬ್ಬರು ಕಸದ ಲಾರಿ ಡಿಕ್ಕಿ ಹೊಡೆದು ಮೃತಪಟ್ಟಿದ್ದರು. ಈ ಹಿನ್ನಲೆಯಲ್ಲಿ ಸಂಚಾರಿ ಪೊಲೀಸರು ಸಹ ಲಾರಿಗಳ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದಾರೆ.












Click it and Unblock the Notifications